ಸಾರಾಂಶ
ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ
ಕನ್ನಡಪ್ರಭ ವಾರ್ತೆ ಗಂಗಾವತಿದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷವೇ ಗ್ಯಾರಂಟಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು. ತಾಲೂಕಿನ ಮರಳಿ ಗ್ರಾಮದಲ್ಲಿ ಆಯೋಜಿಸಿದ್ದ ಮರಳಿ ಜಿಪಂ ವ್ಯಾಪ್ತಿಯ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಬಂದ ನಂತರ ಆಡಳಿತ ನಡೆಸಿರುವ ಕಾಂಗ್ರೆಸ್ ದೇಶದ ಪ್ರತಿಯೊಂದು ರಾಜ್ಯದಲ್ಲೂ ಕೃಷಿ, ನೀರಾವರಿ, ರಸ್ತೆ, ಶಿಕ್ಷಣ, ಉದ್ಯೋಗ, ಕೈಗಾರಿಕೆಗಳ ಸ್ಥಾಪನೆ ಮಾಡುವ ಮೂಲಕ ಅಭಿವೃದ್ಧಿ ಮತ್ತು ಜನರ ಜೀವನಕ್ಕೆ ಆಧಾರವಾಗಿ ಕೆಲಸ ಮಾಡಿದೆ. 60 ವರ್ಷದ ಕಾಂಗ್ರೆಸ್ ಆಡಳಿತದಿಂದಾಗಿ ಇಂದು ದೇಶದ ಜನರು ಸುರಕ್ಷಿತವಾಗಿ ಜೀವನ ನಡೆಸುತ್ತಿದ್ದಾರೆ. ಪ್ರತಿಯೊಂದು ಬಡ ಕುಟುಂಬವನ್ನು ಗುರುತಿಸಿ ಅವರಿಗೆ ಆರ್ಥಿಕ ಸಹಾಯ ಮಾಡುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವೆಂಬುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳೇ ಸಾಕ್ಷಿಯಾಗಿವೆ. ಪ್ರತಿಯೊಬ್ಬರು ನಮ್ಮ ಪಕ್ಷದ ಅಭ್ಯರ್ಥಿ ರಾಜಶೇಖರ ಹಿಟ್ನಾಳ್‌ಗೆ ಮತ ನೀಡಬೇಕು ಎಂದು ಮನವಿ ಮಾಡಿದರು.ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಮಾತನಾಡಿ, ರಾಜ್ಯದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಐದು ತಿಂಗಳಲ್ಲಿ ಐದು ಗ್ಯಾರಂಟಿಗಳನ್ನು ಮನೆಗಳಿಗೆ ತಲುಪಿಸುವ ಕೆಲಸ ಮಾಡಿದೆ. ಉಚಿತ ಬಸ್, ಉಚಿತ ವಿದ್ಯುತ್, ಮಹಿಳೆಯರಿಗೆ ₹2000, ನಿರುದ್ಯೋಗಿ ಯುವಕರಿಗೆ ₹3000, ಕುಟುಂಬಕ್ಕೆ ಹೆಚ್ಚುವರಿಗೆ ಐದು ಕೆಜಿ ಅಕ್ಕಿ ನೀಡಿ ನುಡಿದಂತೆ ನಡೆದಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥರೆಡ್ಡಿ, ಮಾಜಿ ಉಪಾಧ್ಯಕ್ಷ ಬಸವರಾಜಪ್ಪ ಸಿದ್ಧಾಪುರ, ಮಾಜಿ ಸದಸ್ಯ ಹನುಮೇಶ ನಾಯಕ, ತಾಪಂ ಮಾಜಿ ಅಧ್ಯಕ್ಷ ಮಹ್ಮದ್‌ರಫಿ ಮತ್ತಿತರರು ಮಾತನಾಡಿದರು.ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಬಸವರಾಜಸ್ವಾಮಿ, ಶೈಲಜಾ ಹಿರೇಮಠ, ಕೆ.ಎನ್. ಪಾಟೀಲ್, ರಮೇಶ ಕುಲಕರ್ಣಿ, ರಾಮಣ್ಣ ನಾಯಕ, ಶರಣಬಸವರಾಜ, ಶರಣೇಗೌಡ, ತಾಪಂ ಮಾಜಿ ಸದಸ್ಯ ಫಕೀರಪ್ಪ, ಯಂಕೋಬ ಮೇಲಸಕ್ರಿ, ಹುಲಗಪ್ಪ, ಮುಖಂಡರಾದ ಮನ್ನೆ ಕೃಷ್ಣಮೂರ್ತಿ, ರೆಡ್ಡಿ ವೀರರಾಜ, ಸುಬ್ರಮಣ್ಯ ಪ್ರಗತಿನಗರ, ಭಾಸ್ಕರ್‌ರಾವ್, ಪ್ರಸಾದ ಕಲ್ಗುಡಿ ಸೇರಿದಂತೆ ಮತ್ತಿತರರಿದ್ದರು. ಚಿಕ್ಕಜಂತಕಲ್, ಮರಳಿ, ಶ್ರೀರಾಮನಗರ, ಜಂಗಮರ ಕಲ್ಗುಡಿ, ಡಣಾಪುರ, ಹೊಸಕೇರಿ ಗ್ರಾಪಂ ವ್ಯಾಪ್ತಿಯ ಕಾರ್ಯಕರ್ತರು, ಮತದಾರರು ಇದ್ದರು.