ಸಾರಾಂಶ
ಚನ್ನಪಟ್ಟಣ: ಚನ್ನಪಟ್ಟಣ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಕೆಗೂ ಮುನ್ನ ಗುರುವಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರು, ಕಾಂಗ್ರೆಸ್ ನಾಯಕರೊಂದಿಗೆ ಬೃಹತ್ ಮೆರವಣಿಗೆಯೊಂದಿಗೆ ಕಾಂಗ್ರೆಸ್ ಶಕ್ತಿ ಪ್ರದರ್ಶಿಸಿತು.ರಾಮನಗರ ಜಿಲ್ಲಾ ಉಸ್ತುವಾರಿ ರಾಮಲಿಂಗಾರೆಡ್ಡಿ, ಸಚಿವರಾದ ಬೈರತಿ ಸುರೇಶ್, ಡಾ.ಸುಧಾಕರ್, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಕಾಂಗ್ರೆಸ್ ಕಾರ್ಯಾಧ್ಯಕ್ಷ ವಿನಯ್‌ಕುಮಾರ್ ಸೊರಕೆ, ಶಾಸಕರಾದ ಬಾಲಕೃಷ್ಣ, ಶ್ರೀನಿವಾಸ್, ಡಾ.ರಂಗನಾಥ್, ಇಕ್ಬಾಲ್ ಹುಸೇನ್, ವಿಧಾನಪರಿಷತ್ ಸದಸ್ಯರಾದ ಎಸ್. ರವಿ, ಪುಟ್ಟಣ್ಣ, ಮಾಜಿ ಶಾಸಕ ಅಶ್ವತ್ಥ್ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಸಚಿವರು ಹಾಗೂ ಶಾಸಕರ ದಂಡೇ ಯೋಗೇಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಹಾಜರಿತ್ತು.
ನಗರದ ಮಂಗಳವಾರಪೇಟೆಯ ಬಸವನಗಡಿಯ ಬಳಿಯಿಂದ ತಾಲೂಕು ಕಚೇರಿವರೆಗೆ ಕಾಂಗ್ರೆಸ್ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಿತು. ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರನ್ನು ತಾಲೂಕು ಕಚೇರಿವರೆಗೆ ಕರೆತರಲಾಯಿತು.ಈ ವೇಳೆ ರಸ್ತೆಯುದ್ಧಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಿ.ಪಿ.ಯೋಗೇಶ್, ಡಿ.ಕೆ.ಸುರೇಶ್ ಹಾಗೂ ಕಾಂಗ್ರೆಸ್ ಪರ ಜಯಘೋಷ ಮೊಳಗಿಸಿದರು.
ಇನ್ನು ತೆರೆದ ವಾಹನದಲ್ಲಿ ಹಿಂದೆ ನಿಂತಿದ್ದ ಸಿ.ಪಿ.ಯೋಗೇಶ್ವರ್ ಅವರ ಕೈಹಿಡಿದು ಎಳೆದ ಸಿಎಂ ಸಿದ್ದರಾಮಯ್ಯ ನೀನು ಮುಂದೆ ಇರಬೇಕು ಬಾರಯ್ಯ ಎಂದು ಮುಂದೆ ನಿಲ್ಲಿಸಿದ್ದು, ವಿಶೇಷವೆನ್ನಿಸಿತು.ಮೆರವಣಿಗೆಗೂ ಮುನ್ನ ಸಿ.ಪಿ.ಯೋಗೇಶ್ವರ್ ಪತ್ನಿ ಶೀಲಾ ಯೋಗೇಶ್ವರ್ ಅವರೊಂದಿಗೆ ಮಳೂರಿನ ಅಪ್ರಮೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಪೊಟೋ೨೪ಸಿಪಿಟಿ2,3:ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಶಕ್ತಿ ಪ್ರದರ್ಶಿಸಿತು.