ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಬೇರುಸಮೇತ ಕಿತ್ತುಹಾಕಲು ಜನ ತೀರ್ಮಾನಿಸಿದ್ದಾರೆ. 2028ರಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ. ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡೂ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಜನರೇ ತೀರ್ಮಾನ ಮಾಡಿದ್ದಾರೆ. ಇಂತಹ ಅವಕಾಶವನ್ನು ಜನರು ತಪ್ಪಿಸಿಕೊಳ್ಳಬಾರದು. ಒಂದು ವೇಳೆ ಕಾಂಗ್ರೆಸ್ ಗೆದ್ದರೆ ಮತ್ತೆ ಇವರ ನಾಟಕ ಎರಡು ವರ್ಷ ಮುಂದುವರಿಯುತ್ತದೆ. ಡಿನ್ನರ್ ಮತ್ತು ಲಂಚ್ ನಲ್ಲೇ ಸರ್ಕಾರ ಕಳೆಯುತ್ತದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹತ್ತು ದಿನದಿಂದ ಪ್ರಚಾರ ಮಾಡುತ್ತಿದ್ದಾರೆ. ಅಭಿವೃದ್ಧಿ, ಗ್ಯಾರಂಟಿ ನೋಡಿ ಮತ ಹಾಕಿ ಅಂತಾರೆ. ಏನೂ ಅಭಿವೃದ್ಧಿಯೇ ಮಾಡಿಲ್ಲ ಹೇಗೆ ಮತ ಹಾಕೋದು, ಎಲ್ಲದರ ದರ ಏರಿಕೆ ಮಾಡಿ ಬಡವರು ಬದುಕಲು ಆಗದಂತೆ ಮಾಡಿದ್ದಾರೆ. ಗ್ಯಾರಂಟಿಗಳನ್ನು ಸರಿಯಾಗಿ ಕೊಟ್ಟಿಲ್ಲ. ಹಾಗಾಗಿ ಗ್ಯಾರಂಟಿ ನೋಡಿಯೂ ಮತ ಹಾಕಲ್ಲ. ಇದೆಲ್ಲ ಆದ ನಂತರ ಜಾತಿ ನೋಡಿ ಮತ ಕೊಡಿ ಅಂತ ಹೊಸ ರಾಗ ತೆಗೆದಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಸರ್ಕಾರ ಹೊಸ ಬಸ್ ಖರೀದಿ ಮಾಡಿಲ್ಲ. ಬಸ್ ಪಂಕ್ಚರ್ ಆದರೆ ಜಾಕ್ ಖರೀದಿ ಮಾಡಲು ಹಣವಿಲ್ಲ. ಹೊಸ ಬಸ್ ಇಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಿದೆ. ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ತುಟ್ಟಿ ಆಗಿದೆ. ಗ್ಯಾರಂಟಿ ಹೇಳಿಕೊಂಡೇ ಮೂರು ವರ್ಷ ಕಳೆದರು. ಗೃಹಲಕ್ಷ್ಮಿ ಎಂದು ಹೆಣ್ಣು ಮಕ್ಕಳಿಗೆ ₹2000 ಕೊಟ್ಟು ಪತಿಯ ಜೇಬಿಗೆ ಕತ್ತರಿ ಹಾಕುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ದೂರಿದರು.


ಇಷ್ಟು ವರ್ಷದಲ್ಲಿ ಸರ್ಕಾರದ ಸಾಧನೆ ಏನೂ ಇಲ್ಲ. ಚುನಾವಣೆ ಬಂದಾಗ ಮಾತ್ರ ಗೃಹಲಕ್ಷ್ಮಿ ನೆನಪಾಗಿ ಖಾತೆಗೆ ಹಣ ಹಾಕುತ್ತಾರೆ. ಗೃಹ ಲಕ್ಷ್ಮಿಯಲ್ಲೂ ಐದು ಸಾವಿರ ಕೋಟಿ ಭ್ರಷ್ಚಾಚಾರ ಆಗಿದೆ. ಅಕ್ಕಿ ಕೊಟ್ಟಿದ್ದೇವೆ ಅಂತಾರೆ. ಆದರೆ ಸಿದ್ದರಾಮಯ್ಯ ಅವರೇ ನೀವು ಕೊಟ್ಟಿಲ್ಲ. ನರೇಂದ್ರ ಮೋದಿ ಸರ್ಕಾರ ಕೊಟ್ಟಿದ್ದು. ಆದರೆ ಚೀಲಕ್ಕೆ ದಾರ ಕೊಟ್ಟು ಅಕ್ಕಿ ನಮ್ಮದೇ ಅಂತಿದ್ದಾರೆ. ರಾಜ್ಯ ಸರ್ಕಾರದ್ದು ಒಂದು ಕೆಜಿ ಸಹ ಇಲ್ಲ ಎಂದು ಹೇಳಿದರು.

ಬಿಜೆಪಿ ಜಾತಿವಾದಿಗಳ ಪಕ್ಷ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಇವರು ಜಾತಿಗಳನ್ನು ರಾಜಕೀಯಕ್ಕೆ ಬಳಸುತ್ತಾರೆ. ಮುಡಾ ಕೇಸ್ ಬಂದಾಗ ಹಿಂದುಳಿದ ಜಾತಿಯವರು ಅಂದರು. ಅದರಲ್ಲಿ ನೂರಾರು ಕೋಟಿ ಭ್ರಷ್ಪಾಚಾರ ಆಗಿದೆ. ಇಂತಹ ನಾಟಕ ನಿಲ್ಲಿಸಿ ಎಂದು ಆಗ್ರಹಿಸಿದರು.

ಬಿಜೆಪಿ ದಲಿತರಿಗೆ ನೆರವು ನೀಡಿತ್ತು. ದಲಿತರನ್ನು ಕಂಡರೆ ಕಾಂಗ್ರೆಸ್‌ನವರಿಗೆ ಉರಿ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸೋಲಿಸಿದ ಕಾಂಗ್ರೆಸ್ ಅವರು ಸತ್ತಾಗ ಮಣ್ಣು ಹಾಕಲು ಜಾಗ ಕೊಡಲಿಲ್ಲ. ಆದರೆ ಈಗ ದೊಡ್ಡದಾಗಿ ಹಿಂದುಳಿದ ವರ್ಗದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದ ಅವರು, ರಾಜ್ಯದಲ್ಲಿ ರಸ್ತೆಗಳಿಲ್ಲ, ಮೂಲಸೌಕರ್ಯ ಇಲ್ಲ. ಸಂಬಳ ಕೊಡಲು ಹಣ ಇಲ್ಲದೆ ಎಲ್ಲಾ ಇಲಾಖೆ ನೌಕರರು ಮುಷ್ಕರ ಮಾಡುತ್ತಿದ್ದಾರೆ. ರಾಜ್ಯ ಆರ್ಥಿಕ ದಿವಾಳಿಯಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ದಲಿತರ ವಿರೋಧಿ. ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಆಯಿತು. ಎಎಸ್‌ಸಿಪಿ/ಟಿಎಸ್‌ಪಿ ಹಣವನ್ನೂ ಗ್ಯಾರಂಟಿಗಳಿಗೆ ಬಳಸಿದ್ದೀರಿ. ದಲಿತರ ಉದ್ಧಾರಕ್ಕೆ ಇರುವ ನಿಗಮದ ಹಣ ಬಳಸಿ ಲೋಕಸಭೆ ಚುನಾವಣೆ ಮಾಡಿದ್ದೀರಿ. ಒಳಮೀಸಲಾತಿಗೆ ಮೂರು ದಶಕದಿಂದ ಹೋರಾಟ ನಡೆಯುತ್ತಿದೆ. ಆದರೆ ಅದನ್ನು ಸರಿಯಾಗಿ ಜಾರಿ ಮಾಡಲಿಲ್ಲ.

- ಬಿ.ಶ್ರೀರಾಮುಲು ಮಾಜಿ ಸಚಿವ