ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆ ಬಗ್ಗೆ ಸ್ಪಷ್ಟನೆ ನೀಡಲಿ: ಪ್ರಗತಿ ಪರ ಸಂಘಟನೆಗಳು

| Published : Mar 22 2024, 01:02 AM IST

ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆ ಬಗ್ಗೆ ಸ್ಪಷ್ಟನೆ ನೀಡಲಿ: ಪ್ರಗತಿ ಪರ ಸಂಘಟನೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಐಎನ್.ಡಿಐಎ ಮೈತ್ರಿಕೂಟದ ಮಿತ್ರ ಪಕ್ಷವಾಗಿರುವ ಡಿಎಂಕೆ ಪಕ್ಷದ ಈ ನಡೆ ತೀವ್ರ ಬೇಸರ ತರಿಸಿದ್ದು, ಒಂದೆಡೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ನೃತ್ಯ ಮಾಡಿಕೊಂಡು ಮೇಕೆದಾಟು ಪಾದಯಾತ್ರೆ ಮೂಲಕ ಅಧಿಕಾರಕ್ಕೆ ಬಂದು ಈಗ ಮೇಕೆದಾಟು ಯೋಜನೆಯನ್ನು ಸಂಪೂರ್ಣವಾಗಿ ಮರೆತಿರುವುದು ದುರಂತವೇ ಸರಿ.

ಕನ್ನಡಪ್ರಭ ವಾರ್ತೆ ಕನಕಪುರಲೋಕಸಭಾ ಚುನಾವಣೆಯ ದೃಷ್ಟಿಯಿಂದ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ರವರು ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, ಅದರಲ್ಲಿ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂಬ ಅಂಶವಿರುವುದು ದುರದೃಷ್ಟ ಹಾಗೂ ಅತ್ಯಂತ ಖಂಡನೀಯ ಎಂದು ತಾಲೂಕು ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಎನ್.ಡಿಐಎ ಮೈತ್ರಿಕೂಟದ ಮಿತ್ರ ಪಕ್ಷವಾಗಿರುವ ಡಿಎಂಕೆ ಪಕ್ಷದ ಈ ನಡೆ ತೀವ್ರ ಬೇಸರ ತರಿಸಿದ್ದು, ಒಂದೆಡೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ನೃತ್ಯ ಮಾಡಿಕೊಂಡು ಮೇಕೆದಾಟು ಪಾದಯಾತ್ರೆ ಮೂಲಕ ಅಧಿಕಾರಕ್ಕೆ ಬಂದು ಈಗ ಮೇಕೆದಾಟು ಯೋಜನೆಯನ್ನು ಸಂಪೂರ್ಣವಾಗಿ ಮರೆತಿರುವುದು ದುರಂತವೇ ಸರಿ. ಮತ್ತೊಂದೆಡೆ ಅದರ ಮಿತ್ರ ಪಕ್ಷ ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟಲು ನಾವು ಬಿಡುವುದಿಲ್ಲ ಎಂಬ ಅಂಶವನ್ನು ಹೇಳಿರುವುದು ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದಂತಾಗಿದೆ. ಕೆಲವು ದಿನಗಳ ಹಿಂದೆ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸಿದ ಕಾಂಗ್ರೆಸ್ ಸರಕಾರವು, ಈಗ ಡಿಎಂಕೆ ಪಕ್ಷದ ನಿಲುವನ್ನು ಖಂಡಿಸದೇ ಗುಲಾಮಗಿರಿತನ ತೋರಿಸುತ್ತಿರುವುದು ಅ ಪಕ್ಷದ ನಾಯಕರ ಇಬ್ಬಗೆ ನೀತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಜನತೆ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ ಅದರ ಮಿತ್ರಕೂಟದ ಸಂಕಲ್ಪಕ್ಕೆ ನಾವೇ ಒಪ್ಪಿಗೆ ಸೂಚಿಸಿದಂತಾಗುತ್ತದೆ. ಆದ್ದರಿಂದ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ತಕ್ಷಣವೇ ಮೇಕೆದಾಟು ವಿಚಾರದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿ, ಡಿಎಂಕೆ ಪಕ್ಷವನ್ನು ತನ್ನ ಮೈತ್ರಿಯಿಂದ ಹೊರ ಹಾಕಲು ತಾಲೂಕು ಪ್ರಗತಿಪರ ಸಂಘಟನೆಗಳು 7 ದಿನಗಳ ಗಡುವು ನೀಡುತ್ತಿದ್ದು, ಇದನ್ನು ನಿರ್ಲಕ್ಷಿಸಿದರೆ ಎಲ್ಲಾ ಸಂಘಟನೆಗಳ ನಾಯಕರ ಸಭೆ ಕರೆದು ಕಾಂಗ್ರೆಸ್ ಪಕ್ಷದ ವಿರುದ್ಧ ಮತ ಚಲಾಯಿಸುವಂತೆ ರಾಜ್ಯವ್ಯಾಪಿ ಆಂದೋಲನ ಕೈಗೊಳ್ಳಲು ಎಚ್ಚರಿಕೆ ನೀಡಲಾಗುವುದು ಎಂದರು.

ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡ ಭಾಸ್ಕರ್, ಕೆಆರ್ ಎಸ್ ಪಕ್ಷದ ಪ್ರಶಾಂತ್ ಹೊಸದುರ್ಗ, ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂಗಿ ಗಿರಿಯಪ್ಪ, ರೈತ ಘಟಕದ ನಲ್ಲಹಳ್ಳಿ ಶ್ರೀನಿವಾಸ್, ಶಿವರಾಜ್ , ಅಸ್ಗರ್ , ದುರ್ಗೇಶ್ , ಹಾಗೂ ಮಿಲ್ಟ್ರಿ ರಾಮಣ್ಣ ಉಪಸ್ಥಿತರಿದ್ದರು.