ಬೀದಿಗಿಳಿದು ಅರಾಜಕತೆ ಸೃಷ್ಟಿಸುವ ಮೂಲಕ ದೇಶದಲ್ಲಿ ಅಧಿಕಾರ ಬದಲಾವಣೆ ಮಾಡುವ ಭ್ರಮೆಯನ್ನು ಕಾಂಗ್ರೆಸ್ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತಕ್ಷಣವೇ ಮರೆತುಬಿಡಬೇಕು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಕಲಬುರಗಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿಬೀದಿಗಿಳಿದು ಅರಾಜಕತೆ ಸೃಷ್ಟಿಸುವ ಮೂಲಕ ದೇಶದಲ್ಲಿ ಅಧಿಕಾರ ಬದಲಾವಣೆ ಮಾಡುವ ಭ್ರಮೆಯನ್ನು ಕಾಂಗ್ರೆಸ್ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತಕ್ಷಣವೇ ಮರೆತುಬಿಡಬೇಕು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಕಲಬುರಗಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು.ಬುಧವಾರ ಕಲಬುರಗಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ‘ಲೋಕತಂತ್ರ ಬಚಾವೋ, ಅರಾಜಕತಾ ಹಟಾವೋ’ ಪಾದಯಾತ್ರೆ ಮತ್ತು ಬೃಹತ್ ಸಾರ್ವಜನಿಕ ಸಮಾವೇಶ ದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಸರ್ಕಾರ ಬದಲಾಗುವುದು ಕೇವಲ ಮತಗಳ ಮೂಲಕವೇ ಹೊರತು ಹಿಂಸಾಚಾರದಿಂದಲ್ಲ ಎಂದು ನೆರೆಯ ರಾಷ್ಟ್ರಗಳ ಉದಾಹರಿಸಿ ಟೀಕಿಸಿದರು.

ಎಲ್ಲಾ ತಂತ್ರಗಳು ವಿಫಲವಾದ ಬಳಿಕ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಬೀದಿಯಲ್ಲಿ ಅಶಾಂತಿ ಹಬ್ಬಿಸಿ ಸರ್ಕಾರ ಬದಲಿಸಲು ಹೊರಟಿವೆ. ನಮ್ಮ ನೆರೆಯ ಕೆಲವು ರಾಷ್ಟ್ರಗಳಲ್ಲಿ ಇಂತಹ ಅರಾಜಕತೆಯ ಮೂಲಕ ಅಧಿಕಾರ ಬದಲಾವಣೆಯಾಗಿದೆ. ಭಾರತದಲ್ಲೂ ಅಂತಹದ್ದೇ ಪರಿಸ್ಥಿತಿ ನಿರ್ಮಿಸಲು ಕಾಂಗ್ರೆಸ್ ಬಯಸುತ್ತಿದೆಯೇ? ರಾಹುಲ್ ಗಾಂಧಿಯವರಿಗೆ ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ, ನಿಮ್ಮ ಪಕ್ಷದ ಕೆಲವರು ಬೀದಿಯಲ್ಲಿ ಗದ್ದಲ ಎಬ್ಬಿಸಿದ ಮಾತ್ರಕ್ಕೆ ದುರ್ಬಲಗೊಳ್ಳಲು ಭಾರತದ ಪ್ರಜಾಪ್ರಭುತ್ವ ಅಷ್ಟು ದುರ್ಬಲವಾಗಿಲ್ಲ ಎಂದು ರಾಜನಾಥ್ ಸಿಂಗ್ ಕಿಡಿಕಾರಿದರು.

ಅಧಿಕಾರದ ವ್ಯಾಮೋಹಕ್ಕಾಗಿ ಕಾಂಗ್ರೆಸ್ ಸಾಂವಿಧಾನಿಕ ಸಂಸ್ಥೆಗಳ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ ಸಚಿವರು, 1975ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ, 1984ರಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ನಡೆದ ಸಿಖ್ ವಿರೋಧಿ ಹತ್ಯಾಕಾಂಡ ಹಾಗೂ ಪ್ರಸ್ತುತ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ನಡೆಸುತ್ತಿರುವ ಪ್ರಯತ್ನಗಳೇ ಕಾಂಗ್ರೆಸ್ ಮಾಡಿದ ಮೂರು ದೊಡ್ಡ ತಪ್ಪುಗಳು ಎಂದು ವಾಗ್ದಾಳಿ ನಡೆಸಿದರು.ಮತಗಳ ಮೂಲಕ ಹೋರಾಡುವಂತೆ ಸವಾಲು: ಕಾಂಗ್ರೆಸಿಗರಿಗೆ ಧೈರ್ಯವಿದ್ದರೆ ಚುನಾವಣಾ ಆಯೋಗವನ್ನು ದೂಷಿಸುವ ಬದಲು ಮತಗಳ ಮೂಲಕ ಹೋರಾಡಲಿ. ನರೇಂದ್ರ ಮೋದಿ ಅವರು ಮೊದಲ ಬಾರಿ ಪ್ರಧಾನಿಯಾದಾಗ ಇದ್ದ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸಿದ್ದು ಕಾಂಗ್ರೆಸ್ ಸರ್ಕಾರವೇ. ಯಾವಾಗಲೇ ಚುನಾವಣೆ ನಡೆದರೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಚಿವ ರಾಜನಾಥ್‌ ಸಿಂಗ್‌ ಸವಾಲು ಹಾಕಿದರು.