ಕಾಂಗ್ರೆಸ್‌ನ ರಾಜಕೀಯ ಸೇಡಿನ ಪರಿಣಾಮವಾಗಿ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಯೋಜನೆ ನನೆಗುದಿಗೆ ಬಿದ್ದಿದೆ ಎಂದು ಬಿಜೆಪಿ ಆರೋಪಿಸಿದೆ.

ಕಾರ್ಕಳ: ಕಾಂಗ್ರೆಸ್‌ನ ರಾಜಕೀಯ ಸೇಡಿನ ಪರಿಣಾಮವಾಗಿ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಯೋಜನೆ ನನೆಗುದಿಗೆ ಬಿದ್ದಿದೆ ಎಂದು ಬಿಜೆಪಿ ಆರೋಪಿಸಿದೆ.

ಕಾರ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಕಾಂಗ್ರೆಸ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಹತಾಶೆ ಸ್ಥಿತಿಗೆ ತಲುಪಿದ್ದು, ತನಿಖೆ ನೆಪದಲ್ಲಿ ಹಾಗೂ ಮುಂದಿನ ಚುನಾವಣೆಯವರೆಗೆ ಈ ವಿಷಯವನ್ನು ಜೀವಂತ ಇಟ್ಟುಕೊಳ್ಳುವ ಉದ್ದೇಶದಿಂದ ಪರಶುರಾಮ ಥೀಂ ಪಾರ್ಕ್ ಕಾಮಗಾರಿಗೆ ಬಿಡುಗಡೆಯಾಗಬೇಕಿದ್ದ ಅನುದಾನವನ್ನು ತಡೆಹಿಡಿಯಲಾಗಿದೆ. ಇದರಿಂದ ಯಾವುದೇ ಕಾಮಗಾರಿಗಳು ಮುಂದುವರಿಯದೆ ಸ್ಥಗಿತಗೊಂಡಿವೆ ಎಂದು ಬಿಜೆಪಿ ಹೇಳಿದೆ.

ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಆರಂಭದಿಂದಲೂ ಬಿಜೆಪಿ ಹೇಳುತ್ತಲೇ ಬಂದಿದೆ. ತನಿಖೆ ನೆಪದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಬಾರದೆಂದು ಮನವಿ ಮಾಡಿದ್ದರೂ, ಕಾಂಗ್ರೆಸ್ ನಾಯಕರು ಮೊದಲು ಮೂರ್ತಿ ಫೈಬರ್‌ನದ್ದು ಎಂದು ಹುಯಿಲೆಬ್ಬಿಸಿ, ಬಳಿಕ ಅದು ಫೈಬರ್‌ನದ್ದಲ್ಲ ಎಂದು ಗೊತ್ತಾದ ನಂತರ ಬೇರೆ ಬೇರೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.ಕಳ್ಳತನ ಪ್ರಕರಣ ಪೊಲೀಸ್ ಇಲಾಖೆಗೆ ತಿಳಿಯುವ ಮೊದಲೇ ಶಾಸಕರಿಗೆ ಮಾಹಿತಿ ಹೇಗೆ ಲಭ್ಯವಾಯಿತು ಎಂಬ ಪ್ರಶ್ನೆ ಎತ್ತಿದ್ದ ಕಾಂಗ್ರೆಸ್ ನಾಯಕರು, ಶಾಸಕರ ಸಹಚರರೇ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಮಾಡಿದ್ದರು. ಪರಶುರಾಮ ಥೀಂ ಪಾರ್ಕ್‌ನಲ್ಲಿ ಅನೇಕ ಬೆಲೆಬಾಳುವ ವಸ್ತುಗಳಿರುವಾಗ ಕಳ್ಳರು ಕೇವಲ ಮೇಲ್ಛಾಣಿಯನ್ನೇ ಯಾಕೆ ಕದ್ದಿದ್ದಾರೆ ಎಂಬ ಅನುಮಾನಾಸ್ಪದ ಹೇಳಿಕೆಗಳನ್ನು ಕೂಡ ಕಾಂಗ್ರೆಸ್ ನೀಡಿತ್ತು.

ಆದರೆ ಪೊಲೀಸ್ ಇಲಾಖೆಯ ಕ್ಷಿಪ್ರ ಕಾರ್‍ಯಾಚರಣೆಯಿಂದ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ನೈಜ ಆರೋಪಿಗಳು ಬಂಧನವಾದ ಬಳಿಕ ಕಾಂಗ್ರೆಸ್ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಕಾಣುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ಸೂಕ್ತ ನಿರ್ವಹಣೆ ಇಲ್ಲದೆ ಅಲ್ಲಿನ ಕಟ್ಟಡಗಳು ಹಾಗೂ ವಸ್ತುಗಳು ಹಾಳಾಗುತ್ತಿವೆ. ಕಾಮಗಾರಿಗೆ ಬಿಡುಗಡೆಯಾಗಬೇಕಿದ್ದ 4.33 ಕೋಟಿ ರು. ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.ಬಿಜೆಪಿ ಮುಖಂಡ ಸುಮಿತ್ ಶೆಟ್ಟಿ ಮಾತನಾಡಿ, ‘ಫೈಬರ್ ಗ್ಯಾಂಗ್’ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ ಮಾತನಾಡಿ, ಉದಯ ಕುಮಾರ್ ಶೆಟ್ಟಿ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ನಿರಂಜನ್ ಜೈನ್, ಸುರೇಶ್ ಸಾಯಿರಾಂ ಬೈಲೂರು ಉಪಸ್ಥಿತರಿದ್ದರು.