ಅಂಬೇಡ್ಕರ್‌ ಹೆಸರು ಬಳಸಿ ಕಾಂಗ್ರೆಸ್‌ ರಾಜಕೀಯ: ರೇಣುಕಾಚಾರ್ಯ ಆರೋಪ

| Published : Apr 15 2024, 01:23 AM IST

ಅಂಬೇಡ್ಕರ್‌ ಹೆಸರು ಬಳಸಿ ಕಾಂಗ್ರೆಸ್‌ ರಾಜಕೀಯ: ರೇಣುಕಾಚಾರ್ಯ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದ ಕಾಂಗ್ರೆಸ್ ಇಂದು ಅದೇ ಅಂಬೇಡ್ಕರ್ ಹೆಸರನ್ನು ಬಳಸಿಕೊಂಡು ಚುನಾವಣೆಗಳನ್ನು ಮಾಡುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ಈ ಹಿಂದೆ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದ ಕಾಂಗ್ರೆಸ್ ಇಂದು ಅದೇ ಅಂಬೇಡ್ಕರ್ ಹೆಸರನ್ನು ಬಳಸಿಕೊಂಡು ಚುನಾವಣೆಗಳನ್ನು ಮಾಡುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಭಾನುವಾರ ತಾಲೂಕು ಬಿಜೆಪಿ ವತಿಯಿಂದ ಚುನಾವಣಾ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 133ನೇ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಭಾರತಕ್ಕೆ ಇಡೀ ವಿಶ್ವವೇ ಮೆಚ್ಚುವಂತಹ ಸಂವಿಧಾನ ನೀಡಿದವರು ಅಂಬೇಡ್ಕರ್. ಅವರು ದೇಹತ್ಯಾಗ ಮಾಡಿದ ಸಂದರ್ಭ ಅಂದಿನ ಕಾಂಗ್ರೆಸ್ ಸರ್ಕಾರಗಳು ಅಂತ್ಯಸಂಸ್ಕಾರಕ್ಕೂ ಜಾಗ ನೀಡಿರಲಿಲ್ಲ. ಆದರೆ, ಇಂದು ಕಾಂಗ್ರೆಸ್ ಅಂಬೇಡ್ಕರ್ ಹೆಸರನ್ನು ಚುನಾವಣೆಗಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಬುದ್ದ, ಬಸವ, ಕನಕ, ಅಂಬೇಡ್ಕರ್‌ ಅವರಂಥ ಇನ್ನೂ ಅನೇಕ ಮಹಾಪುರುಷರನ್ನು ಒಂದು ಜಾತಿ, ವರ್ಗಕ್ಕೆ ಯಾರೇ ಆಗಲಿ ಸೀಮಿತಗೊಳಿಸಬಾರದು. ಅವರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.

ಮುಖಂಡ ಕೆ.ಪಿ.ಕುಬೇಂದ್ರಪ್ಪ ಮಾತನಾಡಿ, ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಸಂವಿಧಾನದ ಸೌಲಭ್ಯಗಳನ್ನು ಕೇವಲ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳದೇ, ಇಡೀ ಸಮಾಜದ ಒಳಿತಾಗಿ ಪ್ರಜೆಗಳಾದ ನಾವೆಲ್ಲರೂ ಕೂಡ ಬಳಸಿಕೊಳ್ಳಬೇಕಿದೆ ಎಂದು ಹೇಳಿದರು.

ಬಿಜೆಪಿ ಮಂಡಲ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್ ಮಾತನಾಡಿದರು. ಚಂದಪ್ಪ, ಚೀಲೂರು ಅಜ್ಜಯ್ಯ, ಬೇಲಿಮಲ್ಲೂರು ಉಮೇಶ್ ಮಾತನಾಡಿದರು. ಮುಖಂಡರಾದ ನೆಲಹೊನ್ನೆ ಮಂಜುನಾಥ, ಎಂ.ಎಸ್. ಫಾಲಾಕ್ಷಪ್ಪ, ಕೆ.ರಂಗಪ್ಪ, ಸುರೇಂದ್ರ ನಾಯ್ಕ, ಮಾರುತಿ ನಾಯ್ಕ, ಹಲವಾರು ಮುಖಂಡರು ಇದ್ದರು.

- - -

-14ಎಚ್.ಎಲ್.ಐ2ಃ:

ಹೊನ್ನಾಳಿ ತಾಲೂಕು ಬಿಜೆಪಿ ವತಿಯಿಂದ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಯಿತು.