ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರ ಗ್ಯಾರಂಟಿ: ಎಂ.ಬಿ ಪಾಟೀಲ್‌

| Published : Apr 29 2024, 01:32 AM IST

ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರ ಗ್ಯಾರಂಟಿ: ಎಂ.ಬಿ ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಪುಲ್ವಾಮಾ, ಬಾಲಾಕೋಟ್ ಸನ್ನಿವೇಶಗಳಳು ಈಗಿಲ್ಲ. ಬಿಜೆಪಿ ಸೋಲು ಖಚಿತ ಎಂದು ರಾಜ್ಯದ ಭಾರಿ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯಗಳ ಸಚಿವ ಎಂಬಿ ಪಾಟೀಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್‌

2019ರ ಲೋಕ ಚುನಾವಣೆಯಲ್ಲಿ ಪ್ರಮುಖವಾಗಿದ್ದ ಪುಲ್ವಾಮಾ, ಬಾಲಾಕೋಟ್ ಸನ್ನಿವೇಶಗಳು ಈಗಿಲ್ಲ. ದೇಶದ ಹಿತಕ್ಕಾಗಿ ಜನ ಅಂದು ಬಿಜೆಪಿಗೆ ನೀಡಿದ್ದ ಭಾವನಾತ್ಮಕ ಬೆಂಬಲ ಈಗಿಲ್ಲ ಎಂಬುವದು ಸ್ಪಷ್ಟವಾಗಿದ್ದು ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರುವುದು ಗ್ಯಾರಂಟಿ ಎಂದು ರಾಜ್ಯದ ಭಾರಿ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯಗಳ ಸಚಿವ ಎಂಬಿ ಪಾಟೀಲ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಅಂದು ರಾಷ್ಟ್ರದ ಹಿತ ಮುಖ್ಯ ಎಂದು ಬಿಜೆಪಿಗೆ ಬಹುಮತ ನೀಡಿದ್ದ ಜನತೆ ಇಂದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮತ್ತು ರಾಷ್ಟ್ರವನ್ನು ಕಟ್ಟಿಕೊಟ್ಟ ಕಾಂಗ್ರೆಸ್‌ ಬೆಂಬಲಿಸುವದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು.

ಒಂದು ಸೂಜಿಯೂ ನಮ್ಮ ದೇಶದಲ್ಲಿ ಉತ್ಪಾದನೆ ಆಗುತ್ತಿರಲಿಲ್ಲ. ಆಗ ಪಂಡಿತ ಜವಾಹರಲಾಲ್‌ ನೆಹರು ದೇಶದಲ್ಲಿ ಕೈಗಾರಿಕೋದ್ಯಮಗಳಿಗೆ ಉತ್ತೇಜನ ನೀಡಿದ್ದು ಬಿಎಚ್‌ಇಎಲ್‌, ಬಿಇಎಲ್‌, ಐಓಸಿಯಂಥ ಸಾವಿರಾರು ಉದ್ಯಮಗಳು ದೇಶದಲ್ಲಿ ಆರಂಭವಾಗಿ ನಿರುದ್ಯೋಗ ಸಮಸ್ಯೆ ನೀಗಿಸಿದರೆ, ಆಹಾರ ಕ್ರಾಂತಿಗೆ ನಾಂದಿ ಹಾಡಿದ್ದು ಇಂದು ಭಾರತದಿಂದ ಮೂರ್ನಾಲ್ಕು ಪಟ್ಟು ಹೆಚ್ಚು ಆಹಾರ ರಫ್ತಾಗುತ್ತಿರುವುದಕ್ಕೆ ಕಾರಣ ಎಂದು ತಿಳಿಸಿದರು.

ದೇಶದಲ್ಲಿರುವ ಸುಮಾರು 2ಸಾವಿರ ಆಣೆಕಟ್ಟುಗಳ ಪೈಕಿ 1900 ಆಣೆಕಟ್ಟುಗಳು ಕಾಂಗ್ರೆಸ್‌ ಆಡಳಿತದಲ್ಲಿ ನಿರ್ಮಿಸಲ್ಪಟ್ಟಿವೆ. ಇನ್ನುಳಿದಂತೆ ಬ್ರಿಟೀಷರ ಕಾಲದಲ್ಲಿ ಮತ್ತು ರಾಜ ಮಹಾರಾಜರ ಕಾಲದಲ್ಲಿ ನಿರ್ಮಿಸಿದ್ದು ಗ್ರಾಮ ಮಟ್ಟದ ಶಾಲೆಯಿಂದ ಐಐಟಿ ಆರಂಭಿಸುವವರೆಗೂ ಕಾಂಗ್ರೆಸ್‌ ಆಡಳಿತದ ದೂರದೃಷ್ಟಿತ್ವ ಇದೆ ಎಂದು ಸಚಿವ ಎಂಬಿ ಪಾಟೀಲ್‌ ತಿಳಿಸಿದರು.ಬೆಲೆ ಏರಿಕೆ ಬಿಸಿ:

2014ರಿಂದ ನರೇಂದ್ರ ಮೋದಿ ಆಡಳಿತ ಆರಂಭವಾಗಿ ಅಚ್ಛೇ ದಿನ್‌ ಆಯೆಂಗೇ ಎಂದು ಮಾತುಕೊಟ್ಟಿದ್ದ ಅವರ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಮುಗಿಲು ಮುಟ್ಟಿವೆ. ಅಂದು ಪೆಟ್ರೋಲ್‌, ಡೀಸಲ್‌ ಅಷ್ಟೇ ಅಲ್ಲ ಡಾಲರ್‌ ಮುಂದೆ ರುಪಾಯಿ ದುಪ್ಪಟ್ಟು ಕುಸಿದಿದೆ. ಗ್ಯಾಸ್‌ ದರ ನೂರಾರು ರುಪಾಯಿ ಹೆಚ್ಚಳವಾಗಿದೆ. ಒಂದೆರಡು ರುಪಾಯಿ ಏರಿಕೆ ಖಂಡಿಸಿ ಗ್ಯಾಸ್‌ ಸಿಲಿಂಡರ್‌ ಹೊತ್ತು ಪ್ರತಿಭಟಿಸಿದ್ದ ಶೋಭಾ ಕರಂದ್ಲಾಜೆ ಹಾಗೂ ಸ್ಮೃತಿ ಇರಾನಿ ನೂರಾರು ರುಪಾಯಿ ಹೆಚ್ಚಾಗಿರುವ ಈ ದಿನಗಳಲ್ಲಿ ಏನು ಹೊತ್ತು ಪ್ರತಿಭಟಿಸುತ್ತಾರೆ ಎಂದು ಜನ ಕಾದು ನೋಡುತ್ತಿದೆ ಎಂದು ವ್ಯಂಗ್ಯವಾಡಿದರು.

ಚುನಾವಣಾ ಬಾಂಡ್‌ಗಳ ಮೂಲಕ ಸಾವಿರಾರು ಕೋಟಿ ರು. ಅಕ್ರಮ ಮಾಡಿರುವ ಬಿಜೆಪಿ ಭ್ರಷ್ಟಾಚಾರದ ಆರೋಪ ಹೊಸತ್ತವರನ್ನು ಬೆದರಿಸಿ ಪಕ್ಷಕ್ಕೆ ಸೇರಿಸಿಕೊಂಡಿದ್ದು ಸರಿಯಾ ಎಂದು ಪ್ರಶ್ನಿಸಿದ ಅವರು, ಮೋದಿ ಸರ್ಕಾರದ ಸಾಧನೆ ಶೂನ್ಯ ಕೇವಲ ಘೋಷಣೆ ಮಾತ್ರ ಇದೆ ಎಂದು ಸಚಿವ ಎಂ.ಬಿ ಪಾಟೀಲ್‌ ಆರೋಪಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಬಸವರಾಜ ಬುಳ್ಳಾ, ಬಸವರಾಜ ಧನ್ನೂರ, ಜಾರ್ಜ್‌, ಶಿವರಾಜ ನರಶೆಟ್ಟಿ, ಬಸವರಾಜ ಭಾತಂಬ್ರಾ ಹಾಗೂ ಸೋಮನಾಥ ಕಂದಗೂಳೆ ಇದ್ದರು.