ಅಭಿವೃದ್ಧಿಗಿಂತ ಅಕ್ರಮಗಳಿಗೇ ಕಾಂಗ್ರೆಸ್ ಆದ್ಯತೆ

| Published : Apr 25 2024, 01:13 AM IST

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಗಣಿ ಖಾತೆ ಹೊಂದಿಯೂ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗಿಂತ ಅಕ್ರಮ ಮರಳುಗಾರಿಕೆಗೆ ಒತ್ತು ನೀಡಿದ್ದಾರೆ. ಈಗ ಚುನಾವಣೆ ಬಂದಿತೆಂದು ತಮ್ಮ ಪತ್ನಿ ಅಭ್ಯರ್ಥಿ ಎಂಬ ಕಾರಣಕ್ಕೆ ಅಭಿವೃದ್ಧಿ ಜಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಾಗ್ದಾಳಿ ನಡೆಸಿದ್ದಾರೆ.

- ಬಿಜೆಪಿ ಅಭ್ಯರ್ಥಿ ಗಾಯತ್ರಿ ಆರೋಪ । ತಾಕತ್ತಿದ್ದರೆ ಹರಿಹರಕ್ಕೆ ಸಚಿವ ಎಸ್ಸೆಸ್ಸೆಂ ಕೊಡುಗೆ ಏನೆಂದು ತಿಳಿಸಲಿ ಎಂದು ಸವಾಲು

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಗಣಿ ಖಾತೆ ಹೊಂದಿಯೂ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗಿಂತ ಅಕ್ರಮ ಮರಳುಗಾರಿಕೆಗೆ ಒತ್ತು ನೀಡಿದ್ದಾರೆ. ಈಗ ಚುನಾವಣೆ ಬಂದಿತೆಂದು ತಮ್ಮ ಪತ್ನಿ ಅಭ್ಯರ್ಥಿ ಎಂಬ ಕಾರಣಕ್ಕೆ ಅಭಿವೃದ್ಧಿ ಜಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಾಗ್ದಾಳಿ ನಡೆಸಿದರು.

ಬುಧವಾರ ಹರಿಹರ ತಾಲೂಕಿನ ಸಾರಥಿ, ಚಿಕ್ಕಬಿದರಿ, ಪಾಮೇನಹಳ್ಳಿ, ದೀಟೂರು ಇತರೆ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರಿಗೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕು ಎಂದರು.

ಅಕ್ರಮ ಮರಳುಗಾರಿಕೆ ಬಗ್ಗೆ ನಮ್ಮ ಶಾಸಕ ಬಿ.ಪಿ.ಹರೀಶ ಗೌಡ ಧ್ವನಿ ಎತ್ತಿದ್ದಾರೆ. ಆದರೆ, ಸಚಿವರ ಹಿಂಬಾಲಕರು ಸಾರ್ವಜನಿಕವಾಗಿ ಶಾಸಕ ಹರೀಶ್‌ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಶಾಸಕರಿಗೇ ಹೀಗಾದರೆ ಇನ್ನು ಜನಸಾಮಾನ್ಯರ ಪರಿಸ್ಥಿತಿ ಏನಾದೀತು? ಇಂಥವರಿಗೆ ಅಧಿಕಾರ ಕೊಟ್ಟರೆ ನಮ್ಮ, ನಿಮ್ಮ ಬದುಕು ದುಸ್ತರವಾಗತ್ತದೆ. ಅಭಿವೃದ್ಧಿ ಬೇಕೋ, ಅಕ್ರಮವೋ ಎಂಬುದನ್ನು ಜನತೆ ಯೋಚಿಸಬೇಕು ಎಂದರು.

ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಶಾಸಕ ಬಿ.ಪಿ.ಹರೀಶ ಹರಿಹರ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಸಂಸದ ಸಿದ್ದೇಶ್ವರರ ಇಚ್ಛಾಶಕ್ತಿಯಿಂದ ಅಮೃತ ಭಾರತ್ ಸ್ಟೇಷನ್‌ನಡಿ ಹರಿಹರಕ್ಕೆ ₹25 ಕೋಟಿ ವೆಚ್ಚದ ಸುಸಜ್ಜಿತ ರೈಲ್ವೆ ನಿಲ್ದಾಣ, ಫ್ಲಾಟ್ ಫಾರಂ ವಿಸ್ತರಣೆ ಕೆಲಸ ಸಾಗಿದೆ. ಅಮರಾವತಿ ಬಳಿ ₹28 ಕೋಟಿ ವೆಚ್ಚದ ರೈಲ್ವೆ ಮೇಲ್ಸೇತುವೆಯಾಗಿದೆ. ಚಿಕ್ಕಜಾಜೂರಿನಿಂದ ಹರಿಹರವರೆಗೆ ₹84 ಕೋಟಿ ವೆಚ್ಚದ ರೈಲ್ವೆ ವಿದ್ಯುದೀಕರಣ ಆಗಿದೆ. ಕೊಂಡಜ್ಜಿ ಬಳಿ ₹3 ಕೋಟಿ ವೆಚ್ಚದ ಸೇತುವೆ, ಹರಳಹಳ್ಳಿ ಬಳಿ ₹2.60 ಕೋಟಿ ವೆಚ್ಚದ ರಸ್ತೆ, ಸೇತುವೆಯಾಗಿದೆ. ತಾಕತ್ತಿದ್ದರೆ ಹರಿಹರಕ್ಕೆ ನಿಮ್ಮ ಕೊಡುಗೆ ಏನೆಂಬುದನ್ನು ತಿಳಿಸಲಿ ಎಂದು ಸಚಿವ ಎಸ್‌ಎಸ್‌ಎಂಗೆ ಗಾಯತ್ರಿ ಸವಾಲು ಹಾಕಿದರು.

ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಮಾತನಾಡಿ, ನರೇಂದ್ರ ಮೋದಿಗೆ ಮತ್ತೊಮ್ಮೆ ಪ್ರಧಾನಿ ಮಾಡಲು ರಾಜ್ಯವ್ಯಾಪಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ, ಹೆಜ್ಜೆ ಇಡುತ್ತಿವೆ. ರಾಜ್ಯದ 28 ಕ್ಷೇತ್ರದಲ್ಲೂ ಎನ್‌ಡಿಎ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದರು.

ಶಾಸಕ ಬಿ.ಪಿ.ಹರೀಶ ಮಾತನಾಡಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹರಿಹರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ? ದಾವಣಗೆರೆಯಿಂದ ಕೂಗಳತೆ ದೂರದ ಹರಿಹರಕ್ಕೆ ವರ್ಷದಲ್ಲಿ ಎಷ್ಟು ಸಲ ಭೇಟಿ ಕೊಟ್ಟಿದ್ದಾರೆ. ಹಿಂಬಾಲಕರನ್ನು ಬಿಟ್ಟು ಅಕ್ರಮ ಮರಳುಗಾರಿಕೆ ಮಾಡಿರುವುದು ಬಿಟ್ಟರೆ ಹರಿಹರಕ್ಕೆ ಕೊಡುಗೆ ಏನು? ಸಂಸದ ಜಿ.ಎಂ.ಸಿದ್ದೇಶಣ್ಣ ಹರಿಹರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಎಸ್.ಎಸ್.ಮಲ್ಲಿಕಾರ್ಜುನ ಜಿಲ್ಲಾ ಉಸ್ತುವಾರಿ ಸಚಿವರಾದರೂ ಅವರ ಕೊಡುಗೆ ಶೂನ್ಯ ಎಂದು ಟೀಕಿಸಿದರು.

ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ವಿವಿಧ ಗ್ರಾಮಸ್ಥರು, ಸ್ಥಳೀಯ ಮುಖಂಡರು ಇದ್ದರು.

- - -

ಬಾಕ್ಸ್‌-1 ಭದ್ರಾ ಅಚ್ಚುಕಟ್ಟು ವ್ಯಾಪ್ತಿಗೆ ಸಮರ್ಪಕ ನೀರು ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮ ಕಚೇರಿಯನ್ನು ದಾವಣಗೆರೆಗೆ ಸ್ಥಳಾಂತರಿಸಲು ಒತ್ತು ನೀಡುವೆ. ನಿಗಮ ದಾವಣಗೆರೆಗೆ ಬಂದರೆ ಕಾಡಾ ಸಭೆಗಳನ್ನು ಇಲ್ಲೇ ನಡೆಸಬಹುದು. ಹರಿಹರ, ದಾವಣಗೆರೆ, ಹರಪನಹಳ್ಳಿ ತಾಲೂಕಿನ ಕೊನೆ ಭಾಗದ ಗ್ರಾಮಗಳಿಗೆ ಭದ್ರಾ ನಾಲೆ ನೀರು ಸಮರ್ಪಕವಾಗಿ ಹರಿಸಲು ಸಾಧ್ಯವಾಗುತ್ತದೆ. ನೀರಾವರಿ ನಿಗಮದ ಕಚೇರಿ ಇಲ್ಲಿಗೆ ಬಂದರೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ ಎಂದು ಗಾಯತ್ರಿ ಸಿದ್ಧೇಶ್ವರ ಹೇಳಿದರು.

- - -

ಬಾಕ್ಸ್‌-2 2ಜಿ ಎಥೆನಾಲ್ ಘಟಕಕ್ಕೆ ಚುರುಕು ಹರಿಹರ ತಾಲೂಕು ಹನಗವಾಡಿ ಬಳಿ 60 ಕೆಎಲ್‌ಪಿಡಿ ಸಾಮರ್ಥ್ಯದ ₹960 ಕೋಟಿ ವೆಚ್ಚದ 2ಜಿ ಎಥನಾಲ್ ಘಟಕವನ್ನು ಎಂ.ಆರ್.ಪಿ.ಎಲ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಘಟಕಕ್ಕೆ ಅಗತ್ಯ ಜಮೀನು ಸಹ ಕೆಐಎಡಿಬಿಯಿಂದ ಹಸ್ತಾಂತರವಾಗಿದೆ. ಕೃಷಿ ತ್ಯಾಜ್ಯದಿಂದ 2ಜಿ ಎಥನಾಲ್ ಉತ್ಪಾದನೆ ಮಾಡುವುದರಿಂದ ರೈತರಿಗೂ ಅನುಕೂಲ. ತಂತ್ರಜ್ಞಾನ ಉನ್ನತೀಕರಣದ ವಿಚಾರವಾಗಿ ಅನುಷ್ಟಾನ ವಿಳಂಬವಾಗಿದ್ದು, ಕೇಂದ್ರ ಪೆಟ್ರೊಲಿಯಂ ಸಚಿವಾಲಯದೊಂದಿಗೆ ಸಂಸದ ಜಿ.ಎಂ.ಸಿದ್ದೇಶ್ವರ ನಿರಂತರ ಸಂಪರ್ಕದಲ್ಲಿದ್ದಾರೆ. ಮೊದಲ ಆದ್ಯತೆ ಮೇರೆಗೆ ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತೇನೆ. ಇದರಿಂದ ಹರಿಹರ ಭಾಗದಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಹೇಳಿದರು.

- - -

ಟಾಪ್‌ ಕೋಟ್‌ 3ನೇ ಸಲ ನರೇಂದ್ರ ಮೋದಿ ಪ್ರಧಾನಿ ಆಗಬೇಕೆಂದು ಜನತೆ ನಿರ್ಧರಿಸಿದ್ದಾರೆ. ದಾವಣಗೆರೆ ಕ್ಷೇತ್ರಕ್ಕೆ ಗಾಯತ್ರಿ ಸಿದ್ಧೇಶ್ವರ ಸಂಸದೆಯಾದರೆ ಅಭಿವೃದ್ಧಿ ಆಗುತ್ತದೆಂದು ಜನರಲ್ಲಿ ನಂಬಿಕೆ ಇದೆ. ನನಗೆ ಮತ ಹಾಕಿದರೆ, ಮೋದಿಗೆ ಹಾಕಿದಂತೆ. ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ ರಚನೆ ಶತಃಸಿದ್ಧ

- ಗಾಯತ್ರಿ ಸಿದ್ಧೇಶ್ವರ, ಬಿಜೆಪಿ ಅಭ್ಯರ್ಥಿ

- - --24ಕೆಡಿವಿಜಿ9, 10:

ಹರಿಹರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮತಯಾಚಿಸಿದರು. ಶಾಸಕ ಬಿ.ಪಿ.ಹರೀಶ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಇತರರು ಇದ್ದರು.