ಗ್ಯಾರಂಟಿಗಳ ಜಾರಿ ಜತೆಗೆ ಅಭಿವೃದ್ಧಿಗೆ ಕಾಂಗ್ರೆಸ್ ಆದ್ಯತೆ: ಶಾಸಕ ಪಾಟೀಲ

| Published : Feb 25 2024, 01:50 AM IST

ಸಾರಾಂಶ

ರಾಜ್ಯದಲ್ಲಿ ಗ್ಯಾರಂಟಿಗಳ ಜಾರಿಗೆ ಜತೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಿರುವ ಕಾಂಗ್ರೆಸ್ ಸರ್ಕಾರವು ಜನಪರ ಆಡಳಿತವನ್ನು ನಡೆಸುತ್ತಿದ್ದು, ಲೋಕಸಭಾ ಚುನಾವಣೆ ಬಳಿಕ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಗಜೇಂದ್ರಗಡ: ರಾಜ್ಯದಲ್ಲಿ ಗ್ಯಾರಂಟಿಗಳ ಜಾರಿಗೆ ಜತೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಿರುವ ಕಾಂಗ್ರೆಸ್ ಸರ್ಕಾರವು ಜನಪರ ಆಡಳಿತವನ್ನು ನಡೆಸುತ್ತಿದ್ದು, ಲೋಕಸಭಾ ಚುನಾವಣೆ ಬಳಿಕ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಪಟ್ಟಣದ ಕಡ್ಡಿ ಅವರ ಗೊಲಗೇರಿ ಅವರ ಪ್ಲಾಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಅಂದಾಜು ರು.೧ ಕೋಟಿ ವೆಚ್ಚದಲ್ಲಿ ಕೆಆರ್‌ಐಡಿಯಲ್‌ನಿಂದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ವಿಧಾನಸಭಾ ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ್ದ ಗ್ಯಾರಂಟಿಗಳನ್ನು ಜಾರಿಗೆ ಮಾಡುವ ಮೂಲಕ ನುಡಿದಂತೆ ಕಾಂಗ್ರೆಸ್ ಸರ್ಕಾರವು ನಡೆಯುತ್ತಿರುವುದು ವಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳಿಗೆ ಅನುದಾನವನ್ನು ಬಳಕೆ ಮಾಡುತ್ತಿದ್ದು ರಾಜ್ಯದ ಅಭಿವೃದ್ಧಿಯನ್ನು ಕಡೆಗಣೆಸುತ್ತಿದೆ ಎಂದು ವಿಪಕ್ಷಗಳು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಜನತೆಯ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿವೆ ಎಂದರು.

ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಟೀಕಿಸಿದ್ದ ಕೇಂದ್ರ ಸರ್ಕಾರವು ಇಂದು ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ನಕಲು ಮಾಡುತ್ತಿರುವುದು ಅವರ ದ್ವಂದ್ವ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸುಳ್ಳು ಅಭಿವೃದ್ಧಿ ಯೋಜನೆಗಳನ್ನು ಜನತೆ ಧಿಕ್ಕರಿಸುವ ಮೂಲಕ ಅಭಿವೃದ್ಧಿಪೂರಕ ಹಾಗೂ ಜನಪರವಾದ ಆಡಳಿತಕ್ಕೆ ಆದ್ಯತೆ ನೀಡುವ ಕಾಂಗ್ರೆಸ್ ಸರ್ಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಲಿದ್ದಾರೆ. ಅದರಲ್ಲೂ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೇಳುವ ಧೈರ್ಯ ಮಾಡದ ಬಿಜೆಪಿ ಸಂಸದರನ್ನು ಜನತೆ ಮನೆಗೆ ಕಳುಹಿಸಲು ನಿರ್ಣಯಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ೨೭ ಮೀನುಗಾರರಿಗೆ ಶಾಸಕ ಜಿ.ಎಸ್. ಪಾಟೀಲ ಸಲಕರಣೆ ಕಿಟ್‌ನ್ನು ವಿತರಿಸಿದರು.

ಪುರಸಭೆ ವಿಪಕ್ಷ ನಾಯಕ ಮುರ್ತುಜಾ ಡಾಲಾಯತ್, ಸಿದ್ದಣ್ಣ ಬಂಡಿ, ಎಚ್.ಎಸ್. ಸೋಂಪುರ, ಎ.ಡಿ. ಕೋಲಕಾರ, ಶ್ರೀಧರ ಬಿದರಳ್ಳಿ, ಸುಭಾನಸಾಬ ಮ್ಯಾಗೇರಿ, ಶರಣಪ್ಪ ಚಳಗೇರಿ, ಪುರಸಭೆ ಸದಸ್ಯರಾದ ಶಿವರಾಜ ಘೋರ್ಪಡೆ, ರಾಜು ಸಾಂಗ್ಲೀಕರ, ವೆಂಕಟೇಶ ಮುದಗಲ್ ಹಾಗೂ ಪ್ರಭು ಚವಡಿ, ಶರಣಪ್ಪ ರೇವಡಿ, ಯಲ್ಲಪ್ಪ ಬಂಕದ, ಅಪ್ಪು ಮತ್ತಿಕಟ್ಟಿ, ಭಾಷಾ ಮುದಗಲ್, ಸುರೇಶ ಚವಡಿ, ಅಂದಪ್ಪ ರಾಠೋಡ, ಕನಕಪ್ಪ ಕಲ್ಲೊಡ್ಡರ, ಸಿದ್ದು ಗೊಂಗಡಶೆಟ್ಟಿ ಸೇರಿ ಇತರರು ಇದ್ದರು.