ಅಪರಾಧಿಗಳ ರಕ್ಷಣೆ ಮಾಡುತ್ತಿರುವ ಕಾಂಗ್ರೆಸ್‌: ಕಾಗೇರಿ

| Published : Oct 14 2024, 01:25 AM IST

ಅಪರಾಧಿಗಳ ರಕ್ಷಣೆ ಮಾಡುತ್ತಿರುವ ಕಾಂಗ್ರೆಸ್‌: ಕಾಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಬ್ರಿಟಿಷ್ ಮಾನಸಿಕತೆ ಬೆಳೆಸಿಕೊಂಡಿದ್ದು, ರಾಜ್ಯದಲ್ಲಿ ಸರ್ಕಾರವಿದೆ, ಆದರೆ ಆಡಳಿತ ಶೂನ್ಯವಾಗಿದೆ. ರಾಜಕೀಯ ದ್ವೇಷ, ಸೇಡಿನ ರಾಜಕಾರಣದಲ್ಲಿ ಕಾಂಗ್ರೆಸ್ ಮುಳುಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

ಶಿರಸಿ: ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ವಿಧ್ವಂಸಕ ಕೃತ್ಯ ನಡೆಸಿದ ೧೫೭ ಜನರ ಮೇಲೆ ರಾಷ್ಟ್ರದ್ರೋಹದ ಪ್ರಕರಣ ಹಿಂಪಡೆಯುವ ಮೂಲಕ ಅಪರಾಧಿಗಳ ರಕ್ಷಣೆಗೆ ನಾವಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್ ನೀಡಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿಯಲ್ಲಿ ೨೦೨೨ರಂದು ನಡೆದ ಘಟನೆಯಲ್ಲಿ ಮುಸ್ಲಿಮರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ವಿಧ್ವಂಸಕ ಕೃತ್ಯ ನಡೆಸಿದ್ದರು. ಆ ಘಟನೆಯಲ್ಲಿ ಅನೇಕ ಪೊಲೀಸರು ಗಾಯಗೊಂಡಿದ್ದರು. ಅಲ್ಪಸಂಖ್ಯಾತ ಸಮುದಾಯದವರು ತಮ್ಮ ಬೇಡಿಕೆಯನ್ನು ಸಲ್ಲಿಸುವ ಪ್ರಜಾಪ್ರಭುತ್ವದ ಎಲ್ಲ ಅವಕಾಶ ಮೀರಿ ವಿಧ್ವಂಸಕ ಕೃತ್ಯದಲ್ಲಿ ತೊಡಗಿಕೊಂಡಿದ್ದಾರೆ. ಡಿಜೆ ಹಳ್ಳಿ, ಶಿವಮೊಗ್ಗ ಸೇರಿದಂತೆ ಕರಾವಳಿ ಭಾಗದಲ್ಲಿ ಗಲಭೆ, ಅಶಾಂತಿ ನಿರ್ಮಾಣ ಮಾಡಿದಲ್ಲದೇ, ನಮಗೆ ರಕ್ಷಣೆ ನೀಡುವ ಪೊಲೀಸರ ಮೇಲೆ ಹಲ್ಲೆ ಮಾಡಿ, ಪ್ರಜಾಪ್ರಭುತ್ವದಲ್ಲಿ ಕಾನೂನಿನ ಮೇಲೆ ನಂಬಿಕೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್‌ನ ಮುಖಂಡರಿಗೆ ಸಂವಿಧಾನ, ಕಾನೂನು ಬಗ್ಗೆ ಗಂಭೀರತೆ ಇಲ್ಲ. ಅಪರಾಧಿಗಳಿಗೆ ನೇರವಾಗಿ ರಕ್ಷಣೆ ಮಾಡುವ ಹೀನಾಯ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ ಎಂದು ಆರೋಪಿಸಿದರು.ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಬಾರದು ಎಂದು ಓಲೈಕೆಯ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್‌ಗೆ ಹಿಂದೂಗಳ ಮಾತನಾಡುವಾಗ ಜಾತಿಯೇ ಮುಖ್ಯವಾಗುತ್ತದೆ. ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದಲ್ಲಿ ಅನೇಕ ಜಾತಿಗಳಿವೆ. ಅಲ್ಲಿ ಯಾಕೆ ಜಾತಿಗಣತಿ ನಡೆಸುತ್ತಿಲ್ಲ. ಕಾಂಗ್ರೆಸ್‌ನ ಷಡ್ಯಂತ್ರಕ್ಕೆ ಅಲ್ಪಸಂಖ್ಯಾತರು ಬಲಿಯಾಗಬಾರದು. ಕಾಂಗ್ರೆಸ್ ಬ್ರಿಟಿಷ್ ಮಾನಸಿಕತೆ ಬೆಳೆಸಿಕೊಂಡಿದ್ದು, ರಾಜ್ಯದಲ್ಲಿ ಸರ್ಕಾರವಿದೆ, ಆದರೆ ಆಡಳಿತ ಶೂನ್ಯವಾಗಿದೆ. ರಾಜಕೀಯ ದ್ವೇಷ, ಸೇಡಿನ ರಾಜಕಾರಣದಲ್ಲಿ ಕಾಂಗ್ರೆಸ್ ಮುಳುಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶಗೊಂಡರು.ವರ್ಗಾವಣೆ ದಂಧೆ: ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ಅಧಿಕಾರಿಗಳ ವರ್ಗಾವಣೆಯನ್ನು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಡಳಿತ ನಡೆಸುವುದು ಬೇಕಿಲ್ಲ. ಜಿಲ್ಲೆಯಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕೆಂದು ಬಹಳ ವರ್ಷದಿಂದ ಹೋರಾಟ ನಡೆಯುತ್ತಿದೆ. ಆದರೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ವೈದ್ಯರನ್ನು ವರ್ಗಾವಣೆ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.ಅತಿಕ್ರಮಣದಾರರ ಪರ: ತಲೆತಲಾಂತರಗಳಿಂದ ಅರಣ್ಯಭೂಮಿಯಲ್ಲಿ ವಾಸಿಸುತ್ತಿರುವವರ ಅತಿಕ್ರಮಣದಾರರ ರಕ್ಷಣೆಗೆ ಕೇಂದ್ರ ಸರ್ಕಾರ ನಿಲ್ಲುತ್ತದೆ. ಕಸ್ತೂರಿ ರಂಗನ್ ವರದಿಯ ಕುರಿತು ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಲಿ ಎಂದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ನಿಡಗೋಡ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್ಟ, ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ, ನಗರ ಮಂಡಳ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಪ್ರಮುಖರಾದ ಶ್ರೀಕಾಂತ ನಾಯ್ಕ, ನಂದನಸಾಗರ, ರವಿಕುಮಾರ ಶೆಟ್ಟಿ, ಮಂಜುನಾಥ ಭಂಡಾರಿ ಮತ್ತಿತರರು ಇದ್ದರು.