ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ದಲಿತರ ಹಾಗೂ ಮಹಿಳೆಯರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಶಾಸಕ ಮುನಿರತ್ನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ನಗರದ ಎಸ್ಪಿ ಕಚೇರಿ ಎದುರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಘೋಷಣೆ ಕೂಗುತ್ತಾ ಆಗಮಿಸಿ, ಶಾಸಕ ಮುನಿರತ್ನ ವಿರುದ್ಧ ದಿಕ್ಕಾರ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಹಾಸನ ಜಿಲ್ಲೆಯಲ್ಲೂ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಅಪರ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಅವರಿಗೆ ಮನವಿ ಸಲ್ಲಿಸಿದರು.ಕಾಂಗ್ರೆಸ್ ಮುಖಂಡ ಎಚ್ ಕೆ ಮಹೇಶ್ ಮಾತನಾಡಿ, ಶಾಸಕ ಮುನಿರತ್ನ ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿದ್ದುಕೊಂಡು ಮಹಿಳೆಯರ ಬಗ್ಗೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಬಗ್ಗೆ ಆವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವುದು ಸಮಾಜವೇ ತಲೆತಗ್ಗಿಸುವ ಹೀನಕೃತ್ಯವಾಗಿದೆ. ಆಡಿಯೋ ವೈರಲ್ ಆದ ಬಳಿಕ ತಲೆಮರೆಸಿಕೊಂಡಿರುವ ಆತನ ದುಷ್ಕೃತ್ಯಕ್ಕೆ ತಕ್ಕ ಶಾಸ್ತಿಯಾಗಬೇಕು. ಅವನು ಮಾತನಾಡಿರುವ ಅಸಂವಿಧಾನಿಕ ಪದಗಳು ಬಿಜೆಪಿಯವರ ಮನಸ್ಥಿತಿಯನ್ನು ತೋರಿಸುತ್ತದೆ. ದಲಿತರ ಹಾಗೂ ಮಹಿಳೆಯರ ಬಗ್ಗೆ ಬಿಜೆಪಿ ಹೊಂದಿರುವ ನಿಲುವು ಏನೆಂಬುದು ಶಾಸಕ ಮುನಿರತ್ನ ಅವರ ನಡವಳಿಕೆಯಿಂದ ಜಗತ್ ಜಾಹಿರಾಗಿದೆ ಎಂದರು. ಕೂಡಲೇ ಗೃಹ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆತನ ವಿರುದ್ಧ ಕಠಿಣ ಕ್ರಮ ಜರುಗಿಸಿ ಗಡಿಪಾರು ಮಾಡಬೇಕು, ಇಂತಹ ನೀಚರಿಂದ ಇಡೀ ರಾಜಕೀಯ ವ್ಯವಸ್ಥೆಗೆ ಕಳಂಕ ಬರಲಿದೆ ಎಂದರು. ಆತನ ವಿರುದ್ಧ ಪೋಲಿಸ್ ಇಲಾಖೆ ಕಠಿಣ ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಕಾಂಗ್ರೆಸ್ನ ಎಸ್ಸಿ, ಎಸ್ಟಿ ವಿಭಾಗದ ಅಧ್ಯಕ್ಷ ಮಲ್ಲಿಗೆವಾಳು ದೇವಪ್ಪ ಮಾತನಾಡಿ, ಸಂವಿಧಾನಾತ್ಮಕ ಸ್ಥಾನ ಅಲಂಕರಿಸಿರುವ ಶಾಸಕ ಮುನಿರತ್ನ ಗುತ್ತಿಗೆದಾರರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಆತನಿಗೆ ಪ್ರಾಣ ಬೆದರಿಕೆ ಹಾಕಿರುವ ಮುನಿರತ್ನ ತನ್ನ ಸ್ಥಾನದಲ್ಲಿ ಮುಂದುವರೆಯಲು ಅನರ್ಹ ಎಂದರು. ಕೂಡಲೇ ರಾಜ್ಯಪಾಲರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುನಿರತ್ನ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು ಜೊತೆಗೆ ಆತನ ವಿರುದ್ಧ ಅಟ್ರಾಸಿಟಿ ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಹಿಂದೆಯೂ ಕೂಡ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಾಸಕ ಮುನಿರತ್ನ, ವಿವಿಧ ಸಮುದಾಯಗಳ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ರೌಡಿಗಳ ನಂಟನ್ನು ಹೊಂದಿರುವ ಮುನಿರತ್ನ ಅವರನ್ನು ಮುಂದಿಟ್ಟುಕೊಂಡು ಅಮಾಯಕರನ್ನು ಎದುರಿಸಿ ಬೆದರಿಸಿ ರಾಜಕೀಯ ಮಾಡುತ್ತಿದ್ದಾರೆ. ಈ ಎಲ್ಲಾ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಜೊತೆಗೆ ಆತನನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಕಾಂಗ್ರೆಸ್ ಮುಖಂಡರಾದ ಡಿ.ಸಿ. ಸಣ್ಣಸ್ವಾಮಿ, ಚಂದ್ರು, ವಿಶ್ವನಾಥ್, ತಾರಚಂದನ್, ಅಶೋಕ್ ನಾಯಕರಹಳ್ಳಿ, ರಾಘು ಸಿದ್ದಯ್ಯ ನಗರ, ಅರಸೀಕೆರೆ ವೆಂಕಟೇಶ್, ರಘು, ವೆಂಕಟೇಶ್ ವಿದ್ಯಾನಗರ, ಅಬ್ದುಲ್ ಕಯುಮ್, ನಾಗರಾಜ್, ಗಣೇಶ್ ಮಹಿಳಾ ಮುಖಂಡರಾದ ತಮ್ಲಾಪುರ, ರತ್ನಮ್ಮ, ಭಾಗ್ಯ, ಅಶೋಕ್ ನಾಯಕರಹಳ್ಳಿ, ಅಬ್ದುಲ್ ಕಹಿಂ, ಪ್ರಕಾಶ್, ರಾಘವೇಂದ್ರ ಇತರರು ಉಪಸ್ಥಿತರಿದ್ದರು.