ಸಾರಾಂಶ
ಹಾವೇರಿ: ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ಕೊಡುಗೆ ನೀಡದೇ ಮಲತಾಯಿ ಧೋರಣೆ ತೋರಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೈಯಲ್ಲಿ ಚೊಂಬು ಹಿಡಿದು ಶನಿವಾರ ಪ್ರತಿಭಟನೆ ನಡೆಸಿದರು.ನಗರದ ಮೈಲಾರ ಮಹದೇವ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ನಗರಸಭೆ ಮುಂಭಾಗ, ಎಂ.ಜಿ. ವೃತ್ತ, ಹಳೇ ಎಸ್‌ಪಿ ಆಫೀಸ್ ರಸ್ತೆ, ಜೆ.ಪಿ. ವೃತ್ತದ ಮಾರ್ಗವಾಗಿ ಸಂಚರಿಸಿ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿತು. ಆನಂತರ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ರಾಜ್ಯಕ್ಕೆ ಬಹಳಷ್ಟು ಅನ್ಯಾಯ ಮಾಡಿದೆ. ಬಿಜೆಪಿ ಸರ್ಕಾರ ರಚನೆಗೆ ಬೆಂಬಲ ನೀಡಿದ ಆಂಧ್ರಪ್ರದೇಶ ಹಾಗೂ ಬಿಹಾರ ರಾಜ್ಯಕ್ಕೆ ಸಾವಿರಾರು ಕೋಟಿ ಕೊಡುಗೆ ನೀಡಿದ್ದು, ಮೂರ್ಖತನದ ಪರಮಾವಧಿ. ಬಜೆಟ್‌ನಲ್ಲಿ ನೀರಾವರಿ, ರೈಲ್ವೆ ಕ್ಷೇತ್ರಗಳನ್ನು ಕಡೆಗಣಿಸಿದ್ದಾರೆ. ರೈತರು ಅತಿವೃಷ್ಟಿ, ಅನಾವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗೆ ಧಾವಿಸಬೇಕಿದ್ದ ಸರ್ಕಾರ ವಿಫಲವಾಗಿದೆ. ಅಲ್ಲದೇ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಸಿಎಂ ಸಿದ್ದರಾಮಯ್ಯ ಅವರನ್ನು ಇಡಿ ದಾಳಿಗೆ ಸಿಲುಕಿಸುವ ಹುನ್ನಾರ ನಡೆಸಲಾಗುತ್ತಿದೆ. ಇದನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದರು.ಈ ಕೂಡಲೇ ಕೇಂದ್ರ ಸರ್ಕಾರ ರಾಜ್ಯದ ಜನಪರ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಜಿಎಸ್‌ಟಿ ಹಣದಲ್ಲಿ ಬಾಕಿ ಉಳಿಸಿಕೊಂಡಿರುವ ಹಣವನ್ನು ರಾಜ್ಯಕ್ಕೆ ಸಂಪೂರ್ಣವಾಗಿ ವಾಪಸ್ ನೀಡಬೇಕು. ರಾಜ್ಯದ ರೈತರ ಹಿತಕಾಯಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಉತ್ತರ ಕರ್ನಾಟಕ ಭಾಗದಿಂದ ಆರಿಸಿ ಹೋದ ಘಟಾನುಘಟಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ, ಪ್ರಹ್ಲಾದ್ ಜೋಶಿ ಅವರು ಕೂಡ ಉತ್ತರ ಕರ್ನಾಟಕ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲರಾಗಿದ್ದಾರೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಜಾರಿಗೆ ತರುವಂತೆ ಆಗ್ರಹಿಸಿದರು.ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ನೆಹರು ಓಲೇಕಾರ ಮಾತನಾಡಿ, ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಕೈಗೊಂಬೆಯಾಗಿದೆ. ಆಂಧ್ರ ಹಾಗೂ ಬಿಹಾರ ಸಿಎಂಗಳ ಏಜೆಂಟರ್‌ಗಳಂತೆ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಸುಭದ್ರವಾಗಿರುವ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ತನ್ನ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಾ ಹೊರಟಿವೆ. ಈ ಆಟ ಬಹಳಷ್ಟು ದಿನ ನಡೆಯುವುದಿಲ್ಲ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ಎಂ.ಎಂ. ಹಿರೇಮಠ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣೆ, ಮುಖಂಡರಾದ ಪ್ರಭು ಬಿಷ್ಟನಗೌಡ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹಿರೇಮಠ, ಎಂ.ಎಂ. ಮೈದೂರ, ಬಸವರಾಜ ಬಳ್ಳಾರಿ, ಎಂ.ಕೆ. ಮುಲ್ಲಾ, ರಮೇಶ ಆನವಟ್ಟಿ, ಬಾಬುಸಾಬ್ ಮೊಮಿನಗಾರ, ಶಿಗ್ಗಾಂವಿ ಬ್ಲಾಕ್ ಅಧ್ಯಕ್ಷ ಬಿ.ಸಿ. ಪಾಟೀಲ, ಸಿ.ಎಸ್. ಲಕ್ಷ್ಮೇಶ್ವರಮಠ, ಶಾಂತಕ್ಕ ಶಿರೂರ, ರೇಣುಕಾ ಪುತ್ರನ್, ಜಮೀರ್ ಜಿಗರಿ, ಉಮೀದ್ ನದಾಫ, ಸಂಜಯಗಾಂಧಿ ಸಂಜೀವಣ್ಣವರ ಇತರರು ಇದ್ದರು.