ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ಮಾಡುತ್ತಿರುವ ಪಿತೂರಿ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಬಿಜೆಪಿ ಜಿಲ್ಲಾ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಹಾವೇರಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ಮಾಡುತ್ತಿರುವ ಪಿತೂರಿ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಬಿಜೆಪಿ ಜಿಲ್ಲಾ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಇದಕ್ಕೂ ಮೊದಲು ನಗರದ ಕಾಗಿನೆಲೆ ರಸ್ತೆಯ ಮುರುಘರಾಜೇಂದ್ರ ಮಠದಲ್ಲಿ ಜಮಾವಣೆಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಬಿಜೆಪಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ, ಗೇಟ್ ಮೇಲೆ ಹತ್ತಲು ಯತ್ನಿಸಿದರು. ಸ್ಥಳದಲ್ಲಿ ಭದ್ರತೆಯಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿನಾಕಾರಣ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡುತ್ತಿದೆ. ಕಳೆದ ಹನ್ನೊಂದು ವರ್ಷಗಳಿಂದ ಕಾಂಗ್ರೆಸ್ ನಾಯಕರನ್ನು ವಿವಿಧ ಪ್ರಕರಣಗಳಲ್ಲಿ ಇಡಿ ಮತ್ತು ಸಿಬಿಐಗೆ ಗುರಿಯಾಗಿಸಿ ಸಿಲುಕಿಸಲು ಯತ್ನಿಸುತ್ತಿದ್ದಾರೆ. ಯಂಗ್ ಇಂಡಿಯಾದಿಂದ ಆರಂಭವಾದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಕಾಂಗ್ರೆಸ್ ಪಕ್ಷದ ಆಸ್ತಿ ಹೊರತು ಯಾರ ಸ್ವತ್ತಲ್ಲ. 50-60 ವರ್ಷಗಳಿಂದ ನಿರಂತರವಾಗಿ ಕಾಂಗ್ರೆಸ್ ಸುದ್ದಿಗಳನ್ನು ಪಸರಿಸುತ್ತಾ ಬಂದಿದೆ. ಪತ್ರಿಕೆಯಲ್ಲಿ ಪ್ರಮುಖವಾಗಿ ಇಂದಿರಾ ಗಾಂಧಿ, ರಾಜೀವಗಾಂಧಿ ಮನೆತನದವರು ಅನೇಕ ನಾಯಕರು ಷೇರು ಹೊಂದಿದ್ದಾರೆ. ಮುಂದುವರೆದ ಭಾಗವಾಗಿ ರಾಹುಲ್‌ಗಾಂಧಿ, ಸೋನಿಯಾ ಗಾಂಧಿ ಷೇರು ಹೊಂದಿದ್ದಾರೆ. ನಿರಂತರವಾಗಿ ಆದಾಯವನ್ನು ವೃದ್ಧಿಸಿಕೊಂಡು ಬಂದಿದ್ದಾರೆ. ಇದು ಬಿಜೆಪಿಯವರಿಗೆ ಕಣ್ಣು ಕುಕ್ಕಿಸುವಂತಾಗಿದೆ ಎಂದರು.ಭವಿಷ್ಯದಲ್ಲಿ ಪ್ರಧಾನಿಯಾಗುವ ರಾಹುಲ್ ಗಾಂಧಿಯವರನ್ನು ಹಾಗೂ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಅವರನ್ನು ಇಡಿ ಮತ್ತು ಸಿಬಿಐನಲ್ಲಿ ಸಿಲುಕಿಸಿ ಜೈಲಿಗೆ ತಳ್ಳುವ ಕುತಂತ್ರವನ್ನು ಮೋದಿ ಮತ್ತು ಅಮಿತ್ ಶಾ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟನವರು ಆರೋಪದಲ್ಲಿ ಸಾಕ್ಷಿ ಪುರಾವೆ ಇಲ್ಲ, ಇದೊಂದು ಕಾನೂನುಬಾಹಿರ ಪ್ರಕರಣ ಎಂದು ನಿರ್ದೋಷಿಗಳನ್ನಾಗಿ ಮಾಡಿದೆ. ನಮ್ಮ ನಾಯಕರ ಮೇಲಿನ ಆರೋಪ ಮಾಡುವ ಮೋದಿ ಮತ್ತು ಅಮಿತ್‌ಶಾ ರಾಜೀನಾಮೆ ನೀಡಬೇಕು. ಈ ಬಗ್ಗೆ ಡಿಸಿಯವರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸುತ್ತೇವೆ ಎಂದರು.ಈ ವೇಳೆ ಶಾಸಕ ರುದ್ರಪ್ಪ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಎಂ.ಎಂ. ಮೈದೂರ, ಪ್ರಸನ್ನ ಹಿರೇಮಠ, ಜಮೀರ್ ಜಿಗರಿ, ರಾಘವೇಂದ್ರ ಬಾಸೂರ, ಶಂಕರ ಮೆಹರವಾಡೆ, ವಿನಯ ಪಾಟೀಲ, ಬಸವರಾಜ ಬಳ್ಳಾರಿ, ಸುಭಾನಿ ನದಾಫ, ಉಮರ್ ಇನಾಮದಾರ, ನವೀದ್ ವರ್ದಿ, ಗದಿಗೆಪ್ಪ ನೆಲೋಗಲ್ಲ, ಉಳಿವೆಪ್ಪ ಹಲಗಣ್ಣವರ, ಪ್ರೇಮಾ ಪಾಟೀಲ, ರಾಧಾ ಸವಣೂರ, ನಂದಾ ಕಳಸೂರ, ಸೀಮಾ ಮಾಳಗಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.