ರಾಜ್ಯಪಾಲರ ಕ್ರಮ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

| Published : Aug 20 2024, 12:47 AM IST

ರಾಜ್ಯಪಾಲರ ಕ್ರಮ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಬೃಹತ್‌ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸೋಮವಾರ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.ನಗರದ ಶಿವಪ್ಪನಾಯಕ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಶಾಸಕರು, ಮಾಜಿ ಶಾಸಕರು, ವಿವಿಧ ನಿಗಮಗಳ ಅಧ್ಯಕ್ಷರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕಾಂಗ್ರೆಸ್ ಸರ್ಕಾರ ಬೀಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ರಾಜಭವನ ಅಕ್ಷರಶಃ ಬಿಜೆಪಿ ಕಚೇರಿಯಾಗಿದೆ. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ. ಕಾನೂನನ್ನು ಗಾಳಿಗೆ ತೂರಿ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ಎಂದು ಪ್ರತಿಭಟನಾಕಾರರು ದೂರಿದರು.

ಸಂವಿಧಾನದ ಮೌಲ್ಯಗಳನ್ನೇ ಗಾಳಿಗೆ ತೂರಲಾಗಿದೆ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ರಾಜ್ಯಪಾಲರ ಕಚೇರಿಯು ಪಕ್ಷದ ಮಾತನ್ನು ಕೇಳುವುದಕ್ಕಾಗಿ ಇದೆ ಎಂದು ರಾಜ್ಯಪಾಲರ ನಡತೆಯಿಂದ ಗೊತ್ತಾಗಿದೆ. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಿ ಕರ್ನಾಟಕದ ಜನರಿಗೆ ದ್ರೋಹ ಬಗೆಯುವ ಕೆಲಸ ಬಿಜೆಪಿ ಮಾಡಿದೆ ಎಂದು ಆರೋಪಿಸಿದರು.

ದೇಶದ ರಾಜಕೀಯ ಇತಿಹಾಸದಲ್ಲಿಯೇ ರಾಜ್ಯಪಾಲರು ಪ್ರಾಮಾಣಿಕ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಬಿಜೆಪಿಯವರ ಕುತಂತ್ರಕ್ಕೆ ತಲೆ ಭಾಗಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಮುಡಾದಲ್ಲಿ ಭ್ರಷ್ಟಾಚಾರ ನಡೆದಿದ್ದು, ಮಂತ್ರಿಗಳು, ಶಾಸಕರು ಹಗರಣದಲ್ಲಿ ಪಾಲ್ಗೊಂಡಿದ್ದಾರೆ. ಅವರು ತಪ್ಪು ಮಾಡಿ ಅದನ್ನು ಈಗ ಮುಖ್ಯಮಂತ್ರಿಗಳಿಗೆ ಕಳಂಕ ತರುವ ಹಿನ್ನೆಲೆ ರಾಜಭವನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿ ಅನೇಕರ ವಿರುದ್ಧವೂ ತನಿಖೆಗೆ ಆಗ್ರಹಪಡಿಲಾಗಿತ್ತು. ಆದರೆ, ಹಿಂದಿನ ಬಿಜೆಪಿ ಮಂತ್ರಿಗಳ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿಲ್ಲ. ಈಗ ಉದ್ದೇಶ ಪೂರ್ವಕವಾಗಿಯೇ ರಾಜ್ಯಪಾಲರು ಈ ಕೆಲಸ ಮಾಡಿದ್ದಾರೆ ಎಂದು ಹರಿಹಾಯ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನುಮತಿ ಕೂಡಲೇ ಹಿಂತೆಗೆದುಕೊಳ್ಳಬೇಕು. ರಾಜಕೀಯ ಸೇಡಿಗಾಗಿ ರಾಜ್ಯಪಾಲರ ಕಚೇರಿ ದುರುಪಯೋಗವಾಗಿದೆ. ಕೇಂದ್ರದ ಹಿತಾಸಕ್ತಿಗಳಿಗೆ ಅದು ಬಲಿಯಾಗಿದೆ. ಸೇಡಿನ ಕಚೇರಿಯಾಗಿದೆ. ಕಾನೂನು ಪ್ರಕ್ರಿಯೆಗಳ ದುರ್ಬಲಗೊಳಿಸುವ ಹುನ್ನಾರ ಇದಾಗಿದೆ. ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆಯಾಗಿದ್ದು, ಉದ್ದೇಶಪೂರಿತ ಪಿತೂರಿಯಾಗಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳನ್ನು ಪದಚ್ಯುತಿಗೊಳಿಸುವ ಅಪ್ರಜಾಸತ್ತಾತ್ಮಕ ತೀರ್ಮಾನಗಳು ಬಿಜೆಪಿಯೇತರ ಸರ್ಕಾರಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ನಡೆಯುತ್ತಿದೆ. ಉತ್ತರಾಖಂಡ್, ಜಾರ್ಖಂಡ್, ದೆಹಲಿ, ಇದೀಗ ಕರ್ನಾಟಕ ರಾಜ್ಯಗಳಲ್ಲಿ ಈ ರೀತಿ ಪಿತೂರಿಗಳು ನಡೆಯುತ್ತಿವೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯ ತರುವ ಕೆಲಸವಾಗಿದೆ. ಕೂಡಲೇ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ತಕ್ಷಣವೇ ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್‌ ಸದಸ್ಯೆ ಬಲ್ಕೀಶ್ ಬಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್‌, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಮುಖಂಡರಾದ ಆಯನೂರು ಮಂಜುನಾಥ್, ಕಲಗೋಡು ರತ್ನಾಕರ್, ಎನ್. ರಮೇಶ್, ಶ್ರೀನಿವಾಸ್ ಕರಿಯಣ್ಣ, ಕಲೀಂ ಪಾಶಾ, ಪಲ್ಲವಿ, ಎಂ. ಶ್ರೀಕಾಂತ್, ಅನಿತಾಕುಮಾರಿ, ಎಸ್.ಪಿ. ಶೇಷಾದ್ರಿ, ಇಸ್ಮಾಯಿಲ್ ಖಾನ್, ಇಕ್ಕೇರಿ ರಮೇಶ್, ಜಿ.ಡಿ. ಮಂಜುನಾಥ್, ವೈ.ಎಚ್‌. ನಾಗರಾಜ್. ಎಸ್.ಕೆ. ಮರಿಯಪ್ಪ, ಶರತ್ ಮರಿಯಪ್ಪ, ಮೋಹನ್ ಭದ್ರಾವತಿ, ಸ್ಟೆಲಾ ಮಾರ್ಟಿನ್, ಸುವರ್ಣಾ ನಾಗರಾಜ್ ಸೇರಿದಂತೆ ಹಲವು ಇದ್ದರು.