ಸಂಸದ ಅನಂತಕುಮಾರ್‌ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

| Published : Jan 18 2024, 02:01 AM IST

ಸಾರಾಂಶ

ಬೀಳಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಅವಹೇಳನಕಾರಿಯಾಗಿ ಹಾಗೂ ಸಾಮಾಜಿಕ ಸಾಮರಸ್ಯ ಕದಡುವ ಹೇಳಿಕೆ ನೀಡಿದ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಕೂಡಲೇ ಬಂಧಿಸಿ ಕಾನೂನು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಇಲ್ಲಿನ ಅಂಬೇಡ್ಕರ್‌ ವೃತ್ತದಲ್ಲಿ ಜಮಾವಣೆಗೊಂಡ ಮುಖಂಡರು, ಕಾರ್ಯಕರ್ತರು ಪಟ್ಟಣದ ಮುಖ್ಯ ರಸ್ತೆಯ ಮೂಲಕ ಪ್ರತಿಭಟನೆ ಮೆರವಣಿಗೆ ನಡೆಸಿ ಟಿಪ್ಪು ವೃತ್ತ, ಗಾಂಧಿ ವೃತ್ತದ ಮಾರ್ಗವಾಗಿ ತಹಸೀಲ್ದಾರ್‌ ಕಾರ್ಯಾಲಯ ತಲುಪಿ ಕೆಲಕಾಲ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಅವಹೇಳನಕಾರಿಯಾಗಿ ಹಾಗೂ ಸಾಮಾಜಿಕ ಸಾಮರಸ್ಯ ಕದಡುವ ಹೇಳಿಕೆ ನೀಡಿದ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಕೂಡಲೇ ಬಂಧಿಸಿ ಕಾನೂನು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ಅಂಬೇಡ್ಕರ್‌ ವೃತ್ತದಲ್ಲಿ ಜಮಾವಣೆಗೊಂಡ ಮುಖಂಡರು, ಕಾರ್ಯಕರ್ತರು ಪಟ್ಟಣದ ಮುಖ್ಯ ರಸ್ತೆಯ ಮೂಲಕ ಪ್ರತಿಭಟನೆ ಮೆರವಣಿಗೆ ನಡೆಸಿ ಟಿಪ್ಪು ವೃತ್ತ, ಗಾಂಧಿ ವೃತ್ತದ ಮಾರ್ಗವಾಗಿ ತಹಸೀಲ್ದಾರ್‌ ಕಾರ್ಯಾಲಯ ತಲುಪಿ ಕೆಲಕಾಲ ಪ್ರತಿಭಟಿಸಿದರು.

ಶಾಸಕ ಜೆ ಟಿ ಪಾಟೀಲ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದು ಅಕ್ಷಮ್ಯ ಅಪರಾಧ. ಸಿಎಂ ವಿರುದ್ಧ ಬಾಯಿಗೆ ಬಂದಂತೆ ಮಾತನಾಡೋದು ಯಾವುದೇ ಮುಖಂಡರಿಗೂ ಶೋಭೆ ತರಲ್ಲ. ಸಂಸದ ಅನಂತಕುಮಾರ್ ವಿರುದ್ಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಳಿ ದೂರು ದಾಖಲಿಸಲಾಗಿದೆ, ಗೃಹಮಂತ್ರಿಗಳಿಗೂ ವಿಷಯ ಗಮನಕ್ಕೆ ಇದ್ದು, ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಬರುವ ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕರು ತೀವ್ರ ಹೋರಾಟ ನಡೆಸಲಿದ್ದಾರೆ ಎಂದರು.

ಹಿರಿಯ ನಾಯಕ, ಮಾಜಿ ಸಚಿವ ಎಸ್.ಆರ್‌. ಪಾಟೀಲ ಮಾತನಾಡಿ, ಪಕ್ಷ ಯಾವುದೇ ಇರಲಿ. ಮುಖಂಡರ ವಿರುದ್ಧ ಅಸಂವಿಧಾನಿಕ ಪದ ಬಳಕೆ ಶೋಭೆಯಲ್ಲ. ಕೆಟ್ಟದ್ದನ್ನು ಮಾತನಾಡಿದವರಿಗೆ ಕೆಟ್ಟದ್ದೇ ಆಗುವುದು, ನನ್ನ ರಾಜಕೀಯ ಜೀವನದಲ್ಲಿ ಒಂದೆರಡು ಬಾರಿ ಕೆಟ್ಟದಾಗಿ ಮಾತನಾಡಿದಾಗ ಪಶ್ಚಾತ್ತಾಪವಾಗಿ ಕ್ಷಮೆ ಕೇಳಿದ ಉದಾಹರಣೆ ಇವೆ. ಸಾರ್ವಜನಿಕ ಜೀವನದಲ್ಲಿ ರಾಜಕಾರಣಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಕೆಟ್ಟ ಪದ ಬಳಸುವ ಯಾವುದೇ ವ್ಯಕ್ತಿಯನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ ಎಂದರು.

ಬಸವಪ್ರಭು ಸರನಾಡಗೌಡ ಮಾತನಾಡಿದರು. ಕಾಂಗ್ರೆಸ್‌ ಅಧ್ಯಕ್ಷ ಹಣಮಂತ ಕಾಖಂಡಕಿ, ಪಪಂ ಸದಸ್ಯ ಪಡಿಯಪ್ಪ ಕರಿಗಾರ, ಅನವೀರಯ್ಯ ಪ್ಯಾಟಿಮಠ, ನಗರ ಘಟಕ ಅಧ್ಯಕ್ಷ ಸಿದ್ದು ಸಾರಾವರಿ, ಹಿರಿಯರಾದ ಸತ್ಯಪ್ಪ ಮೇಲ್ನಾಡ, ರಾಮನಗೌಡ ಜಕ್ಕನಗೌಡರ, ಶ್ರೀಶೈಲ ಸೂಳಿಕೇರಿ, ಮಹಾದೇವ ಹಾದಿಮನಿ, ಯಮನಪ್ಪ ರೊಳ್ಳಿ, ಜಿ.ಆರ್. ಪಾಟೀಲ, ಬಸವರಾಜ ಹಳ್ಳದಮನಿ, ಶ್ರೀಶೈಲ ಅಂಟೀನ್, ಎಂ.ಎಂ.ಖಾಜಿ, ಅಬುಶ್ಯಾಂ ಖಾಜಿ, ಶಿವಾನಂದ ಮಾದರ, ಬಿ.ಆರ್. ಸೊನ್ನದ, ಸಂಗಪ್ಪ ಗಾಳಿ, ಅನೀಲ ಗಚ್ಚಿನಮನಿ, ರಸೂಲ್‌ ಮುಜಾವರ, ಸಂತೋಷ ಜಂಬಗಿ, ರವಿ ಪಾಟೀಲ ಸೇರಿದಂತೆ ನೂರಾರು ಕಾರ್ಯಕರ್ತರು, ಮಹಿಳಾ ಘಟಕದ ಪದಾಧಿಕಾರಿಗಳು ಇದ್ದರು.