.ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ

| Published : Apr 16 2025, 12:39 AM IST

.ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯವರಿಗೆ ನೈತಿಕತೆಯಿದ್ದರೇ ಮೋದಿ ಮುಂದೆ ಹೋಗಿ ಬೆಲೆ ಏರಿಕೆ ನಿಲ್ಲಿಸಿ, ನಮ್ಮ ರಾಜ್ಯಕ್ಕೆ ತೆರಿಗೆ ಹಣ ಕೊಡಿ ಎಂದು ಪ್ರತಿಭಟನೆ ಮಾಡಲಿ. ರಾಜ್ಯ ಬಿಜೆಪಿ ನಾಯಕ ವಿಜಯೇಂದ್ರ ತನ್ನ ಪ್ರತಿಷ್ಠೆ, ತನ್ನ ನಾಯಕತ್ವ ಉಳಿಸಿಕೊಳ್ಳಲು ಜನಾಕ್ರೋಶ ಪ್ರತಿಭಟನೆಯನ್ನು ಮಾಡುತ್ತಿದ್ದಾರೆಯೇ ವಿನಹ ಜನರಿಗಾಗಿ ಅಲ್ಲ ಎಂಬುದು ಕಾಂಗ್ರೆಸ್‌ ಟೀಕೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಅಡುಗೆ ಅನೀಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ವತಿಯಿಂದ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಇದಕ್ಕೆ ಮುನ್ನ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗೂತ್ತಾ, ತಲೆ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತು ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಬೆಲೆ ಏರಿಕೆಗೆ ಕೇಂದ್ರ ಕಾರಣ

ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಕೇಶವರೆಡ್ಡಿ ಮಾತನಾಡಿ, ಪ್ರಧಾನಿಗಳು ಬೆಲೆ ಏರಿಕೆ ಮಾಡೋದನ್ನು ನಿಲ್ಲಿಸಲಿ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಕೇಂದ್ರದ ಜನವಿರೋಧಿ ನೀತಿಗಳಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಬಿಜೆಪಿ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿದೆ ಅಂತಾ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಆದರೆ ಬೆಲೆ ಏರಿಕೆ ಮಾಡುತ್ತಿರೋದು ಕೇಂದ್ರ ಬಿಜೆಪಿ ಸರ್ಕಾರ ಎಂದರು.

ಬಿಜೆಪಿಯವರಿಗೆ ನೈತಿಕತೆಯಿದ್ದರೇ ಮೋದಿ ಮುಂದೆ ಹೋಗಿ ಬೆಲೆ ಏರಿಕೆ ನಿಲ್ಲಿಸಿ, ನಮ್ಮ ರಾಜ್ಯಕ್ಕೆ ತೆರಿಗೆ ಹಣ ಕೊಡಿ ಎಂದು ಪ್ರತಿಭಟನೆ ಮಾಡಲಿ. ರಾಜ್ಯ ಬಿಜೆಪಿ ನಾಯಕ ವಿಜಯೇಂದ್ರ ತನ್ನ ಪ್ರತಿಷ್ಠೆ, ತನ್ನ ನಾಯಕತ್ವ ಉಳಿಸಿಕೊಳ್ಳಲು ಜನಾಕ್ರೋಶ ಪ್ರತಿಭಟನೆಯನ್ನು ಮಾಡುತ್ತಿದ್ದಾರೆಯೇ ವಿನಹ ಜನರಿಗಾಗಿ ಅಲ್ಲ. ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ದ ಕಾಂಗ್ರೆಸ್‌ ಏ. 17 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದರು.

ಕೇಂದ್ರ ಸರ್ಕಾರ ಜನವಿರೋಧಿ

ಬಳಿಕ ಕಾಂಗ್ರೆಸ್‌ ಮುಖಂಡ ಲಕ್ಷ್ಮೀನಾರಾಯಣ ಮಾತನಾಡಿ, ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಿಂದ ಬೆಲೆ ಏರಿಕೆ ಯನ್ನು ಜನರ ಮೇಲೆ ಹಾಕಿದೆ. ಜನವಿರೋಧಿ, ರೈತ ವಿರೋಧಿ ಸೇರಿದಂತೆ ಹಲವು ರೀತಿಯ ಕಾನೂನುಗಳನ್ನು ತಂದು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್‌ಗೆ ಅಬಕಾರಿ ಸುಂಕವನ್ನು ರೂ.2 ಹೆಚ್ಚಳ ಮಾಡುವುದರ ಮೂಲಕ, ಅಡುಗೆ ಅನಿಲ ದರ ಹೆಚ್ಚಿಸುವ ಮೂಲಕ ಬಡವರ ಬದುಕಿಗೆ ಕೊಳ್ಳಿ ಇಟ್ಟಿದೆ ಎಂದರು.

ತೈಲ ದರದಿಂದ ಹಿಡಿದು ಎಲ್ಲಾ ಅಗತ್ಯವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದವರು ಜೀವನ ನಡೆಸುವುದು ದುಸ್ತರವಾಗಿದೆ. ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಹಾಗೂ ನಿರುದ್ಯೋಗ ಹೆಚ್ಚಾಗುತ್ತದೆ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಚುನಾವಣೆ ಸಮಯದಲ್ಲಿ ನೀಡಿದ ಎಲ್ಲಾ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುತ್ತಿದೆ. ಇದನ್ನು ಸಹಿಸದ ಬಿಜೆಪಿ, ಕಾಂಗ್ರೆಸ್‌ಗೆ ಕಪ್ಪು ಚುಕ್ಕೆ ತರಲು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದರು.

ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ

ಗುಡಿಬಂಡೆ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ತಹಸೀಲ್ದಾರ್ ಸಿಗ್ಬತ್ತುಲ್ಲಾ ರವರ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು. ಈ ವೇಳೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆದಿರೆಡ್ಡಿ, ಕಾಂಗ್ರೇಸ್ ಪಕ್ದದ ಹಿರಿಯ ಮುಖಂಡರಾದ ರಘುನಾಥರೆಡ್ಡಿ, ಕೃಷ್ಣೆಗೌಡ, ರಾಜ್ಯ ಯುವ ಕಾಂಗ್ರೇಸ್ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್, ಯೂತ್ ಕಾಂಗ್ರೇಸ್ ಮುಖಂಡರಾದ ನವೀನ್, ಅಂಬರೀಶ್, ಪಪಂ ಅಧ್ಯಕ್ಷ ವಿಕಾಸ್, ಕಾಂಗ್ರೇಸ್ ಪಕ್ಷದ ಮುಖಂಡರಾದ ರಿಯಾಜ್, ಇಸ್ಮಾಯಿಲ್ ಆಜಾದ್ ಬಾಬು, ಪ್ರಕಾಶ್, ನಯಾಜ್ ಸೇರಿದಂತೆ ಹಲವರು ಹಾಜರಿದ್ದರು.

.