ದೆಹಲಿಯ ಸಾಕೇತ್ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರಾದ ಶಹೀನ್ ಖಾನ್ ಮತ್ತು ನಫೀಸಾ ಖಾನ್ ಅವರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಹಾಗೂ ತನಿಖೆಗೆ ಆಗ್ರಹಿಸಿ ಶನಿವಾರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ವಿಭಾಗದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದೆಹಲಿಯ ಸಾಕೇತ್ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರಾದ ಶಹೀನ್ ಖಾನ್ ಮತ್ತು ನಫೀಸಾ ಖಾನ್ ಅವರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಹಾಗೂ ತನಿಖೆಗೆ ಆಗ್ರಹಿಸಿ ಶನಿವಾರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ವಿಭಾಗದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಪ್ರಮುಖ ಅಂಗ. ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ನೀಡಿದೆ. ಪತ್ರಿಕೋದ್ಯಮಕ್ಕೂ ವಿಶೇಷ ಸ್ಥಾನವಿದ್ದು, ಮುಕ್ತ ಮತ್ತು ಸ್ವತಂತ್ರ ಪತ್ರಿಕೋದ್ಯಮವು ಪ್ರಜಾಪ್ರಭುತ್ವ ಪ್ರಮುಖ ಆಧಾರ. ಆದರೆ ಇಂತಹ ಘಟನೆ ಪತ್ರಿಕೋದ್ಯಮಕ್ಕೆ ಕಳಂಕ ತರುವಂತಹ ಘಟನೆಯಾಗಿದೆ ಎಂದು ಪ್ರತಿಭಟನಕಾರರು ಕಿಡಿಕಾರಿದ್ದಾರೆ.
ಇತ್ತೀಚೆಗೆ ದೆಹಲಿಯ ಸಾಕೇತ್ ಪೊಲೀಸ್ ಠಾಣೆಯಲ್ಲಿ 4 ಪಿಎಂ ನ್ಯೂಸ್ ನೆಟ್‌ವರ್ಕ್‌ನ ಪತ್ರಕರ್ತರಾದ ಶಹೀನ್ ಖಾನ್ ಮತ್ತು ನಫೀಸಾ ಖಾನ್ ಅವರೊಂದಿಗೆ ಪೊಲೀಸ್ ಸಿಬ್ಬಂದಿ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸುವುದರ ಜತೆಗೆ ದೌರ್ಜನ್ಯ ಎಸಗಿದ್ದಾರೆ. ಇದು ಕೇವಲ ಪತ್ರಿಕೋದ್ಯಮಕ್ಕೆ ಮಾಡಿದ ಕಳಂಕ ಮಾತ್ರವಲ್ಲದೇ ಪ್ರಜಾಪ್ರಭುತ್ವಕ್ಕೂ ಅವಮಾನ. ಆದರಿಂದ ಸಾಕ್ಷ್ಯಗಳ ಪರಿಗಣಿಸಿ ಆರೋಪಗಳು ಸತ್ಯವೆಂದು ದೃಢಪಟ್ಟಲ್ಲಿ ತಪ್ಪಿತಸ್ಥ ವಿರುದ್ದ ಸೂಕ್ತ ಕಾನೂನು ಕ್ರಮಗೊಂಡು. ಪ್ರಜಾಪ್ರಭುತ್ವ, ಪತ್ರಿಕಾ ಸ್ವಾತಂತ್ರ್ಯ ರಕ್ಷಿಸಬೇಕು ಎಂದು ರಾಷ್ಟ್ರಪತಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದರು.ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಸೈಯದ್ ವಾಹಿದ್ ಅಡ್ಡು, ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹಮದ್, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಟೆಲಾ ಮಾರ್ಟಿನ್, ನಯಜ್ ಅಹಮದ್, ಶಫಿವುಲ್ಲ, ಸೈಯದ್ ಜಮೀಲ್, ಜಫ್ರುಲ್ಲಾ, ಮಹಮದ್ ಶಫಿ, ಸೈಯದ್ ನೂರುಲ್ಲಾ, ಸೈಯದ್ ಜಬೀರಾ, ನೇತಾಜಿ ಇಕ್ಬಾಲ್, ತನ್ವಿರ್ ಅಹಮದ್, ಸೈಯದ್ ಜಮೀಲ್, ಮಕ್ಬುಲ್ ಅಹಮದ್, ಜಫ್ರುಲ್ ಖಾನ್ ಸತ್ತರ್, ಅನ್ವರ್ ಕುರೇಶಿ, ಜಫ್ರುಲ್ ಶರೀಫ್ ಸೇರಿದಂತೆ ಹಲವರು ಇದ್ದರು.