ಸಾರಾಂಶ
ಕಾರವಾರ: ಮುಡಾ ಸೈಟ್ ಹಂಚಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಅಕ್ರಮವಾಗಿ ಪ್ರಾಸಿಕ್ಯೂಶನ್ ತನಿಖೆಗೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿ ಸೋಮವಾರ ಕಾಂಗ್ರೆಸ್‌ನ ಸಚಿವರು, ಶಾಸಕರು, ಕಾರ್ಯಕರ್ತರು ಕಾರವಾರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಸಚಿವ ಮಂಕಾಳ ವೈದ್ಯ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಶಾಸಕರಾದ ಸತೀಶ ಸೈಲ್, ಭೀಮಣ್ಣ ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಮಿತ್ರ ಸಮಾಜದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು, ಕೇಂದ್ರದ ಬಿಜೆಪಿ ಸರ್ಕಾರದಿಂದ ರಾಜ್ಯಪಾಲರ ಕಚೇರಿ ದುರ್ಬಳಕೆ ಆಗುತ್ತಿದೆ. ಜನಪರ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಜೆಡಿಎಸ್ ಷಡ್ಯಂತ್ರ ನಡೆಸುತ್ತಿದೆ. ರಾಜಕೀಯ ಭವನವಾದ ರಾಜಭವನ ಎಂದು ಫಲಕಗಳನ್ನು ಹಿಡಿದು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು, ನಮಗೆ ಈಗಲೂ ಅವರೇ ಸಿಎಂ, ಮುಂದೆಯೂ ಅವರೇ ಸಿಎಂ. ಇಡೀ ಪಕ್ಷವೇ ಸಿದ್ದರಾಮಯ್ಯನವರ ಜತೆ ಇದೆ. ಪ್ರತಿಭಟನೆ ಇಂದು ಆರಂಭವಾಗಿದೆ. ಮುಂದೆ ತಾಲೂಕು ಮಟ್ಟದಲ್ಲಿಯೂ ಹೋರಾಟ ನಡೆಯಲಿದೆ ಎಂದರು.ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲದೇ ರಾಜಕೀಯ ಮಾಡಿದ ನಾಯಕ ಸಿದ್ದರಾಮಯ್ಯ. ಅವರ ಹೆಸರನ್ನು ಕೆಡಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಸಿಎಂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ರಾಜ್ಯಪಾಲರು ತಮ್ಮ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಅವರ ಪತ್ನಿ ಸರಳ ವ್ಯಕ್ತಿತ್ವದವರು. ನಾನು ಸಿದ್ದರಾಮಯ್ಯ ಬಹಳ ವರ್ಷದ ಸ್ನೇಹಿತರು. ಅವರ ಮನೆಗೆ ತಿಂಡಿಗೆ ಹೋದಾಗಲೂ ಅವರ ಪತ್ನಿ ಮುಂದೆ ಬರುತ್ತಿರಲಿಲ್ಲ. ಅಂಥವರ ಹೆಸರನ್ನು ಬಿಜೆಪಿಗರು ಎಳೆದು ತಂದು ಕೀಳುಮಟ್ಟದ ರಾಜಕಾರಣ ಮಾಡಿದ್ದಾರೆ ಎಂದು ಆಪಾದಿಸಿದರು.ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.