ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ನಗರಸಭಾ ಬಿಜೆಪಿ ಆಡಳಿತ ಮಂಡಳಿಯ ಕಾರ್ಯವೈಖರಿಯನ್ನು ಪ್ರಶ್ನಿಸಿ, ನಗರ ಕಾಂಗ್ರೆಸ್ ಸಮಿತಿ ವತಿಯಿಂದ ನಗರಸಭೆ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಕಾಶ್ ಆಚಾರ್ಯ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ನಗರಸಭೆ ಕಚೇರಿವರೆಗೆ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿದರು. ಈ ಸಂದರ್ಭ ವಿವಿಧ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತಾಳುತ್ತಿರುವ ನಗರಸಭೆ ಆಡಳಿತ ಮಂಡಳಿ ಮತ್ತು ಜನಪ್ರತಿನಿಧಿಗಳ ವಿರುದ್ಧ ಮೆರವಣಿಗೆಯಲ್ಲಿ ಧಿಕ್ಕಾರ, ಘೋಷಣೆಗಳನ್ನು ಕೂಗಿದರು. ಮೆರವಣಿಗೆ ಬಳಿಕ ಕಾರ್ಯಕರ್ತರು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷಗಳೇ ಕಳೆದರೂ ಯಾವುದೇ ಅಭಿವೃಧ್ದಿ ಕೆಲಸ ನಡೆಯುತ್ತಿಲ್ಲ. ಮಳೆಗಾಲ ಸನ್ನಿಹಿತವಾಗುತ್ತಿದ್ದರೂ ಮುಂಜಾಗ್ರತೆ ವಹಿಸಿಲ್ಲ. ರಸ್ತೆ, ಚರಂಡಿಗಳ ಅವ್ಯವಸ್ಥೆ, ಬೀದಿ ನಾಯಿಗಳ ಹಾವಳಿ, ಕಚೇರಿಯಿಂದ ಜನರಿಗೆ ಅಗತ್ಯ ದಾಖಲಾತಿಗಳು ಸಿಗುತ್ತಿಲ್ಲ ಎಂದು ದೂರಿದರು.ನಗರಸಭೆಯಲ್ಲಿ ಬಿಜೆಪಿ ಬಂದು ೪ ವರ್ಷ ಕಳೆದಿದೆ. ಆದರೆ ಸಾರ್ವಜನಿಕರಿಗೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಿದ ಅವರು, ನಗರಸಭೆ ನರಕ ಸಭೆಯಾಗಿದೆ. ಅಮೃತ್ ೨.೦ ಕಾಮಗಾರಿಯಿಂದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರಿಗೆ ತೊಂದರೆ ಉಂಟಾಗಿದೆ. ನಗರದ ಕಸವನ್ನು ಸ್ಟೋನ್ ಹಿಲ್‌ಗೆ ತೆಗೆದುಕೊಂಡು ಹೋಗದೆ ಸುಬ್ರಮಣ್ಯ ನಗರದ ಮೇಲ್ಭಾಗದಲ್ಲಿ ಸುರಿಯಲಾಗುತ್ತಿದೆ. ನಗರಸಭೆ ಸದಸ್ಯರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದ ಅವರು, ನಗರಸಭೆಯಲ್ಲಿ ಫಾರಂ ನಂ೩ಗೆ ದಿನಂಪ್ರತಿ ಹೋದರು ಕೆಲಸವಾಗುತ್ತಿಲ್ಲ ಎಂದು ದೂರಿದರು.ಪೌರಾಯುಕ್ತ ರಮೇಶ್ ಅವರು ಮನವಿ ಸ್ವೀಕರಿಸಿದರು. ಪ್ರತಿಭಟನಾಕಾರರು ಉಲ್ಲೇಖಿಸಿರುವ ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು. ಮನವಿಯಲ್ಲಿರುವ ಎಲ್ಲ ಅಂಶಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.ಕಾಂಗ್ರೆಸ್ ಮುಖಂಡ ಟಿ.ಪಿ. ರಮೇಶ್, ಕಾಂಗ್ರೆಸ್ ಪ್ರಮುಖರಾದ ಚಂದ್ರಶೇಖರ್, ಸದಾ ಮುದ್ದಪ್ಪ, ಮುದ್ದುರಾಜ್, ಜಯಂತಿ ಶೆಟ್ಟಿ, ಜಗದೀಶ್, ಕೋಚನ ಚೇತನ್, ಲೀಲಾ ಶೇಶಮ್ಮ, ಟಿ.ಎಚ್. ಉದಯ ಕುಮಾರ್, ಕೊಡಗು ಅಭಿವೃಧ್ಧಿ ಸಮಿತಿ ಪ್ರಮುಖ ಪ್ರಸನ್ನ ಭಟ್ ಮತ್ತಿತರರು ಪಾಲ್ಗೊಂಡಿದ್ದರು.