146 ಸಂಸದರ ಅಮಾನತು ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

| Published : Dec 23 2023, 01:45 AM IST

ಸಾರಾಂಶ

ಇತ್ತೀಚೆಗೆ ಸಂಸತ್ತಿನ ಮೇಲೆ ದಾಳಿಯಾದಾಗ ಭದ್ರತೆಯ ಬಗ್ಗೆ ಪ್ರಶ್ನಿಸಿದ ಉಭಯ ಸದನಗಳ 146 ಸಂಸದರನ್ನು ಸಂಸತ್ತಿನ ಸದನಗಳಿಂದ ಚಳಿಗಾಲ ಅಧಿವೇಶನ ಮುಗಿಯುವ ವರೆಗೂ ಅಮಾನತು ಮಾಡಿರುವುದು ಖಂಡನೀಯ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆಕನ್ನಡಪ್ರಭ ವಾರ್ತೆ ಧಾರವಾಡ

ಕೇಂದ್ರ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಧೋರಣೆ ನಡೆಸುತ್ತಿದ್ದು, ಕೇಂದ್ರ ಸರ್ಕಾರಕ್ಕೆ ತಿಳಿ ಹೇಳುವಂತೆ ಕಾಂಗ್ರೆಸ್‌ ಸ್ಥಳೀಯ ಮುಖಂಡರು ಶುಕ್ರವಾರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಇತ್ತೀಚೆಗೆ ಸಂಸತ್ತಿನ ಮೇಲೆ ದಾಳಿಯಾದಾಗ ಭದ್ರತೆಯ ಬಗ್ಗೆ ಪ್ರಶ್ನಿಸಿದ ಉಭಯ ಸದನಗಳ 146 ಸಂಸದರನ್ನು ಸಂಸತ್ತಿನ ಸದನಗಳಿಂದ ಚಳಿಗಾಲ ಅಧಿವೇಶನ ಮುಗಿಯುವ ವರೆಗೂ ಅಮಾನತ್ತು ಮಾಡಿರುವುದು ಖಂಡನೀಯ. ಸಂಸತ್ತಿನ ಇತಿಹಾಸದಲ್ಲಿಯೇ ಈ ವರೆಗೂ ಯಾವ ಸರ್ಕಾರಗಳೂ ಇಂತಹ ಅಸಂವಿಧಾನಿಕ ನಡೆಯನ್ನು ಅನುಸರಿಸಿಲ್ಲ. ಪ್ರಧಾನ ಮಂತ್ರಿಗಳಾಗಲಿ, ಕೇಂದ್ರ ಗೃಹ ಮಂತ್ರಿಗಳಾಗಲಿ, ಸಂಸತ್ತಿನ ಭದ್ರತೆಯ ಲೋಪದ ವಿಷಯದ ಬಗ್ಗೆ ಸದನದಲ್ಲಿ ಉತ್ತರಿಸದಿರುವುದು ತಪ್ಪಲ್ಲವೇ ಎಂದು ಕೈ ಮುಖಂಡರು ಪ್ರಶ್ನಿಸಿದರು.

ಈ ನಡೆಯನ್ನು ಸಂಸದರು ಖಂಡಿಸಬಾರದೇ? ಉಭಯ ಸದನಗಳಲ್ಲಿ ತಮ್ಮನ್ನು ಯಾರೂ ಪ್ರಶ್ನಿಸಬಾರದು ಎಂಬುದು ಪ್ರಜಾಪ್ರಭುತ್ವ ವಿರೋಧವಲ್ಲವೇ? ಪ್ರಜಾಪ್ರಭುತ್ವದ ಮೌಲ್ಯಗಳ ಕತ್ತು ಹಿಸುಕಿರುವುದನ್ನು ಇಡೀ ಪ್ರಪಂಚ ಖಂಡಿಸುತ್ತಿದೆ. ಸಮಸ್ತ ಭಾರತದ ನಾಗರಿಕರು ತಲೆತಗ್ಗಿಸುವಂತಾಗಿದೆ. ಡಾ. ಬಾಬಾ ಸಾಹೇಬ ಅಂಬೇಡಕರರು ಬರೆದ ಸಂವಿಧಾನವನ್ನು ತಿದ್ದುವ ನಿಟ್ಟಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ನಡೆಗಳು ಮುನ್ನುಡಿಯಾಗಿವೆ ಎನ್ನದೆ ವಿಧಿಯಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳನ್ನು ಸಂವಿಧಾನ ವಿರುದ್ಧವಾಗಿ ಅಮಾನತ್ತು ಮಾಡುವುದು, ಹೆದರಿಸುವುದು, ಕಡೆಗಣಿಸುವುದು ಸರಿಯಲ್ಲ. ಸಂಸತ್ತಿನ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನಿಸುವ ಸಂಪೂರ್ಣ ಹಕ್ಕನ್ನು ಚುನಾಯಿತ ಸದಸ್ಯರು ಮೇಲಾಗಿ ಉಭಯ ಸದನಗಳ ಸದಸ್ಯರು ಹೊಂದಿರುತ್ತಾರೆ. ಸಂಸದರು ತಮ್ಮ ಕರ್ತವ್ಯವನ್ನು ಮಾಡಿದ್ದಾಗ್ಯೂ ಅವರನ್ನು ಅಮಾನತ್ತು ಮಾಡಿರುವುದು ಮತ್ತು ಕೇಂದ್ರ ಬಿಜೆಪಿ ಸರ್ಕಾರ ವಿರೋಧ ಪಕ್ಷದ ಅನುಪಸ್ಥಿತಿಯಲ್ಲಿ ಪ್ರಮುಖ ಬಿಲ್ಲುಗಳನ್ನು ಪಾಸು ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬೆಚ್ಚಿ ಬೀಳಿಸಿದೆ ಎಂದರು.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಆದೇಶದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸಲು ದೇಶಾದ್ಯಂತ ಪ್ರತಿಭಟನೆಗಳು ಕಾಂಗ್ರೆಸ್ ಪಕ್ಷದಿಂದ ನಡೆಯುತ್ತಿವೆ. ಜವಾಬ್ದಾರರಾದ ತಾವು ಕೂಡಲೇ ಕೇಂದ್ರ ಬಿಜೆಪಿ ತಪ್ಪು ನಡೆಗಳನ್ನು ತಿದ್ದಿಕೊಳ್ಳಲು ಸೂಚನೆ ನೀಡಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್‌ ಮುಖಂಡರಾದ ದೀಪಕ ಚಿಂಚೋರೆ, ರಾಬರ್ಟ್‌ ದದ್ದಾಪೂರಿ, ನವೀದ ಮುಲ್ಲಾ, ಅಲ್ತಾಪ್‌ ಹಳ್ಳೂರ, ಸುರೇಖಾ ಪೂಜಾರ, ಗೌರಿ ನಾಡಗೌಡ, ರೇಖಾ ಮೋರೆ ಮತ್ತಿತರರು ಇದ್ದರು.