ಶಿರಹಟ್ಟಿ: ಗುತ್ತಿಗೆದಾರನಿಂದ ಕಮಿಷನ್ ಹಣ (ಲಂಚ) ಸ್ವೀಕರಿಸುತ್ತಿದ್ದ ವೇಳೆ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಶಿರಹಟ್ಟಿ ಮೀಸಲು ಮತಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ತಕ್ಷಣ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಆಗ್ರಹಿಸಿದರು.

ಸೋಮವಾರ ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಮಾರುತಿ ದೇವಸ್ಥಾದಿಂದ ಬೃಹತ್ ಪ್ರತಿಭಟನೆ ನಡೆಸಿ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ನೆಹರು ವೃತ್ತದ ಮಾರ್ಗವಾಗಿ ತಮಟೆ ಬಾರಿಸುತ್ತ ಭ್ರಷ್ಟ ಶಾಸಕನ ವಿರುದ್ಧ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗುತ್ತಾ ತಹಸೀಲ್ದಾರ್‌ ಕಾರ್ಯಾಲಯಕ್ಕೆ ಆಗಮಿಸಿ ಮಾತನಾಡಿದರು.

ಡಾ. ಚಂದ್ರು ಲಮಾಣಿ ಶಿರಹಟ್ಟಿ ಮತಕ್ಷೇತ್ರದ ಶಾಸಕರಾದ ಮೇಲೆ ಜಾತಿ ನಿಂದನೆ, ದುಡ್ಡು ವಸೂಲಿ ಮಾಡುವುದು, ಎಲ್ಲೆಡೆ ಭ್ರಷ್ಟಾಚಾರ ಹೆಚ್ಚಾಗಿದೆ. ಗುತ್ತಿಗೆದಾರರಿಗೆ ನಿರಂತರ ಕಿರುಕುಳ ನೀಡುತ್ತಾ ಬಾಯಿಗೆ ಬಂದಂತೆ ಬೈಯುವುದು ಸರ್ವೆ ಸಾಮಾನ್ಯವಾಗಿತ್ತು. ಅವರು ತಕ್ಷಣ ರಾಜೀನಾಮೆ ನೀಡಬೇಕು. ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಬೇರೊಬ್ಬರ ಮೇಲೆ ಗೂಬೆ ಕೂರಿಸುವ ಕೆಲಸ ಆಗಬಾರದು ಎಂದರು.

ಸಾರ್ವಜನಿಕ ಜೀವನದಲ್ಲಿ ಇರುವವರು ಹೇಗೆ ನಡೆದುಕೊಳ್ಳಬೇಕು ಎನ್ನುವ ಪರಿಜ್ಞಾನ ಇಲ್ಲದ ಅವರು, ಕಾಂಗ್ರೆಸ್‌ ಮೇಲೆ ಆರೋಪ ಹೊರಿಸುವುದು ಬಿಟ್ಟು, ಪಾರದರ್ಶಕ ತನಿಖೆಗೆ ಸಹಕರಿಸಬೇಕು. ನೈತಿಕ ಹೊಣೆಗಾರಿಕೆ ವಹಿಸಿ ಶಾಸಕ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಉತ್ತರ ಕರ್ನಾಟಕದ ಇತಿಹಾಸದಲ್ಲೇ ತಾಲೂಕಿನಲ್ಲಿ ಯಾವ ಶಾಸಕರೂ ಈ ತರಹದ ಭ್ರಷ್ಟಾಚಾರದಲ್ಲಿ ಸಿಲುಕಿರುವುದು ಕಂಡುಬಂದಿಲ್ಲ. ಆದರೆ ಹೆಚ್ಚು ಕಲಿತು ವೈದ್ಯ ಸೇವೆ ಮಾಡಿ ಬುದ್ಧಿವಂತರು ಎನಿಸಿಕೊಂಡಿರುವ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಭ್ರಷ್ಟಾಚಾರ ನಡೆಸಿ, ತಾಲೂಕಿನ ಮರ್ಯಾದೆ ಹರಾಜ ಹಾಕಿದ್ದಾರೆ. ಅವರು ಶಾಸಕ ಸ್ಥಾನದಲ್ಲಿ ಮುಂದುವರಿಯುವ ಯಾವ ನೈತಿಕತೆಯನ್ನೂ ಉಳಿಸಿಕೊಂಡಿಲ್ಲ. ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದರು.


ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಮಾತನಾಡಿ, ಶಾಸಕ ಚಂದ್ರು ಲಮಾಣಿ ಮಾಡಬಾರದ ಕೆಲಸ ಮಾಡಿ, ಕ್ಷೇತ್ರದ ಹೆಸರಿಗೆ ಮಸಿ ಬಳಿದಿದ್ದಾರೆ. ಅವರ ತಪ್ಪಿಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರನ್ನು ದೂರುತ್ತಿರುವುದು ಸರಿಯಲ್ಲ. ತಕ್ಷಣ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.

ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹುಮಾಯೂನ್ ಮಾಗಡಿ, ಡಿ.ಕೆ. ಹೊನ್ನಪ್ಪನವರತ, ಚನ್ನಪ್ಪ ಜಗಲಿ, ವೀರೇಂದ್ರ ಪಾಟೀಲ, ಶಿವನಗೌಡ ಪಾಟೀಲ, ಮಂಜುನಾಥ ಘಂಟಿ ಮಾತನಾಡಿದರು.

ಮುಖಂಡರಾದ ಮಹೇಂದ್ರ ಮುಂಡವಾಡ, ಲಕ್ಷ್ಮಣಗೌಡ ಪಾಟೀಲ, ಫಕ್ಕಿರೇಶ ಮ್ಯಾಟಣ್ಣವರ, ವಿರೂಪಾಕ್ಷ ನಂದೆಣ್ಣವರ, ಹೊನ್ನಪ್ಪ ಶಿರಹಟ್ಟಿ, ಬುಡನಶ್ಯಾ ಮಕಾನದಾರ, ಮಾಬೂಸಾಬ ಲಕ್ಷ್ಮೇಶ್ವರ, ರಮೇಶ ನಿರ್ವಾಣಶೆಟ್ಟರ, ಎಂ.ಕೆ. ಲಮಾಣಿ, ಮಹಾಂತೇಶ ದಶಮನಿ, ಅಜ್ಜುಗೌಡ್ರ ಪಾಟೀಲ, ಸೋಮನಗೌಡ ಮರಿಗೌಡ್ರ, ಚಾಂದಸಾಬ ಮುಳಗುಂದ, ದೇವಪ್ಪ ಲಮಾಣಿ ಇದ್ದರು. ಆನಂತರ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.