ಪ್ರಜ್ವಲ್‌ ಬಂಧನಕ್ಕೆ ಒತ್ತಾಯಿಸಿ ಹೊಳೆನರಸೀಪುರದಲ್ಲಿ ಕಾಂಗ್ರೆಸ್‌ ಪ್ರತಿಭಟನೆ

| Published : Apr 30 2024, 02:06 AM IST

ಪ್ರಜ್ವಲ್‌ ಬಂಧನಕ್ಕೆ ಒತ್ತಾಯಿಸಿ ಹೊಳೆನರಸೀಪುರದಲ್ಲಿ ಕಾಂಗ್ರೆಸ್‌ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಎಸ್‌ಐಟಿಗೆ ವಹಿಸಿದ್ದರೂ ಪ್ರಜ್ವಲ್‌ ದೇಶ ಬಿಟ್ಟು ಹೋಗಿದ್ದಾರೆ. ಚಿತ್ರದುರ್ಗದ ಮುರುಘ ಮಠದ ಸ್ವಾಮೀಜಿಗೆ ಶಿಕ್ಷೆ ನೀಡಿದಂತೆ ಸಂಸದರನ್ನು ಬಂಧಿಸಿ, ಶಿಕ್ಷೆ ನೀಡಬೇಕು ಎಂದು ಕಾಂಗ್ರಸ್ ಮುಖಂಡ ಬಾಗೂರು ಮಂಜೇಗೌಡ ಒತ್ತಾಯಿಸಿದರು. ಹೊಳೆನರಸೀಪುರ ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿಯ ವತಿಯಿಂದ ಆಯೋಜನೆ ಮಾಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಉಪ ತಹಸೀಲ್ದಾರ್ ರೂಪೇಶ್‌ಗೆ ಮನವಿ । ಮುರುಘಾ ಶರಣರನ್ನು ಬಂಧಿಸಿದಂತೆ ಇವರನ್ನೂ ಬಂಧಿಸಿ: ಬಾಗೂರು ಮಂಜೇಗೌಡ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಹಾಸನ ಜಿಲ್ಲೆಯಲ್ಲಿ ಪ್ರಜ್ವಲ್‌ ರೇವಣ್ಣರದ್ದು ಎನ್ನಲಾದ ವಿಡಿಯೋ ಸುಮಾರು ೨೮೭೬ ಮಹಿಳೆಯರ ಮಾನಹಾನಿ ಮಾಡಿದೆ ಎಂದು ಮಹಿಳಾ ಆಯೋಗ ವರದಿ ನೀಡಿದ್ದು, ಹಾಸನ ಜಿಲ್ಲೆಯ ಮಹಿಳೆಯರ ಮಾನಹಾನಿ, ಲೈಂಗಿಕ ಕಿರುಕುಳ ನೀಡಿದ ಸಂಸದ ಪ್ರಜ್ವಲ್‌ ರೇವಣ್ಣರನ್ನು ಬಂಧಿಸದೇ ಬಿಟ್ಟಿದ್ದಾರೆ. ಸರ್ಕಾರ ಎಸ್‌ಐಟಿಗೆ ವಹಿಸಿದ್ದರೂ ಪ್ರಜ್ವಲ್‌ ದೇಶ ಬಿಟ್ಟು ಹೋಗಿದ್ದಾರೆ. ಚಿತ್ರದುರ್ಗದ ಮುರುಘ ಮಠದ ಸ್ವಾಮೀಜಿಗೆ ಶಿಕ್ಷೆ ನೀಡಿದಂತೆ ಸಂಸದರನ್ನು ಬಂಧಿಸಿ, ಶಿಕ್ಷೆ ನೀಡಬೇಕು ಎಂದು ಕಾಂಗ್ರಸ್ ಮುಖಂಡ ಬಾಗೂರು ಮಂಜೇಗೌಡ ಒತ್ತಾಯಿಸಿದರು.

ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿಯ ವತಿಯಿಂದ ಆಯೋಜನೆ ಮಾಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ‘ನ್ಯಾಯ ಎಲ್ಲರಿಗೂ ಒಂದೇ, ಆದ್ದರಿಂದ ಜಿಲ್ಲೆಯಲ್ಲಿ ಮಹಿಳೆಯರು ಗೌರವದಿಂದ ಓಡಾಡದಂತಹ ವಾತಾವರಣ ಉಂಟು ಮಾಡಿದ, ನೀತಿಗೆಟ್ಟ, ಲಜ್ಜೆಗೆಟ್ಟ ಸಂಸದರನ್ನು ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶೃತಿ ಗುಂಡಣ್ಣ ಮಾತನಾಡಿ, ‘ಮಣ್ಣಿನ ಮಗ, ಮಾಜಿ ಪ್ರಧಾನಿ ದೇವೇಗೌಡರ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಎಂದರೆ ಬಹಳ ಬೇಸರವಾಗುತ್ತದೆ. ದೇವೇಗೌಡರು, ಕುಮಾರಸ್ವಾಮಿ ಅಥವಾ ರೇವಣ್ಣ ಅವರು ಹೆಣ್ಣು ಮಕ್ಕಳ ಪರವಾಗಿದ್ದೇನೆ ಎಂದು ಕೇವಲ ಬಾಯಿಮಾತಿನಲ್ಲಿ ಹೇಳಿದರೆ ಆಗದು. ಮೊದಲು ಹೆಣ್ಣು ಮಕ್ಕಳಿಗೆ ಗೌರವ ನೀಡುವುದನ್ನು ಕಲಿಯಬೇಕು’ ಎಂದು ಆಕ್ರೋಶದಿಂದ ನುಡಿದರು.

‘ಇದೇ ಕೆಲಸ ಪ್ರಧಾನ ಮಂತ್ರಿಗಳ ಮೊಮ್ಮಗ ಮಾಡಿದ್ದಾರೆ ಎಂದು ಸುಮ್ಮನಿದ್ದೀರಲ್ಲಾ, ಸಾಮಾನ್ಯ ವ್ಯಕ್ತಿ ಆಗಿದ್ದರೆ ಬಿಡುತ್ತೀರಾ? ಪ್ರಧಾನ ಮಂತ್ರಿ, ಮಂತ್ರಿ ಮನೆಗೆ ಒಂದು ನ್ಯಾಯ, ಬಡವರಿಗೆ ಒಂದು ನ್ಯಾಯ, ಹಾಗಾದರೆ ಎಲ್ಲಿದೆ ನ್ಯಾಯ’ ಎಂದು ವ್ಯವಸ್ಥೆಯ ವಿರುದ್ಧ ಬೇಸರದಿಂದ ನುಡಿದರು.

‘ಭವಾನಿ ರೇವಣ್ಣ ಅವರು ಒಂದೂವರೇ ಕೋಟಿ ರು. ಕಾರಿಗೆ ಗುದ್ದಿದ ಎಂದು ಬೈದರಲ್ಲಾ, ಈಗ ನ್ಯಾಯ ಕೊಡಿಸಲಿ, ಇಂತಹ ನೀಚ ಮಗನಿಗೆ ಜನ್ಮ ನೀಡಿದ್ದೀಯಲ್ಲಾ ನೀನು ಎಂತಹ ತಾಯಿ, ಹೆಣ್ಣು ಮಕ್ಕಳಿಗೆ ಬೆಲೆ ಇಲ್ಲವಾ? ಅಷ್ಟು ಹೆಣ್ಣು ಮಕ್ಕಳ ಮಾನವನ್ನು ಬೀದಿಯಲ್ಲಿ ಬಿಟ್ಟಿದ್ದೀರಲ್ಲಾ, ಹೆಣ್ಣು ಮಕ್ಕಳು ಭೋಗದ ವಸ್ತುಗಳಾ? ಹೆಣ್ಣನ್ನು ಭಾರತಾಂಬೆಗೆ ಹೋಲಿಸುತ್ತಾರೆ. ಹೆಣ್ಣು ತಾಯಿನೂ ಹೌದು, ತಂಗಿನೂ ಹೌದು. ಹೆಂಡತಿನೂ ಹೌದು. ಅವನಿಗೆ ತಾಯಿ, ದೊಡ್ಡಮ್ಮ, ಚಿಕ್ಕಮ್ಮರ ನಡುವೆ ಬೆಳೆದಿಲ್ಲವೇ. ಹಾಸನದ ಮರ್ಯಾದೆಯನ್ನು ದೆಹಲಿವರೆಗೆ ಹಾಳು ಮಾಡಿದ್ದೀರಲ್ಲಾ. ನಿಮಗೆ ಏನು ಎನ್ನಿಸುವುದಿಲ್ಲವೇ? ನಿಮಗೆ ಶಿಕ್ಷೆ ಕೊಡಲು ಆಗದಿದ್ದರೆ ಕದ್ದು ಹೋಗಿರುವ ನಿನ್ನ ಮಗ ಪ್ರಜ್ವಲ್ ರೇವಣ್ಣನನ್ನು ಹಾಸನಕ್ಕೆ ಕರೆದುಕೊಂಡು ಬನ್ನಿ. ಹೆಣ್ಣು ಮಕ್ಕಳಾಗಿ ನಾವೇ ನಡುರಸ್ತೆಯಲ್ಲಿ ಶಿಕ್ಷೆ ಕೊಡುತ್ತೇವೆ’ ಎಂದು ಕಿಡಿಕಾರಿದರು.

‘ಬಿಜೆಪಿಯವರಿಗೆ ಚುನಾವಣೆ ಮುಂಚೆನೇ ಈ ಎಲ್ಲಾ ಸುದ್ದಿಯನ್ನು ಕಳುಹಿಸಿ ಟಿಕೆಟ್ ಕೊಡದಂತೆ ಒತ್ತಾಯಿಸಲಾಗಿತ್ತು. ಆದರೂ ಯಾವ ಮುಖ ಇಟ್ಟುಕೊಂಡು ಮೋದಿಯವರು ಇಂತಹ ವ್ಯಕ್ತಿಗೆ ಟಿಕೆಟ್ ಕೊಟ್ಟರು. ಇಂತಹ ಕಾಮುಖನನ್ನು ನಮ್ಮಂತಹ ಹೆಣ್ಣು ಮಕ್ಕಳ ಮಧ್ಯೆ ಹೇಗೆ ಬಿಟ್ಟಿರಿ. ದಯಮಾಡಿ ಆ ವ್ಯಕ್ತಿಯನ್ನು ಜೈಲಿಗೆ ಹಾಕದೇ ಗಲ್ಲಿಗೆ ಏರಿಸಬೇಕು. ಪ್ರಧಾನ ಮಂತ್ರಿಗಳು ನ್ಯಾಯ ಕೊಡಿಸಬೇಕು, ಮೊದಲಿಗೆ ದೇವೇಗೌಡರು ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಬೇಕು’ ಎಂದು ಗದ್ಗದಿತರಾದರು.

ಪ್ರತಿಭಟನಾನಿರತರು ಶಾಸಕ ಎಚ್.ಡಿ.ರೇವಣ್ಣ ಹಾಗೂ ಸಂಸದಸ ಪ್ರಜ್ವಲ್ ರೇವಣ್ಣ ಭಾವಚಿತ್ರವಿದ್ದ ಪ್ಲೆಕ್ಸ್‌ಗೆ ಬೆಂಕಿ ಹಾಕಿ ಧಿಕ್ಕಾರ ಕೂಗಿದರು.

ಉಪ ತಹಸೀಲ್ದಾರ್ ರೂಪೇಶ್ ಅವರಿಗೆ ಮನವಿ ಸಲ್ಲಿಸಿ, ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸುವಂತೆ ಒತ್ತಾಯಿಸಲಾಯಿತು

ಪುರಸಭೆ ಸದಸ್ಯ ಬೈರಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಕುಮಾರ್, ಕೆ.ಆರ್.ಜಿ.ಬಾಬು, ಡೊನಾಲ್ಡ್, ಜಾರ್ಜ್, ಕಮಲಮ್ಮ, ಇತರರು ಪ್ರತಿಭಟನೆಯಲ್ಲಿ ಭಾಗವಹಸಿದ್ದರು.

ಹೊಳೆನರಸೀಪುರ ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿಯ ವತಿಯಿಂದ ಆಯೋಜನೆ ಮಾಡಿದ್ದ ಪ್ರತಿಭಟನೆಯಲ್ಲಿ ನುರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.