ರಟ್ಟೀಹಳ್ಳಿ: ತಾಲೂಕಿನ ಗುಂಡಗಟ್ಟಿ ಗ್ರಾಮದಿಂದ ರಟ್ಟೀಹಳ್ಳಿ ವೀರಭದ್ರೇಶ್ವರ ದೇವಸ್ಥಾನದವರೆಗೆ ಶಾಸಕ ಯು.ಬಿ. ಬಣಕಾರ ಹಾಗೂ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸುಮಾರು 20 ಕಿಮೀ ಬೃಹತ್ ಕಾಲ್ನಡಿಗೆ ಜಾಥಾ ಮೂಲಕ ಜಿ ರಾಮ್ ಜಿ ಕಾಯ್ದೆಯ ವಿರುದ್ಧ ಜನಜಾಗೃತಿ ಹಾಗೂ ಬೃಹತ್ ಪ್ರತಿಭಟನೆಯನ್ನು ಶನಿವಾರ ನಡೆಸಿದರು.

ಮುಂಜಾನೆ 9 ಗಂಟೆಗೆ ತಾಲೂಕಿನ ಗುಂಡಗಟ್ಟಿ ಗ್ರಾಮದ ಶನೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಇಂಗಳಗೊಂದಿ, ಸತ್ತಗಿಹಳ್ಳಿ, ಶಿರಗಂಬಿ ಮುಖಾಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿ ರಾಮ್ ಜಿ ಕಾಯ್ದೆಯ ವಿರುದ್ಧ ಘೋಷಣೆ ಕೂಗುವ ಮೂಲಕ ಜನ ಜಾಗೃತಿ ಮೂಡಿಸಲಾಯಿತು. ಸುಮಾರು 20 ಕಿಲೋ ಮೀಟರ್ ವರೆಗೂ ಕಾಲ್ನಡಿಗೆ ಮೂಲಕ ಸಾಗಿ ಬಂದು ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಮುಕ್ತಾಯಗೊಳಿಸಲಾಯಿತು. ಪ್ರತಿಭಟನಾ ರ್‍ಯಾಲಿಯಲ್ಲಿ ಭಜನೆ, ಹಲಗೆ ಬಾರಿಸುವ ಮೂಲಕ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಭಾಗಿಯಾಗಿದ್ದರು.ಈ ವೇಳೆ ಮಾತನಾಡಿದ ಶಾಸಕ ಯು.ಬಿ. ಬಣಕಾರ ಸುಮಾರು 20 ವರ್ಷಗಳ ಹಿಂದೆ ಆಗಿನ ಪ್ರಧಾನಿ ಡಾ. ಮನಮೋಹನ್‍ಸಿಂಗ್ ಅವರು ಬಡ ಜನರು ಕೆಲಸವಿಲ್ಲದೇ ಹಸಿವಿನಿಂದ ಬಳಲುಬಾರದೆಂಬ ಉದ್ದೇಶದಿಂದ ಮನರೇಗಾ ಯೋಜನೆ ಮೂಲಕ ವರ್ಷ ಪೂರ್ತಿ ಕೂಲಿ ಕೆಲಸ ಸಿಗುವಂತೆ ಮಾಡುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಆದರೆ ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮನರೇಗಾ ಹೆಸರು ಬದಲಿಸಿ ಮಹಾತ್ಮ ಗಾಂಧಿ ಅವರ ಹೆಸರು ಕೈ ಬಿಟ್ಟು ಅವರಿಗೆ ದೊಡ್ಡ ಅಪಮಾನ ಮಾಡುವುದಲ್ಲದೇ ಕಾಯ್ದೆಯಲ್ಲಿ ಅನೇಕ ಬದಲಾವಣೆ ತರುವ ಮೂಲಕ ಬಡ ಜನತೆಯನ್ನು ದೊಡ್ಡ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿರುವುದು ಅಕ್ಷಮ್ಯ ಅಪರಾಧ. ಈ ಬಗ್ಗೆ ದೇಶಾದ್ಯಂತ ಕಾಂಗ್ರೆಸ್ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಂಡಿದ್ದು, ಎರಡನೇ ಹಂತವಾಗಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು. ಕಾಂಗ್ರೆಸ್ ನೇತೃತ್ವದ ಹೋರಾಟಕ್ಕೆ ಮಣಿದು ಈ ಹಿಂದೆ ತರಲಾದ ಮನರೇಗಾ ಹೆಸರಿನಲ್ಲಿ ಮಹಾತ್ಮ ಗಾಂಧಿ ಅವರನ್ನು ಮುಂದುವರೆಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಎಂಎಲ್‍ಸಿ ಅಭ್ಯರ್ಥಿ ಮೊಹನ್ ಲಿಂಬಿಕಾಯಿ, ಪ್ರಕಾಶ ಬನ್ನಿಕೋಡ, ಪಿ.ಡಿ. ಬಸನಗೌಡ್ರ, ವೀರನಗೌಡ ಪ್ಯಾಟಿಗೌಡ್ರ, ಸರ್ಫರಾಜ ಮಾಸೂರ, ಮಕ್ಬೂಲ್ ಮುಲ್ಲಾ, ರಮೇಶ ಮಡಿವಾಳರ, ನಿಂಗಪ್ಪ ಚಳಗೇರಿ, ಮಹೇಶ ಗುಬ್ಬಿ, ವಿನಯ ಪಾಟೀಲ್, ಸುಮಿತ್ರಾ ಪಾಟೀಲ್, ಸುನೀತಾ ದ್ಯಾವಕ್ಕಳವರ, ಲಲಿತಾ ಚನ್ನಗೌಡ್ರ, ಸುಧಾ ಚಿಂದಿ, ಕವಿತಾ ಹಾರ್ನಳ್ಳಿ, ಹನಮಂತಗೌಡ ಭರಮಣ್ಣನವರ, ವಸಂತ ದ್ಯಾವಕ್ಕಳವರ, ವಿಜಯ ಅಂಗಡಿ, ಮಂಜು ಅಸ್ವಾಲಿ ಹಾಗೂ ವಿವಿಧ ಗ್ರಾಮಗಳಿಂದ ನೂರಾರು ಕಾರ್ಯಕರ್ತರು ಇದ್ದರು.