ಬ್ರಿಟಿಷರಿಂದ ಭಾರತ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪಾತ್ರ ಮಹತ್ವದ್ದಾಗಿದೆ

ಸಂಡೂರು: ಬ್ರಿಟಿಷರಿಂದ ಭಾರತ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕಿ ಅನ್ನಪೂರ್ಣ ತುಕಾರಾಂ ಅಭಿಪ್ರಾಯಪಟ್ಟರು.ಪಟ್ಟಣದ ಹೊರವಲಯದಲ್ಲಿರುವ ಕೃಷ್ಣಾನಗರದಲ್ಲಿನ ಶಾಸಕರ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ೧೪೦ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

೧೮೮೫ರಲ್ಲಿ ಸ್ಥಾಪನೆಯಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಥಮ ಅಧಿವೇಶನದಲ್ಲಿ ಬಳ್ಳಾರಿಯ ಕೋಲಾಚಲಂ ವೆಂಕಟರಾವ್ ಹಾಗೂ ಸಭಾಪತಿ ಮುದಲಿಯಾರ್ ಸೇರಿ ಒಟ್ಟು ೭೨ ಜನರು ಭಾಗವಹಿಸಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನೇತೃತ್ವದಲ್ಲಿ ಭಾರತೀಯರು ಬ್ರಿಟಿಷರ ವಿರುದ್ಧ ಸಂಘಟಿತ ಹೋರಾಟ ನಡೆಸಿ, ದೇಶವನ್ನು ಬಂಧಮುಕ್ತಗೊಳಿಸಿದರು ಎಂದರು.

ಸ್ವಾತಂತ್ರ್ಯಾನಂತರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಪಂಚವಾರ್ಷಿಕ ಯೋಜನೆ, ಗರೀಬಿ ಹಠಾವೋ, ಊಳುವವನೇ ಒಡೆಯ, ಅಣೆಕಟ್ಟುಗಳ ನಿರ್ಮಾಣ, ಕೈಗಾರಿಕೆಗಳ ಅಭಿವೃದ್ಧಿ, ಮೀಸಲಾತಿ ವ್ಯವಸ್ಥೆ ಮುಂತಾದ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ದೇಶವನ್ನು ಶೂನ್ಯದಿಂದ ಆರ್ಥಿಕ ಸದೃಢತೆಯತ್ತ ಕೊಂಡೊಯ್ದರು. ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗ ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲಿ ಮನರೇಗಾ ಯೋಜನೆ ರೂಪಿಸಲಾಯಿತು. ಈ ಯೋಜನೆಯ ಮೂಲಕ ಗ್ರಾಮೀಣ ಭಾಗದ ಜನತೆಗೆ ಉದ್ಯೋಗ ನೀಡಲಾಯಿತು. ಇದರ ಮೂಲಕ ಮಹಾತ್ಮ ಗಾಂಧೀಜಿಯವರನ್ನು ಜೀವಂತವಾಗಿರುವ ಕೆಲಸ ಮಾಡಲಾಯಿತು ಎಂದರು.

ಇದೀಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮನರೇಗಾ ಯೋಜನೆಯ ಹೆಸರನ್ನು ಬದಲಿಸುವ ಮೂಲಕ ಮತ್ತು ಈ ಯೋಜನೆಗೆ ಕೇಂದ್ರದ ಅನುದಾನವನ್ನು ಕಡಿತಗೊಳಿಸುವ ಮೂಲಕ ಈ ಯೋಜನೆಯನ್ನು ನಿರ್ನಾಮ ಮಾಡುವ ಷಡ್ಯಂತ್ರವನ್ನು ರೂಪಿಸಿದಂತಿದೆ. ಕೇಂದ್ರದ ಈ ಕ್ರಮದ ವಿರುದ್ಧ ಪಕ್ಷದ ಕಾರ್ಯಕರ್ತರು ಸಂಘಟಿತವಾಗಿ ಹೋರಾಟ ನಡೆಸೋಣ. ಪಕ್ಷವನ್ನು ಬಲಪಡಿಸೋಣ. ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮರುಸ್ಥಾಪಿಸುವ ಸಂಕಲ್ಪವನ್ನು ಮಾಡೋಣ. ಆ ದಿಸೆಯಲ್ಲಿ ಎಲ್ಲರೂ ಶ್ರಮಿಸೋಣ ಎಂದರು.

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಆಶಾಲತಾ ಸೋಮಪ್ಪ ಅವರು ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಮಹತ್ವದ್ದಾಗಿದೆ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿ, ಸಮ ಸಮಾಜ ನಿರ್ಮಾಣ ಮಾಡಲು ಕಾಂಗ್ರೆಸ್ ಪಕ್ಷ ಶ್ರಮಿಸುತ್ತಿದೆ. ಪಕ್ಷವು ಜನಪರವಾದ ಕಾರ್ಯಕ್ರಮಗಳನ್ನು ರೂಪಿಸಿ, ಕಾರ್ಯರೂಪಕ್ಕೆ ತಂದಿದೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿ, ದೇಶದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಎಸ್.ಸಿರಾಜ್ ಹುಸೇನ್, ಮಾಜಿ ಸದಸ್ಯ ಎಲ್.ಎಚ್. ಶಿವಕುಮಾರ್ ಹಾಗೂ ಯೂಥ್ ಕಾಂಗ್ರೆಸ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ದೇಶವನ್ನು ಸ್ವತಂತ್ರಗೊಳಿಸುವಲ್ಲಿ ಹಾಗೂ ಸ್ವಾತಂತ್ರ್ಯ ನಂತರದಲ್ಲಿನ ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಕುರಿತು ವಿವರಿಸಿದರು.

ಕೃಷ್ಣಾನಗರ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಮುಖಂಡರಾದ ಟಿ.ಅಂಜಿನಪ್ಪ, ವೆಂಕಟೇಶ್, ನಾಗರಾಜ್, ದಾದಾಪೀರ್, ಗಂಗಾಧರ್ ಮುಂತಾದವರು ಉಪಸ್ಥಿತರಿದ್ದರು.