ರಾಮನಗರ: 2028ರ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭಯ ಕಾಂಗ್ರೆಸ್‌ಗೆ ಶುರುವಾಗಿದೆ. ಹೀಗಾಗಿಯೇ ಚುನಾವಣಾ ಆಯೋಗದ ವಿರುದ್ಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಧರಣಿ ಸೋಲಿನ ಭಯದಿಂದ ಮಾಡುತ್ತಿರುವ ಹತಾಶೆಯ ನಾಟಕ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು

ರಾಮನಗರ: 2028ರ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭಯ ಕಾಂಗ್ರೆಸ್‌ಗೆ ಶುರುವಾಗಿದೆ. ಹೀಗಾಗಿಯೇ ಚುನಾವಣಾ ಆಯೋಗದ ವಿರುದ್ಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಧರಣಿ ಸೋಲಿನ ಭಯದಿಂದ ಮಾಡುತ್ತಿರುವ ಹತಾಶೆಯ ನಾಟಕ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಸ್ವತಂತ್ರ, ನಿಸ್ಪಕ್ಷಪಾತ ಮತ್ತು ಸಂವಿಧಾನ ಬದ್ಧವಾದ ಸಂಸ್ಥೆ. ದೇಶದಲ್ಲಿ ಹಲವು ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆದಿದೆ. ಕಾಂಗ್ರೆಸ್ ಬ್ಯಾಕ್ ಟು ಬ್ಯಾಕ್ ಚುನಾವಣೆಯಲ್ಲಿ ಸೋಲು ನೋಡಿ ಹತಾಶೆಗೊಂಡಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೆ ಉಳಿದಿರುವುದು ಕರ್ನಾಟಕ ಒಂದೇ ರಾಜ್ಯ. ಅದಕ್ಕಾಗಿ ಇಲ್ಲಿ ಹೋರಾಟ, ಧರಣಿ ನಾಟಕ ಮಾಡುತ್ತಿದೆ. ರಾಜ್ಯದಲ್ಲೂ ಕಾಂಗ್ರೆಸ್ ನಾಯಕರಿಗೆ ಸೋಲಿನ ಭಯ ಶುರುವಾಗಿರುವುದರಿಂದಲೇ ಭಾರತ್ ಜೋಡೋ 2.0 ಹೆಸರಿನಲ್ಲಿ ಮತ್ತೆ ಜನರನ್ನು ದಾರಿ ತಪ್ಪಿಸಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.

ಚೆನ್ನಮ್ಮ ಹೆಸರಿನಲ್ಲಿ ರಾಜಕೀಯ ಬೇಡ:

ಚೆನ್ನಮ್ಮ ಅವರಿಗೆ ಆದಾಯ ತೆರಿಗೆ (ಐಟಿ) ನೋಟಿಸ್ ನೀಡಲಾಗಿತ್ತು ಎಂಬ ಸಚಿವ ಬಾಲಕೃಷ್ಣ ಆರೋಪಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಚೆನ್ನಮ್ಮ ಅವರ ವಿಚಾರದಲ್ಲಿ ಸಚಿವ ಬಾಲಕೃಷ್ಣ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಕುರಿತು ನಮ್ಮ ಪಕ್ಷದ ಮಾಜಿ ಶಾಸಕರಾದ ಎ. ಮಂಜುನಾಥ್ ಈಗಾಗಲೇ ದಾಖಲೆ ಸಮೇತ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆಂದರು.

ಆದಾಯ ತೆರಿಗೆ ಕಟ್ಟುವುದು ಒಂದು ದಿನ ತಡವಾದರೂ ಐಟಿ ಅಧಿಕಾರಿಗಳು ನೋಟಿಸ್ ನೀಡುವುದು ಸಾಮಾನ್ಯ ಪ್ರಕ್ರಿಯೆ. ನೋಟಿಸ್ ಎಂದರೆ ತೆರಿಗೆ ಬಾಕಿ ಇದೆ ಎಂದು ಗಮನಕ್ಕೆ ತರುವುದು ಅಷ್ಟೇ. ಇದನ್ನೇ ದೊಡ್ಡ ಅಪರಾಧದಂತೆ ಬಿಂಬಿಸುತ್ತಿರುವುದು ಸರಿಯಲ್ಲ. ರಾಜಕೀಯ ಲಾಭಕ್ಕಾಗಿ, ರಾಜಕೀಯ ದ್ವೇಷಕ್ಕಾಗಿ ಚೆನ್ನಮ್ಮನವರಂತಹ ಹಿರಿಯರ ಹೆಸರನ್ನು ಎಳೆದು ತರುವುದು ಸರಿಯಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.

1ಕೆಆರ್ ಎಂಎನ್ 2.ಜೆಪಿಜಿ

ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು.