ಮಡಿಕೇರಿಯಲ್ಲಿ ಕಾಂಗ್ರೆಸ್ ಪರಿಶಿಷ್ಟ ಜಾತಿ ಸಮಾವೇಶ

| Published : Apr 24 2024, 02:19 AM IST

ಸಾರಾಂಶ

ಬಿಜೆಪಿ ಗೆದ್ದರೆ ಪ್ರಜಾಪ್ರಭುತ್ವದ ಕೊನೆಯ ಚುನಾವಣೆಯಾಗಲಿದೆ. ಮುಂದೆ ಸಂವಿಧಾನವೇ ಇರುವುದಿಲ್ಲ ಎಂದು ಸಚಿವ ಎಚ್‌. ಸಿ. ಮಹದೇವಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬಿಜೆಪಿ ಗೆದ್ದರೆ ಇದೇ ಪ್ರಜಾಪ್ರಭುತ್ವದ ಕೊನೆಯ ಚುನಾವಣೆಯಾಗಲಿದ್ದು, ಮುಂದೆ ಸಂವಿಧಾನವೇ ಇರುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯ ಹಿಂದು ರಾಷ್ಟ್ರ ಪರಿಕಲ್ಪನೆ ಸಂವಿಧಾನವನ್ನು ಬದಲಾವಣೆ ಮಾಡುವ ಹುನ್ನಾರವಾಗಿದೆ. ಇದು ಅವರ ಹಿಡನ್ ಅಜೆಂಡಾ ಎಂದರು.

ಪ್ರಧಾನಿ ಮೋದಿ ಅವರು ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಿಂದ ಮಾತ್ರ ಸಂವಿಧಾನದ ರಕ್ಷಣೆ ಸಾಧ್ಯ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂವಿಧಾನ ಜಾಥಾ ನಡೆಸಿದೆ. ಆ ಮೂಲಕ ಸಂವಿಧಾನ ರಕ್ಷಣೆಗೆ ಮುಂದಾಗಿದೆ ಎಂದು ತಿಳಿಸಿದರು.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಕಾಂಗ್ರೆಸ್ ಸರ್ಕಾರ ಜನರ ಪರವಾಗಿದೆ. ಸರ್ಕಾರದ ಗ್ಯಾರಂಟಿಗಳು ಜನರಿಗೆ ತುಂಬಾ ಅನುಕೂಲವಾಗಿದೆ. ಆದ್ದರಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ಕೂಡಿತ್ತು. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಸಮಸ್ಯೆಗಳನ್ನು ಪರಿಹರಿಸುತ್ತಿದೆ ಎಂದರು.

ಕೆಪಿಸಿಸಿ ಸದಸ್ಯರಾದ ಹೆಚ್.ಎಂ. ನಂದಕುಮಾರ್ ಅಧ್ಯಕ್ಷತೆಯಲ್ಲಿಸಭೆ ನಡೆಯಿತು.

ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಪ್ರಮುಖರಾದ ಟಿ.ಪಿ.ರಮೇಶ್, ಕೆ.ಕೆ.ಮಂಜುನಾಥ್ ಕುಮಾರ್, ವಿ.ಪಿ.ಶಶಿಧರ್, ಹೆಚ್,ಎ.ಹಂಸ, ಸತೀಶ್ ,ಸುರಯ್ಯ ಅಬ್ರಾರ್, ರಾಜೇಶ್ ಯಲ್ಲಪ್ಪ,ಮುನೀರ್ ಅಹಮದ್,ತೆನ್ನಿರ ಮೈನಾ ಮತ್ತಿತರರು ಪಾಲ್ಗೊಂಡಿದ್ದರು.