ಸಾರಾಂಶ
ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಆದ ಹಿನ್ನಡೆ ಕುರಿತ ಆತ್ಮಾವಲೋಕನ ಹಾಗೂ ಮುಂಬರುವ ವಿಧಾನಸಭೆ ಚುನಾವಣೆಗೆ ತಯಾರಿ ಸಲುವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಇಂದಿನಿಂದ (ಶುಕ್ರವಾರ) ಮೂರು ದಿನಗಳ ಕಾಲ ಮಹತ್ವದ ಸರಣಿ ಸಭೆಗಳು ಕೆಪಿಸಿಸಿ ಕಚೇರಿಯಲ್ಲಿ ಆರಂಭವಾಗಲಿವೆ.
ಶುಕ್ರವಾರ ಬೆಳಗ್ಗೆ ಮೊದಲನೆಯದಾಗಿ ಚಿಂತಕರ ಛಾವಡಿ ರಚನೆ ಸಂಬಂಧ ಸಭೆ ನಡೆಯಲಿದೆ. ಪಕ್ಷ ಹಾಗೂ ಸರ್ಕಾರಕ್ಕೆ ಅಗತ್ಯ ಸಂದರ್ಭಗಳಲ್ಲಿ ಸಲಹೆ-ಮಾರ್ಗದರ್ಶನ ನೀಡಲು ಬುದ್ಧಿ ಜೀವಿಗಳನ್ನು ಒಳಗೊಂಡ ಚಿಂತಕರ ಛಾವಡಿ ರಚಿಸಲಿದ್ದು, ಚಿಂತಕರ ಛಾವಡಿಯಲ್ಲಿ ಯಾರು ಇರಬೇಕು? ಅವರ ಕೆಲಸ ಕಾರ್ಯಗಳೇನು ಎಂಬುದು ಸೇರಿದಂತೆ ರೂಪುರೇಷೆ ಸಿದ್ಧಪಡಿಸುವ ಕುರಿತು ಚರ್ಚೆಯಾಗಲಿದೆ.
ಬೆನ್ನಲ್ಲೇ ಲೋಕಸಭೆ ಚುನಾವಣೆಯಲ್ಲಿ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳೊಂದಿಗೆ ಸಭೆ ನಡೆಯಲಿದ್ದು, ಪರಾಜಿತ ಅಭ್ಯರ್ಥಿಗಳು ಈಗಿನಿಂದಲೇ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಬಲಗೊಳಿಸುವ ಕಾರ್ಯದಲ್ಲಿ ತೊಡಗುವಂತೆ ಮಾಡಲು ಸಲಹೆ-ಮಾರ್ಗದರ್ಶನ ನೀಡುವ ಸಾಧ್ಯತೆಯಿದೆ.ಜತೆಗೆ ಕೆಪಿಸಿಸಿ ಅಧ್ಯಕ್ಷರೂ ಆದ ಶಿವಕುಮಾರ್ ಅವರು ಶುಕ್ರವಾರದಿಂದ ಪ್ರತ್ಯೇಕವಾಗಿ ನಾಯಕರು, ಮುಂಚೂಣಿ ಘಟಕಗಳ ಮುಖ್ಯಸ್ಥರು ವಿವಿಧ ಹಂತದ ಪದಾಧಿಕಾರಿಗಳ ಜತೆ ಚುನಾವಣೆ ಫಲಿತಾಂಶ, ಮುಂಬರುವ ವಿಧಾನಸಭೆ ಉಪ ಚುನಾವಣೆ, ಕಾಂಗ್ರೆಸ್ ಕುಟುಂಬ ಕಾರ್ಯಕ್ರಮ ಕುರಿತು ಸರಣಿ ಸಭೆಗಳನ್ನು ನಡೆಸಲಿದ್ದಾರೆ.
ಈ ಸಭೆಯಲ್ಲಿ ಮಂಚೂಣಿ ಘಟಕಗಳ ಅಧ್ಯಕ್ಷರ ಸಾಧನೆ ಪರಾಮರ್ಶೆ ನಡೆಯಲಿದೆ. ಅಧಿಕಾರವಹಿಸಿಕೊಂಡ ನಂತರದಿಂದ ಇದುವರೆಗೂ ಕೈಗೊಂಡಿರುವ ಕಾರ್ಯಕ್ರಮಗಳು ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಅಧ್ಯಕ್ಷರು ವರದಿ ನೀಡಲಿದ್ದು, ಅದರ ಆಧಾರದ ಮೇಲೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.