ಸಾರಾಂಶ
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ರಸ್ತೆ ಸುರಕ್ಷತಾ ಸಭೆ ಗುರುವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಎಲ್ಲ ರಸ್ತೆಗಳಲ್ಲಿ ವಿವಿಧ ವಾಹನಗಳಿಗೆ ಅವುಗಳ ವೇಗದ ಮಿತಿಯ ಸೂಚನಾ ಫಲಕ ಅಳವಡಿಸಲು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಗುರುವಾರ ನಡೆದ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾಹನಗಳ ವೇಗದ ಮಿತಿ ಮೀರುವ ವಾಹನ ಚಾಲಕರ ವಿರುದ್ಧ ಮಂಗಳೂರು ಸಂಚಾರ ಪೊಲೀಸರು ‘ಮೊಬೈಲ್ ಸ್ಪೀಡ್ ರಾಡಾರ್ ಗನ್’ ಮುಖಾಂತರ ಪ್ರಕರಣ ದಾಖಲಿಸುವ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ವಿವಿಧ ವಾಹನಗಳಿಗೆ ನಿಗದಿಪಡಿಸಿದರುವ ವೇಗ ಮಿತಿಯ ಸೂಚನಾ ಫಲಕಗಳನ್ನು ರಸ್ತೆಗಳ ಬದಿಯ ಸಾಕಷ್ಟು ಕಡೆಗಳಲ್ಲಿ ಅಳವಡಿಸುವಂತೆ ಸೂಚಿಸಿದರು. ಅತೀ ವೇಗ ಹಾಗೂ ಅಜಾಗರೂಕತೆಯ ವಾಹನ ಚಾಲನೆಯಿಂದಾಗಿ ಉಂಟಾಗುತ್ತಿರುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಕಮಿಷನರೇಟ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ನಗರ ಸಭೆ, ಪುರಸಭೆ/ ಪಾಲಿಕೆ ವ್ಯಾಪ್ತಿಯ ಹಾಗೂ ಇತರ ರಸ್ತೆಗಳಲ್ಲಿ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.ಅಧಿಸೂಚನೆಯಲ್ಲಿ ತಿಳಿಸಿರುವ ರಸ್ತೆಗಳನ್ನು ಉಪಯೋಗಿಸುವ ಎಲ್ಲ ವಾಹನ ಚಾಲಕರು ವೇಗದ ಮಿತಿಯ ಸೂಚನಾ ಫಲಕಗಳಲ್ಲಿ ಕಾಣಿಸಿದ ಮಿತಿಗಿಂತ ಕಡಿಮೆ ವೇಗದಲ್ಲಿ ವಾಹನವನ್ನು ಚಲಾಯಿಸಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಮಂಗಳೂರು ನಗರ ಟ್ರಾಫಿಕ್ ಪೊಲೀಸರ ಅಪಘಾತ ತಡೆ ಅಭಿಯಾನಕ್ಕೆ ಸಹಕರಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.
ಡಿಸಿಪಿ ದಿನೇಶ್ ಕುಮಾರ್, ಎನ್‌ಎಚ್‌ಎಐ ಇಲಾಖೆಯ ಯೋಜನಾ ನಿರ್ದೇಶಕ ಅಬ್ದುಲ್ಲ ಜಾವೇದ್ ಅಝ್ಮಿ, ಎಂಜಿನಿಯರ್ ಅನಿರುದ್ಧ ಕಾಮತ್, ಪಿಡಬ್ಲ್ಯೂಡಿ ಇಲಾಖೆಯ ಎಇ ಲಾಯಿಡ್ ಡಿಸಿಲ್ವಾ, ಮಂಗಳೂರು ಸ್ಮಾರ್ಟ್‌ಸಿಟಿ ಎಇಇ ಮಂಜು ಕೀರ್ತಿ, ಮಹಾನಗರಪಾಲಿಕೆ ಇಇ ಜ್ಞಾನೇಶ್, ಎಇಇ ಎಂ.ಎನ್. ಶಿವಲಿಂಗಪ್ಪ ಮತ್ತು ಎಇಇ ಮಿಥುನ್ ಇದ್ದರು.