ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದಸರಾ ಮತ್ತು ಗಣಪತಿಯಂತಹ ರಾಷ್ಟ್ರೀಯ ಹಬ್ಬಗಳಿಗೆ ಕಾಂಗ್ರೆಸ್ ಸರ್ಕಾರ ವಿಘ್ನ ತಂದಿದ್ದು, ವಿಘ್ನ ನಿವಾರಣೆಯಾಗಬೇಕಾದರೆ ಕಾಂಗ್ರೆಸ್ ಸರ್ಕಾರ ತೊಲಗಬೇಕು ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ತನ್ನ ಮತಬ್ಯಾಂಕ್ ಉಳಿಸಿಕೊಳ್ಳಲು ಅತಿಯಾದ ತುಷ್ಟೀಕರಣ ನೀತಿ ಅನುಸರಿಸಿದ ಪರಿಣಾಮ ಹಿಂದೂಗಳ ಹಬ್ಬಗಳ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸುವ ಮೂಲಕ ವಿಘ್ನಗಳನ್ನು ತಂದಿದೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಗಣಪತಿಯ ರಾಜಬೀದಿ ಉತ್ಸವದಲ್ಲಿ ನಡೆದ ಗಲಾಟೆ ಪೂರ್ವನಿಯೋಜಿತ ಕೃತ್ಯವಾಗಿದೆ. ದುಷ್ಕರ್ಮಿಗಳು ಕರೆಂಟ್ ತೆಗೆದು, ಕಲ್ಲು ಮತ್ತು ದೊಣ್ಣೆಗಳನ್ನು ಸಂಗ್ರಹಿಸಿ ಗಲಭೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಈ ಘಟನೆಯನ್ನು ಮುಸ್ಲಿಂ ಸಂಘಟನೆಗಳು ಖಂಡಿಸಿವೆ. ಆದರೆ ರಾಜ್ಯ ಸರ್ಕಾರ ಈ ಘಟನೆಯ ಹಿಂದೆ ಆರ್.ಎಸ್ ಎಸ್ , ಬಿಜೆಪಿಯವರ ಕುಮ್ಮಕ್ಕಿದೆ ಎಂದು ಆರೋಪ ಮಾಡುತ್ತಿದೆ. ಆದರೆ ಕೆಲವು ಕಿಡಿಗೇಡಿಗಳಿಂದ ಈ ಘಟನೆ ನಡೆದಿದೆ ಎಂದರು.ಗಣೇಶ ಉತ್ಸವಕ್ಕೆ ಮತ್ತು ಮೆರವಣಿಗೆಗೆ ತೊಂದರೆ ನೀಡಲು ರಾಜ್ಯ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ, ಏಕೆಂದರೆ ಗೋ ಕಳ್ಳತನ ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಿದವರ ಮೇಲಿನ ಪ್ರಕರಣಗಳು. ಇದೇ ರೀತಿ ಡಿ.ಜೆ.ಹಳ್ಳಿ ಮತ್ತು ಕೆ.ಜೆ.ಹಳ್ಳಿ ಗಲಭೆಯಲ್ಲಿ ಭಾಗಿಯಾದವರ ಮೇಲಿನ ಕೇಸುಗಳನ್ನು ಸಹ ವಾಪಸ್ ಪಡೆದಿರುವುದೇ ಗಲಭೆಗೆ ಕಾರಣ ಎಂದು ಆರೋಪಿಸಿದರು.
ಧರ್ಮ ಬದಲಿಸಲು ದಿನಾಂಕ ನಿಗದಿ ಪಡಿಸಲಿ: ಭದ್ರಾವತಿ ಶಾಸಕರು ಮುಂದಿನ ಜನ್ಮದಲ್ಲಿ ನಾನು ಮುಸ್ಲಿಂ ಧರ್ಮದಲ್ಲಿ ಹುಟ್ಟಬೇಕು ಅಂತ ಹೇಳಿಕೆ ನೀಡಿದ್ದಾರೆ. ಆದಷ್ಟು ಬೇಗ ಮುಸ್ಲಿಂ ಆಗಲು ದಿನಾಂಕ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.ಚಾಮುಂಡಿ ಬೆಟ್ಟ ಹಿಂದೂಗಳದ್ದಲ್ಲ ಎಂದು ಹೇಳುವುದಾದರೆ ಅದು ಯಾರದ್ದು?. ಅದು ಟಿಪ್ಪು, ಹೈದರಾಲಿಯದ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಎರಡನೇ ಟಿಪ್ಪು ಸುಲ್ತಾನ್ ದರ್ಬಾರ್ ನಡೆಯುತ್ತಿದೆ. ಕಿಡಿಗೇಡಿಗಳು ಹಮಾರ ಗೌರ್ಮೆಂಟ್ ಅಂತ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ನವರ ಆಡಳಿತ ನಡೆಯುತ್ತಿಲ್ಲ ಎಂದು ಟೀಕಿಸಿದರು.
ಚಿತ್ರದುರ್ಗದಲ್ಲಿ ಗಣಪತಿ ಮೆರವಣಿಗೆಗೆ ಡಿಜೆ ಬಳಸಲು ಅವಕಾಶ ನೀಡುತ್ತಿಲ್ಲ ಎಂದು ಆಕ್ಷೇಪಿಸಿದ ಅವರು, ನಾವು ಶವಯಾತ್ರೆ ಮಾಡುತ್ತಿದ್ದೇವೆಯೇ ಎಂದು ಪ್ರಶ್ನಿಸಿದರು. ಕಾನೂನು ಸುವ್ಯವಸ್ಥೆ ನೆಪ ಇಟ್ಟುಕೊಂಡು ಹಿಂದೂಗಳ ಹಬ್ಬಕ್ಕೆ ತೊಂದರೆ ನೀಡುವುದು ಸರಿಯಲ್ಲ. ಕೂಡಲೇ ಡಿಜೆ ಹಾಕಲು ಅವಕಾಶ ನೀಡಬೇಕು. ಸರ್ಕಾರ ಕೂಡಲೇ ತನ್ನ ಧೋರಣೆಯನ್ನು ಬದಲಾವಣೆ ಮಾಡಿಕೊಡಬೇಕು ಎಂದರು.ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ವಿಪರೀತ ತುಷ್ಟೀಕರಣದಿಂದ ವಕ್ಪ್ ಆಸ್ತಿ ಹೆಚ್ಚಾಗುತ್ತಿದೆ. ಗುತ್ತಿಗೆಯಲ್ಲಿ ಮೀಸಲಾತಿ ಜಾರಿಗೆ ತಂದಿದೆ. ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗುತ್ತಾರೆ. ವಸತಿ ಯೋಜನೆಯಡಿ ಶೆ.೧೮ ರಷ್ಟು ಮೀಸಲಾತಿ ಪಡೆದುಕೊಳ್ಳುತ್ತಾರೆ. ಹಾಗೆಯೇ, ಮತಾಂತರ ನಿಷೇಧ ಕಾಯಿದೆ ವಾಪಸ್ ಪಡೆಯುವ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್, ಪ್ರಮುಖರಾದ ಟಿ.ಡಿ ಮೇಘರಾಜ್, ಶಿವರಾಜ್, ಸಿದ್ದಲಿಂಗಪ್ಪ, ಮಾಲತೇಶ್, ಭೂಪೇಂದ್ರ, ಸುಧಾಕರ್, ಮಂಗಳಾ ನಾಗೇಂದ್ರ, ನಿವೇದಿತಾ ರಾಜು, ಹರಿಕೃಷ್ಣ ಇದ್ದರು.