ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿಗಳ ಹಾಗೂ ಪ್ರತ್ಯೇಕ ಲಿಂಗಾಯತ ಧರ್ಮ ಪ್ರತಿಪಾದಿಸುವ ಸ್ವಾಮೀಜಿಗಳ ಮಧ್ಯೆ ಸಂಘರ್ಷ ಶುರುವಾಗಿದೆ. ಇದು ಹಿಂದೂಗಳನ್ನು ಇಬ್ಭಾಗ ಮಾಡಲು ಹೊರಟಿರುವ ಕಾಂಗ್ರೆಸ್‌ನ ಮತ್ತೊಂದು ಮಾರ್ಗ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆರೋಪಿಸಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಮಾತು ಆಡಿದರು ಎಂದು ಅವರಿಗೆ ಜಿಲ್ಲೆಗೆ ಬಾರದಂತೆ ನಿರ್ಬಂಧ ಹೇರಲಾಗಿದೆ. ಸಚಿವ ಎಂ.ಬಿ.ಪಾಟೀಲರು ತಮ್ಮ ಮನಸಿಗೆ ತಾವೇ ಕೇಳಿಕೊಳ್ಳಲಿ, ಅವರು ಯಾವತ್ತೂ ಈ ರೀತಿ ಮಾತನಾಡಿಲ್ಲವೇ ಎಂಬುದನ್ನು ಅವರೇ ವಿಚಾರ ಮಾಡಲಿ. ಇದೇ ರೀತಿ ಅನ್ಯಾಯ ಮಾಡುತ್ತಿದ್ದರೆ ಧರ್ಮಸ್ಥಳದಂತೆ ದೊಡ್ಡ ಹೋರಾಟ ಆಗಲಿದೆ. ಬಬಲೇಶ್ವರದಲ್ಲಿ ಜನರೇ ಹೋರಾಟಕ್ಕೆ ಇಳಿಯಲಿದ್ದಾರೆ. ಕನ್ಹೇರಿ ಶ್ರೀಗಳ ವಿಚಾರ ಕಾಂಗ್ರೆಸ್ ಸರ್ಕಾರ ಅವರಿಗೆ ನಿರ್ಬಂಧ ಹೇರಿದ್ದರಿಂದ ಇಷ್ಟು ದೊಡ್ಡದಾಗಿದೆ. ಕಾಂಗ್ರೆಸ್ ಹುಳಿ ಹಿಂಡುವ ಕೆಲಸ ಬಂದ್ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿರುವ ಕೆಲವರು ಲಿಂಗಾಯತ ನಾಯಕ ಆಗಲು ಯತ್ನಿಸುತ್ತಿದ್ದಾರೆ. ಆದರೆ ಆ ನೈತಿಕ ಹಕ್ಕು ಕಳೆದುಕೊಂಡಿದ್ದರಿಂದ ಅವರು ಲಿಂಗಾಯತ ನಾಯಕ ಆಗಲು ಸಾಧ್ಯವಿಲ್ಲ. ಧರ್ಮಸ್ಥಳ ಪ್ರಕರಣದಲ್ಲಿ ಗುರುಗಳಿಗೆ ಅನ್ಯಾಯ ಮಾಡಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ರೈತರಿಗಾಗಿ ಸೇವೆ ಒದಗಿಸುವ ಕನ್ಹೇರಿ ಗುರುಗಳಿಗೂ ಹಿಂಸೆ ಕೊಡುತ್ತಿದ್ದಾರೆ. ಹಿಂದೆ ಪಂಚಮಸಾಲಿ ಸಮಾಜ 2ಎ ಮೀಸಲಾತಿ ಕೇಳಿ ಪ್ರತಿಭಟಿಸಿದರೆ ಅವರ ಮೇಲೆ ಲಾಠಿ ಚಾರ್ಜ್ ಮಾಡಿದರು. ಎಸ್ಸಿಎಸ್‌ಟಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಬ್ರಿಟಿಷರು ಸೇರಿಕೊಂಡು ಆಡಳಿತ ನಡೆಸುತ್ತಿದ್ದಾರೆನೋ ಎಂಬ ಅನುಭವ ಆಗುತ್ತಿದೆ ಎಂದು ದೂರಿದರು.ಲಿಂಗಾಯತ ಧರ್ಮವನ್ನು ಪ್ರತ್ಯೇಕ ಮಾಡಲು ಹೋಗಿ ಈಗಾಗಲೇ ಕೈ ಸುಟ್ಟುಕೊಂಡಿದ್ದಾರೆ. ಎಂ.ಬಿ.ಪಾಟೀಲರೇ ತಾವು ಸಿಎಂ ಆಗುವ ಕನಸಿನಿಂದ ಹಿಂದೂಗಳ ಇಬ್ಭಾಗ ಮಾಡಬೇಡಿ. ನೀವು ಸಿಎಂ ಆಗುವುದಾರೆ ನವೆಂಬರ್ ಕ್ರಾಂತಿಯೊಳಗೆ ಸಿಎಂ ಆಗಿ. ಡಿ.ಕೆ.ಶಿವಕುಮಾರ ಅವರು ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ತಾವು ಸಿಎಂ ಆಗಲು ನೇರವಾಗಿ ಪ್ರಯತ್ನಿಸುತ್ತಿದ್ದಾರೆ, ಹಾಗೇ ನೀವು ಪರೋಕ್ಷವಾಗಿ ಪ್ರಯತ್ನಿಸುತ್ತಿದ್ದೀರಿ. ಆಗುವುದಾದರೆ ಈಗಲೇ ಸಿಎಂ ಆಗಬೇಕು ಯಾಕೆಂದರೆ 2028ರಲ್ಲಿ ನಿಮ್ಮ ಕನಸು ಈಡೇರುವುದಿಲ್ಲ, ಆಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಜಿ.ಬಿರಾದಾರ ಮಾತನಾಡಿ, ಕಾಲುವೆಗಾಗಿ 2013ರಲ್ಲೇ ಕಾಂಗ್ರೆಸ್ ಸರ್ಕಾರ ಭೂ ಸ್ವಾಧೀನ ಮಾಡಿಕೊಂಡಿದೆ. 12 ವರ್ಷಗಳಾದರೂ ಪರಿಹಾರ ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಭೂ ಸ್ವಾಧೀನ ಮಾಡಿಕೊಂಡು ಪರಿಹಾರ ಕೊಡದೆ ರೈತರಿಗೆ ಅನ್ಯಾಯ ಮಾಡಿದೆ. ಜಿಲ್ಲೆಯಲ್ಲಿ ರೈತರ ಪರಿಹಾರದ 8 ಸಾವಿರ ಕೇಸ್ ಬಾಕಿ ಇವೆ. ಕಳೆದ ಎರಡೂವರೆ ವರ್ಷದಲ್ಲಿ ರೈತರಿಗೆ ಒಂದೇ ಒಂದು ರೂಪಾಯಿ ಭೂ ಪರಿಹಾರದ ಹಣ ಬಂದಿಲ್ಲ. ರೈತರಿಗೆ ಪರಿಹಾರ ಕೊಡುವುದನ್ನು ಮುಂದೂಡಲು 50 ವಕೀಲರನ್ನು ನೇಮಿಸಿಕೊಂಡು ಸುಮಾರು 15 ಕೋಟಿಯಷ್ಟು ವಕೀಲರ ಫೀ ಹಣವನ್ನು ರಾಜ್ಯ ಸರ್ಕಾರ ಖರ್ಚು ಮಾಡಿದೆ ಎಂದರು. ರಾಜ್ಯ ಸರ್ಕಾರ ತಕ್ಷಣವೇ ಬೆಳೆ ಪರಿಹಾರ ಕೊಡುವ ಕೆಲಸ ಮಾಡಬೇಕಿದೆ. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಈರಣ್ಣ ರಾವೂರ, ಸಾಬು ಮಾಶ್ಯಾಳ, ವಿಜಯ ಜೋಶಿ ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))