ನರಸಿಂಹರಾಜಪುರ ಕಾಂಗ್ರೆಸ್ ಪಕ್ಷ ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಬಗ್ಗೆ ಅಪಪ್ರಚಾರ, ದ್ವೇಷದ ರಾಜಕಾರಣ ಮಾಡುತ್ತಿದೆ. ಇದನ್ನು ಬಿಟ್ಟು ಅಭಿವೃದ್ಧಿ ಕಡೆ ಗಮನ ಹರಿಸಲಿ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವಿ.ನೀಲೇಶ್ ಸಲಹೆ ನೀಡಿದರು.

ಪತ್ರಿಕಾ ಭವನದಲ್ಲಿ ತಾಲೂಕು ಬಿಜೆಪಿ ಸುದ್ದಿಗೋಷ್ಠಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಾಂಗ್ರೆಸ್ ಪಕ್ಷ ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಬಗ್ಗೆ ಅಪಪ್ರಚಾರ, ದ್ವೇಷದ ರಾಜಕಾರಣ ಮಾಡುತ್ತಿದೆ. ಇದನ್ನು ಬಿಟ್ಟು ಅಭಿವೃದ್ಧಿ ಕಡೆ ಗಮನ ಹರಿಸಲಿ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವಿ.ನೀಲೇಶ್ ಸಲಹೆ ನೀಡಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 2023 ರ ಶೃಂಗೇರಿ ವಿಧಾನ ಸಭಾ ಚುನಾವಣೆ ಎಣಿಕೆ ಕಾರ್ಯದ ದಿನ ಮೊದಲು ಅಂಚೆ ಮತ ಎಣಿಕೆ ಮಾಡಿ ಫಲಿತಾಂಶ ತಿಳಿಸಬೇಕಾಗಿತ್ತು. ಆದರೆ, ಎಣಿಕೆ ಕಾರ್ಯ ಪೂರ್ತಿ ಮಾಡದೆ ಅರ್ಧಕ್ಕೆ ನಿಲ್ಲಿಸಿ ಎವಿಎಂ ಎಣಿಕೆ ಪ್ರಾರಂಭ ಮಾಡಿದರು. ಸಂಜೆ 4- 5.30 ಗಂಟೆ ಒಳಗೆ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಮರು ಎಣಿಕೆಗೆ ಮನವಿ ಮಾಡಿದರು. ಆದರೂ ಚುನಾವಣಾ ಅಧಿಕಾರಿಗಳು ಜೀವರಾಜ್ ಮನವಿ ಗಣನೆಗೆ ತೆಗೆದುಕೊಳ್ಳಲಿಲ್ಲ. ಸಂಜೆ ಹೊತ್ತಿಗೆ ಫಲಿತಾಂಶ ಘೋಷಣೆ ಮಾಡಿದರು. ನಂತರ ಮರು ಎಣಿಕೆ ಮಾಡಬೇಕು ಎಂದು ಜೀವರಾಜ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ಪ್ರಾರಂಭಿಸಿದ್ದರು.

ಕೋರ್ಟಿನ ಆದೇಶದಂತೆ ಅಂಚೆ ಮತ ಮರು ಎಣಿಕೆಯಾಗಿ ಡಿ.ಎನ್.ಜೀವರಾಜ್ 52 ಅಂತರದಿಂದ ಜಯ ಗಳಿಸಿದ್ದು ಚುನಾವಣಾ ಆಯೋಗ ಪ್ರಮಾಣ ಪತ್ರ ನೀಡಿದೆ. ಸ್ಪೀಕರ್ ಪ್ರಮಾಣ ವಚನ ಬೋಧಿಸಿದ್ದಾರೆ. 2023ರ ಜನಾ ದೇಶದಂತೆ ಬಿಜೆಪಿ ಜೀವರಾಜ್ ಗೆದ್ದಿದ್ದಾರೆ ಎಂದರು.

ಈಗ ರಾಜೇಗೌಡರು ಸುಪ್ರೀಂ ಕೋರ್ಟಿಗೆ ಹೋಗಿ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ಇದು ಅಂತಿಮ ಅಲ್ಲ. ಮೇ 21 ಕ್ಕೆ ಮತ್ತೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಇದೆ. ಕೋರ್ಟಿಗೆ ಚುನಾವಣಾ ಆಯೋಗ ಸಂಪೂರ್ಣ ವರದಿ ಸಲ್ಲಿಸಲಿದೆ. ನ್ಯಾಯಾಲಯದಲ್ಲಿ ನಮಗೆ ನಂಬಿಕೆ ಇದೆ. ಸತ್ಯಕ್ಕೆ ಜಯ ಸಿಗಲಿದೆ. ನಮ್ಮ ಸಂಘಟನೆ ಜೀವರಾಜ್ ಅವರನ್ನು ಸಂಪೂರ್ಣ ಬೆಂಬಲಿಸಲಿದೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿದಯಾನಂದ್, ಬಿಜೆಪಿ ಪಕ್ಷದ ಮುಖಂಡರಾದ ಕೆಸವಿ ಮಂಜು ನಾಥ್, ಎನ್.ಎಂ.ಕಾಂತರಾಜ್, ಎಚ್.ಡಿ.ಲೋಕೇಶ್, ಬಿ.ಎಸ್.ಆಶೀಶ್ ಕುಮಾರ್, ಜಗದೀಶ್, ವೈ.ಎಸ್.ರವಿ, ಸಜಿ ಇದ್ದರು.

-- ಬಾಕ್ಸ್ --

ರಾಜೇಗೌಡರ ನಾಮ ಫಲಕ ಕಿತ್ತ ಪ್ರಕರಣ ಸಂಬಂಧ ನಮ್ಮ ಸಂಘಟನೆ ಕೆಲವರ ಮೇಲೆ ಮಂಗಳವಾರ ರಾತ್ರಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು ಅಧಿಕಾರಿಗಳ ಮೇಲೆ ಒತ್ತಡ ತಂದು ಕೇಸು ದಾಖಲಿಸಿದ್ದಾರೆ. ಇದರಿಂದ ನಮ್ಮ ಸಂಘಟನೆ ಶಕ್ತಿ ಕುಗ್ಗಿಸಲು ಸಾಧ್ಯವಿಲ್ಲ. ನಮ್ಮ ಸಂಘಟನೆ ಕಾರ್ಯಕರ್ತರು ಹೆದರಬಾರದು. ನಿಮ್ಮ ಹಿಂದೆ ಬಿಜೆಪಿ ಇದೆ ಎಂದರು.