ಕಾಂಗ್ರೆಸ್‌ನವರು ಮೋದಿಯವರನ್ನು ಏಕವಚನದಲ್ಲಿ ಬೈದಿಲ್ವ: ಕೋಟ

| Published : Jan 16 2024, 01:52 AM IST / Updated: Jan 16 2024, 03:04 PM IST

ಸಾರಾಂಶ

ಎಲ್ಲ ರಾಜಕಾರಣಿಗಳಿಗೂ ಒಂದೇ ಮಾನದಂಡ ಇರಲಿ, ಆಗ ಮಾತ್ರ ನೀವು ಮಾಡಿದ ಖಂಡನೆಗಳಿಗೆ ಅರ್ಥ ಬರುತ್ತದೆ. ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ‘ಇವ ಗನ್ ತೆಗೆದುಕೊಂಡು ಹೋಗಿದ್ನಾ?’ ಎಂದು ಕಾಂಗ್ರೆಸ್ ನಾಯಕರು ಮೋದಿಯ ಬಗ್ಗೆ ಮಾತನಾಡಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯವರನ್ನು ಎಷ್ಟು ಬಾರಿ ಏಕವಚನದಲ್ಲಿ ಬೈದಿಲ್ಲ ? ಅದು ತಪ್ಪಲ್ವಾ ? ಕಾಂಗ್ರೆಸ್ ಮುಖಂಡರೇ, ಚರ್ಚೆ ಏಕಮುಖವಾಗಿ ಸಾಗಬಾರದು. 

ಏಕವಚನದಲ್ಲಿ ಯಾರನ್ನೂ ಬೈಯ್ಯಬಾರದು ಎಂದರೆ ಮೋದಿಯನ್ನು ಏಕವಚನದಲ್ಲಿ ಬೈದ ಸಿದ್ದರಾಮಯ್ಯ ನಿಲುವನ್ನು ಖಂಡಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಸೋಮವಾರ, ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ್ ಕುಮಾರ್ ಹೆಗಡೆ ಏಕವಚನ ಮಾತನಾಡಿದ ಬಗ್ಗೆ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆಗೆ ಮರುಪ್ರತಿಕ್ರಿಯೆ ನೀಡಿದರು.

ಎಲ್ಲ ರಾಜಕಾರಣಿಗಳಿಗೂ ಒಂದೇ ಮಾನದಂಡ ಇರಲಿ, ಆಗ ಮಾತ್ರ ನೀವು ಮಾಡಿದ ಖಂಡನೆಗಳಿಗೆ ಅರ್ಥ ಬರುತ್ತದೆ. ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ‘ಇವ ಗನ್ ತೆಗೆದುಕೊಂಡು ಹೋಗಿದ್ನಾ?’ ಎಂದು ಕಾಂಗ್ರೆಸ್ ನಾಯಕರು ಮೋದಿಯ ಬಗ್ಗೆ ಮಾತನಾಡಿದ್ದರು. ಇದು ಎಷ್ಟು ಸರಿ ಎಂದು ಕೋಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪರ್ಯಾಯಕ್ಕೆ ಹಣ ನೀಡಿಲ್ಲ:

ಉಡುಪಿಯಲ್ಲಿ ನಡೆಯುವ ಪರ್ಯಾಯ ಸರ್ವಜನರು ಆಚರಿಸುವ ಹಬ್ಬವಾಗಿದೆ. ಈ ಹಿಂದಿನ ಯಾವುದೇ ಸರ್ಕಾರ, ಯಾರೇ ಮಂತ್ರಿ ಇದ್ದರೂ ಅನುದಾನ ಬಿಡುಗಡೆ ಮಾಡಿದ್ದರು. ಎಷ್ಟು ಅನುದಾನ ಕೊಡಬೇಕು ಎಂಬುದು ಸರ್ಕಾರಕ್ಕೆ ಬಿಟ್ಟ ವಿಷಯ, ಆದರೇ ಕಾಂಗ್ರೆಸ್ ಸರ್ಕಾರ ಅನುದಾನವನ್ನೇ ನೀಡಿಲ್ಲ ಎಂದು ಅವರು ಆರೋಪಿಸಿದರು