ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮನ್ನಣೆ ನೀಡುತ್ತಾ ಬಂದಿದೆ. ಯಲಬುರ್ಗಾ ಕ್ಷೇತ್ರದಲ್ಲಿ ಅತೀ ಹೆಚ್ಚು ಬಿಜೆಪಿ ಬೆಂಬಲಿತ ಕಾರ್ಯಕರ್ತರಿದ್ದಾರೆ.
ಕುಕನೂರು: ಪ್ರಮಾಣ ವಚನ ಸ್ವೀಕರಿಸಿದ 24 ತಾಸಿನಲ್ಲಿ ಸಚಿವ ಸ್ಥಾನಕ್ಕೆರಾಜೀನಾಮೆ ಕೊಡುವ ಕಾಂಗ್ರೆಸ್ ಸಚಿವರ ಪರಿ, ಕಾಂಗ್ರೆಸ್ ದಿವಾಳಿತನದ ಪ್ರದರ್ಶನ ಆಗಿದೆ. ಅಧಿಕಾರದ ದಾಹದ ಕಚ್ಚಾಟದಿಂದ ಕಾಂಗ್ರೆಸ್ ಮುಳುಗುವ ಹಡಗು ಆಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಬಿಜೆಪಿ ಮಂಡಲದ ಸಂಘಟನಾತ್ಮಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸದಾ ಜನರ ಹಿತಕ್ಕಾಗಿ ಕಾರ್ಯ ಮಾಡಿದೆ. ಜನ ಸಾಮಾನ್ಯರ ಮನೆ ಬಾಗಿಲಿಗೆ ಯೋಜನೆ ತಲುಪಿಸಿದೆ. ಅಧಿಕಾರ ದಾಹದಿಂದ ಕಾಂಗ್ರೆಸ್ ರಾಜ್ಯದ ಬೊಕ್ಕಸ ಖಾಲಿ ಮಾಡಿದೆ. ಅಲ್ಲದೆ ಅಧಿಕಾರ ದಾಹಕ್ಕಾಗಿ ಒಳಗೊಳಗೆ ಕಚ್ಚಾಟ ಸಹ ಜರುಗುತ್ತಿದೆ. ಅವರಿಗೆ ರಾಜ್ಯದ ಜನತೆಯ ಹಿತ ಬೇಕಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ರಾಜ್ಯ ಅಭಿವೃದ್ಧಿಯಿಂದ ಸುಮಾರು ಹತ್ತು ವರ್ಷಕ್ಕೂ ಹೆಚ್ಚು ಕಾಲ ಹಿಂದುಳಿದಂತೆ ಆಗಿದೆ ಎಂದರು.ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮನ್ನಣೆ ನೀಡುತ್ತಾ ಬಂದಿದೆ. ಯಲಬುರ್ಗಾ ಕ್ಷೇತ್ರದಲ್ಲಿ ಅತೀ ಹೆಚ್ಚು ಬಿಜೆಪಿ ಬೆಂಬಲಿತ ಕಾರ್ಯಕರ್ತರಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರೂ ಬಿಜೆಪಿಯ ಕೇಂದ್ರ ಹಾಗೂ ಹಿಂದಿನ ರಾಜ್ಯ ಸರ್ಕಾರದ ಯೋಜನೆಗಳ ಸಾಧನೆ ತಲುಪಿಸಬೇಕು. ಜನ ಸಾಮಾನ್ಯರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಆಗುತ್ತಿರುವ ಹಿನ್ನಡೆ ಮನದಟ್ಟು ಮಾಡಬೇಕು. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಪಡಿಸಲು ಪ್ರತಿಯೊಬ್ಬ ಕಾರ್ಯಕರ್ತರು ಸಕ್ರಿಯರಾಗಬೇಕು ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸರ್ಕಾರ ಜನಪರ ಯೋಜನೆಗಳ ಬಗ್ಗೆ ಮಾಹಿತಿ ಹಾಕಿ ಜನರಿಗೆ ತಲುಪಿಸುವ ಕಾರ್ಯ ಆಗಬೇಕು. ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ತಮ್ಮನ್ನು ಅರ್ಪಣೆ ಮಾಡಿಕೊಂಡಿದ್ದು, ಅವರ ಸೇವಾ ಕಾರ್ಯ ಜನರಿಗೆ ತಲುಪಿಸಬೇಕು. ಭಾರತ ಸಮೃದ್ಧ ಆಗಲು ಅವರು ಕೈಗೊಂಡಿರುವ ಕೆಲಸ ಜನರು ಅರಿಯಲಿ ಎಂದರು.ಬಿಜೆಪಿ ಯಲಬುರ್ಗಾ ಮಂಡಲ ಅಧ್ಯಕ್ಷ ಮಾರುತಿ ಹೊಸಮನಿ ಮಾತನಾಡಿ, ಅನ್ಯಾಯದ ಪರ ಹಾಗೂ ಜನ ಸಾಮಾನ್ಯರ ಪರ ಬಿಜೆಪಿ ಸದಾ ಧ್ವನಿ ಎತ್ತು ಬಂದಿದೆ. ಸಂಘಟನೆ ಎಂದು ಬಂದಾಗ ಇಡೀ ವಿಶ್ವದಲ್ಲಿಯೇ ಬಿಜೆಪಿ ಅಗ್ರಗಣ್ಯ ಸ್ಥಾನದಲ್ಲಿದೆ. ಬಿಜೆಪಿ ಸದಾ ಎತ್ತರ ಸ್ಥಾನದಲ್ಲಿರುವ ಹೊಣೆಗಾರಿಕೆ ಮತ್ತಷ್ಟು ತಳಮಟ್ಟದಿಂದ ಆಗಬೇಕಿದೆ. ತಳಮಟ್ಟದಲ್ಲಿ ಬಿಜೆಪಿಯ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ಪ್ರತಿಯೊಬ್ಬರೂ ಶ್ರಮಿಸೋಣ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ನಾಡಗೇರ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರ್ಜುನ ರಾಯ್ಕರ, ಮಂಡಲ ಪ್ರಧಾನ ಕಾರ್ಯದರ್ಶಿ ಅಯ್ಯನಗೌಡ, ಅಮರೇಶ ಹುಬ್ಬಳ್ಳಿ ಶಿವಕುಮಾರ ನಾಗಲಾಪುರಮಠ, ಬಸಲಿಂಗಪ್ಪ ಭೂತೆ, ರತನದೇಸಾಯಿ, ಸಿ.ಎಚ್. ಪಾಟೀಲ, ಹಂಚಾಳಪ್ಪ ತಳವಾರ, ಕನಕಪ್ಪ ಬ್ಯಾಡರ್, ಶರಣಪ್ಪ ಬಣ್ಣದಭಾವಿ, ಬಸನಗೌಡ ತೊಂಡಿಹಾಳ, ಮಂಜುನಾಥ ನಾಡಗೌಡ್ರ, ಶಕುಂತಲಮ್ಮ ಕರಮುಡಿ, ಸಂತೋಷಿಮಾ ಜೋಶಿ, ಪಾರ್ವತಿ ಹನಸಿ, ಬಸವರಾಜ ಹಾಳಕೇರಿ, ಕರಬಸಯ್ಯ ಬಿನ್ನಾಳ, ಕುಕನೂರ ಪಪಂ ಸದಸ್ಯ ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ಶಿವರಾಜಗೌಡ ಯಲ್ಲಪ್ಪಗೌಡ್ರು, ಮಲ್ಲಿಕಾರ್ಜುನ ಚೌದರಿ, ಮಹಾಂತೇಶ ಹೂಗಾರ ಇತರರಿದ್ದರು.