ಹಾನಗಲ್ಲ: ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದ ಇಂದು ಸಾಮಾನ್ಯ ಜನರ ಜೀವನಮಟ್ಟವೇ ಕುಸಿಯುವಂತಹ ಪರಿಸ್ಥಿತಿಯನ್ನು ನಿರ್ಮಿಸಿದೆ. ಈ ಮಧ್ಯೆ ಪ್ರಧಾನಿ ಮಿತವ್ಯಯದ ಪಾಠ ಮಾಡುತ್ತಿದ್ದು, ಇದು ಕೆಟ್ಟ ಆರ್ಥಿಕ ನಿರ್ವಹಣೆಗೆ ಉದಾಹರಣೆ ಎಂದು ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಹಾಗೂ ಮಾಹಿತಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸೀರ ಅರಾಫತ್ ಮಕಾನದಾರ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಚ್ಚಾ ತೈಲದ ಬೆಲೆ ಕಳೆದ ಹತ್ತು ವರ್ಷಗಳಲ್ಲಿ ಅನೇಕ ಬಾರಿ ಇಳಿಕೆಯಾಗಿದ್ದರೂ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಸರ್ಕಾರ ಕಡಿಮೆ ಮಾಡಲಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ೨೬ ಡಾಲರ್ ಮಟ್ಟಕ್ಕೆ ಇಳಿದಾಗಲೂ ಜನರಿಗೆ ಅದರ ಲಾಭ ಸಿಗಲಿಲ್ಲ. ಆದರೆ ಈಗ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದಂತೆಯೇ ಜನರು ತ್ಯಾಗ ಮಾಡಬೇಕು ಎಂಬ ರೀತಿಯಲ್ಲಿ ಪ್ರಧಾನಿ ಕರೆ ನೀಡುತ್ತಿರುವುದು ದ್ವಂದ್ವ ನೀತಿಯಾಗಿದೆ ಎಂದು ಟೀಕಿಸಿದರು.ಪಾಮ್ ಎಣ್ಣೆ, ಸನ್‌ಫ್ಲವರ್ ಎಣ್ಣೆ ಹಾಗೂ ಇತರ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಈಗಾಗಲೇ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾದ ಸರ್ಕಾರ, ಒಮ್ಮೆ ‘ಪಕೋಡ ಮಾರಾಟ ಮಾಡಿ’ ಎಂದು ಹೇಳಿತ್ತು. ಈಗ ಅಡುಗೆ ಎಣ್ಣೆ ಕಡಿಮೆ ಬಳಸಿ ಎನ್ನುವ ಪರಿಸ್ಥಿತಿ ಬಂದಿದೆಯಾದರೆ, ಇದೇನಾ ಅಭಿವೃದ್ಧಿಯ ಮಾದರಿ?” ಎಂದು ಪ್ರಶ್ನಿಸಿದರು.
ಇದೇ ವೇಳೆ ಜನಸಾಮಾನ್ಯರಿಗೆ ಮಾತ್ರ ಮಿತ ವ್ಯಯದ ಪಾಠ ಹೇಳುವ ಪ್ರಧಾನಿ, ಸರ್ಕಾರದ ಅನಾವಶ್ಯಕ ವೆಚ್ಚ ಕಡಿತ, ಸಚಿವರ ಸೌಲಭ್ಯಗಳ ನಿಯಂತ್ರಣ ಅಥವಾ ಆಡಳಿತದ ಅನುತ್ಪಾದಕ ಕಾರ‍್ಯಕ್ರಮಗಳನ್ನು ಸ್ಥಗಿತಗೊಳಿಸುವ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.ಜಗತ್ತಿನ ಬೇರೆ ಯಾವ ದೇಶದ ನಾಯಕತ್ವವೂ ಜನರಲ್ಲಿ ಇಂತಹ ಆತಂಕದ ವಾತಾವರಣ ನಿರ್ಮಿಸುವ ಹೇಳಿಕೆಗಳನ್ನು ನೀಡಿಲ್ಲ. ಆದರೆ ಭಾರತದಲ್ಲಿ ಮಾತ್ರ ನಿರಂತರವಾಗಿ ಜನರ ಬದುಕಿನ ಮಟ್ಟ ಕುಗ್ಗಿಸುವ ಮನೋಭಾವ ಮೂಡಿಸಲಾಗುತ್ತಿದೆ. ಇದು ಬಲಿಷ್ಠ ಆರ್ಥಿಕತೆಯ ಲಕ್ಷಣವಲ್ಲ ಎಂದು ಅವರು ಅಭಿಪ್ರಾಯಪಟ್ಟರು.