ಮೋದಿ ಮತ್ತೆ ಪ್ರಧಾನಿಯಾಗಿ 3 ತಿಂಗಳಲ್ಲಿ ಕಾಂಗ್ರೆಸ್‌ ವಿಭಜನೆ: ಬಸವರಾಜ ಬೊಮ್ಮಾಯಿ

| Published : Mar 19 2024, 12:47 AM IST

ಮೋದಿ ಮತ್ತೆ ಪ್ರಧಾನಿಯಾಗಿ 3 ತಿಂಗಳಲ್ಲಿ ಕಾಂಗ್ರೆಸ್‌ ವಿಭಜನೆ: ಬಸವರಾಜ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಗಜೇಂದ್ರಗಡದಲ್ಲಿ ನಡೆದ ರೋಣ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ದೇಶದಲ್ಲಿ ಈ ಬಾರಿ ಬಿಜೆಪಿ 400ಕ್ಕೂ ಅಧಿಕ ಸ್ಥಾನ ಪಡೆಯಲಿದೆ ಎಂದರು.

ಗಜೇಂದ್ರಗಡ: ಮೋದಿ ಅವರು ಮತ್ತೆ ಪ್ರಧಾನಿಯಾದ ೩ ತಿಂಗಳ ಬಳಿಕ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ವಿಭಜನೆಯಾಗಲಿದೆ. ಪರಿಣಾಮ ಸಂಸದನಾಗಿ ನಾನು ಮತ್ತೆ ರೋಣಕ್ಕೆ ಬರುವುದು ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಎಂದು ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಾಜಿ ಶಾಸಕ ಕಳಕಪ್ಪ ಬಂಡಿ ಅವರ ನಿವಾಸದ ಆವರಣದಲ್ಲಿ ಸೋಮವಾರ ರೋಣ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ೧೦ ವರ್ಷದಲ್ಲಿ ಮೋದಿ ಅವರ ಆಡಳಿತವು ರೈತರಿಂದ ಹಿಡಿದು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ದೇಶದ ಜನತೆ ಈ ಲೋಕಸಭಾ ಚುನಾವಣೆಯಲ್ಲಿ ೪೦೦ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.ದೇಶದಲ್ಲಿ ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಸಿಗುತ್ತಿಲ್ಲ. ಸಂವಿಧಾನದ ರಕ್ಷಣೆ, ಹಿಂದುಳಿದ ವರ್ಗದ ಕಲ್ಯಾಣ ಕಾಂಗ್ರೆಸ್‌ನಿಂದ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಸಂವಿಧಾನವನ್ನು ಮೊಟಕುಗೊಳಿಸಿದ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲುತ್ತದೆ. ಹೀಗಾಗಿ ಪ್ರಧಾನಿ ಮೋದಿ ಅವರ ಅಭಿವೃದ್ಧಿ ಆಡಳಿತ ಒಂದೆಡೆಯಾದರೆ ೧ ಲಕ್ಷ ೫೦ ಸಾವಿರ ಕೋಟಿ ಸಾಲ ತಂದಿರುವ ಸಿದ್ದರಾಮಯ್ಯ ಕರ್ನಾಟಕದ ಜನರನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. ಕಾಂಗ್ರೆಸ್‌ಕ್ಕೆ ತಕ್ಕಪಾಠ ಕಲಿಸಲು ಸಕಾಲ ಬಂದಿದ್ದು ದೇಶದ ಸಮಗ್ರ ಅಭಿವೃದ್ಧಿಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಎಂದರು.ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು, ಬಡವರ ಬಾಳಿಗೆ ಬೆಳಕಾಗಲು ಹಾಗೂ ರೋಣ ಮತಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಸ ಮನ್ವಂತರಕ್ಕಾಗಿ ನನ್ನನ್ನು ಆರ್ಶೀವಾದ ಮಾಡಿ ಎಂದು ಮನವಿ ಮಾಡಿದರು.ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಕೆಲವು ತಿಂಗಳಲ್ಲಿ ೧೦ ಜನರು ಮುಂದಿನ ಸಿಎಂ ಎಂದು ಹೇಳಿಕೊಳ್ಳುತ್ತಿದ್ದಾರೆ. ಹೀಗೆ ಮಾತನಾಡುವವ ಸಂಖ್ಯೆ ಇಂದಿಗೂ ಇದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಪರಿಣಾಮ ರಾಜ್ಯದಲ್ಲಿ ಒಂದೆ ಒಂದೂ ರುಪಾಯಿಯ ಹೊಸ ಕಾಮಗಾರಿ ನಡೆದಿಲ್ಲ. ನಾನು ಶಾಸಕನಾಗಿದ್ದಾಗ ಮತಕ್ಷೇತ್ರದಲ್ಲಿ ನೂರಾರು ಕೋಟಿಯ ನೀರಾವರಿ ಕಾಮಗಾರಿ ಸೇರಿ ಹತ್ತಾರು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದೇನೆ. ಒಂದು ಕಾಲದಲ್ಲಿ ಜನರು ಇಂದಿರಮ್ಮ ಅವರಿಗೆ ಮತಹಾಕಿದ್ದೇವೆ ಎನ್ನುತ್ತಿದ್ದರು. ಈಗ ಕಾಲ ಬದಲಾಗಿದ್ದು, ಮೋದಿ ಅವರಿಗೆ ಮತ ಹಾಕಿದ್ದೇವೆ ಎನ್ನುವ ಕಾಲ ಬಂದಿದೆ. ಹೀಗಾಗಿ ಬೊಮ್ಮಾಯಿ ಅವರಿಗೆ ಅತಿ ಹೆಚ್ಚು ಮತಗಳನ್ನು ಹಾಕಿಸಲಿದ್ದೇವೆ. ಲೋಕಸಭಾ ಚುನಾವಣೆ ೬ ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕಳಸಾ ಬಂಡೂರಿ ಯೋಜನೆ ಒಂದು ಹಂತಕ್ಕೆ ಬಂದು ನಿಲ್ಲಲು ಬೊಮ್ಮಾಯಿ ಅವರು ಕಾರಣ. ಹೀಗಾಗಿ ಅಭಿವೃದ್ಧಿಯಪರ ಆಡಳಿತಕ್ಕೆ ಆದ್ಯತೆ ನೀಡುವ ಬೊಮ್ಮಾಯಿ ಅವರನ್ನು ಗೆಲ್ಲಿಸಿ ಮೋದಿ ಅವರ ಕೈ ಬಲಪಡಿಸಿ ಎಂದರು. ಮುಖಂಡ ಮುತ್ತಣ್ಣ ಕಡಗದ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಬಿ.ಎಂ. ಸಜ್ಜನರ, ಆರ್.ಕೆ. ಚವ್ಹಾಣ, ಇಂದಿರಾ ತೇಲಿ ಮಾತನಾಡಿದರು.

ರಾಜು ಕುರಡಗಿ, ಎಂ.ಎಸ್. ಕರಿಗೌಡ್ರ, ದತ್ತು ಬಾಕಳೆ, ಅಶೋಕ ನವಲಗುಂದ, ಉಮೇಶ ಮಲ್ಲಾಪುರ, ನಿಂಗಪ್ಪ ಕೆಂಗಾರ, ಮುತ್ತಣ್ಣ ಚಟ್ಟೇರ, ಬಸವರಾಜ ಬಂಕದ, ಬಾಳು ಗೌಡರ, ಭವಾನಿ ಬಾಕಳೆ ಹಾಗೂ ಪುರಸಭೆ ಸದಸ್ಯರು, ವಿವಿಧ ಮೋರ್ಚಾದ ಪದಾಧಿಕಾರಿಗಳು ಇದ್ದರು.