ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ, ಆಸ್ತಿ ನಿರ್ಮಾಣ, ಮೌಲ್ಯವರ್ಧನೆಗೆ ಆದ್ಯತೆ ನೀಡುವ ಈ ಯೋಜನೆ ಬಗ್ಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿದ ಅವರು, ಈ ಯೋಜನೆಯ ಮಹತ್ವ ಹಾಗೂ ಉಪಯೋಗದ ಬಗ್ಗೆ ಬಿಜೆಪಿಯು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಕನ್ನಡಪ್ರಭ ವಾರ್ತೆ ತುಮಕೂರು

ಉದ್ಯೋಗ ಸೃಷ್ಟಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ದೀರ್ಘ ಕಾಲದ ಸೌಕರ್ಯಗಳನ್ನು ಒದಗಿಸುವ ಗುರಿ ಹೊಂದಿರುವ ವಿಕಸಿತ ಭಾರತ- ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ವಿಬಿ- ಜಿ ರಾಮ್ ಜಿ) ಯೋಜನೆ ಬಗ್ಗೆ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುತ್ತಾ ಜನರನ್ನು ದಿಕ್ಕತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಡಾ.ಸಿ.ಅಶ್ವತ್ಥನಾರಾಯಣ ಆರೋಪಿಸಿದರು.

ಗುರುವಾರ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2006ರಲ್ಲಿ ಪ್ರಾರಂಭವಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು 20 ವರ್ಷದ ನಂತರ ಅದರ ಲೋಪದೋಷಗಳನ್ನು ಸರಿಪಡಿಸಿ, ಜಿ ರಾಮ್ ಜಿ ಹೆಸರಿನಲ್ಲಿ ಹೊಸ ಸ್ವರೂಪದಲ್ಲಿ ಜನಪರವಾದ ಗ್ರಾಮೀಣ ಮೂಲಭೂತ ಸೌಕರ್ಯ, ಆಸ್ತಿ ನಿರ್ಮಾಣ, ಮೌಲ್ಯವರ್ಧನೆಗಾಗಿ ಜಾರಿಗೆ ತರಲಾಗುತ್ತಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖಂಡರು ಈ ಯೋಜನೆ ಬಗ್ಗೆ ಜನರಲ್ಲಿ ತಪ್ಪು ಭಾವನೆ ಬಿತ್ತುತ್ತಿದ್ದಾರೆ ಎಂದು ಟೀಕಿಸಿದರು.

ನ್ಯೂನ್ಯತೆ ಸರಿಪಡಿಸಿ ಯೋಜನೆಯನ್ನು ಉತ್ತಮಪಡಿಸಿ ಗ್ರಾಮೀಣ ಪ್ರದೇಶಗಳಲ್ಲಿ ಮುಖ್ಯವಾಗಿ ನೀರಿನ ಕೊರತೆ ನೀಗಿಸುವ ಕೆಲಸಗಳು, ಮೂಲಸೌಕರ್ಯಗಳು, ದೈನಂದಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಹಾಗೂ ಪ್ರಕೃತಿ ವಿಕೋಪಗಳನ್ನು ತಗ್ಗಿಸುವ ಕ್ರಮಗಳ ಜಾರಿಗೆ ಜಿ ರಾಮ್ ಜಿ ಯೋಜನೆಯಲ್ಲಿ ಒತ್ತು ನೀಡಲಾಗಿದೆ. ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕೈಗೊಳ್ಳುವ ಈ ಯೋಜನೆಯಲ್ಲಿ 60:40ರ ಅನುಪಾತದಲ್ಲಿ ಕೇಂದ್ರ ಸರ್ಕಾರದ ಶೇಕಡ 60 ಹಾಗೂ ರಾಜ್ಯ ಸರ್ಕಾರದ ಶೇಕಡ 40ರಷ್ಟು ಅನುದಾನ ಭರಿಸಬೇಕಾಗಿದೆ ಎಂದರು.

ಕೇಂದ್ರ ಸರ್ಕಾರ ಮಂಡಿಸಿರುವ ಈ ಮಸೂದೆಯಲ್ಲಿ ವರ್ಷದಲ್ಲಿ 100 ದಿನಗಳ ಕೆಲಸದ ಅವಧಿಯನ್ನು 125 ದಿನಕ್ಕೆ ಹೆಚ್ಚಿಸಲಾಗಿದೆ. ಮನರೇಗಾದಲ್ಲಿ ಕೇಂದ್ರ ಸರ್ಕಾರ ಶೇಕಡ 100ರಷ್ಟು ಜತೆಗೆ ಶೇಕಡ 75 ರಷ್ಟು ಸಾಮಗ್ರಿಗಳ ವೆಚ್ಚವನ್ನು ಭರಿಸುತ್ತಿತ್ತು. ರಾಜ್ಯ ಸರ್ಕಾರ ಕೇವಲ ನಿರುದ್ಯೋಗ ಭತ್ಯೆ ಮತ್ತು ಶೇಕಡ ಕಚ್ಚಾ ವಸ್ತುಗಳ ವೆಚ್ಚವನ್ನು ಭರಿಸುತ್ತಿತ್ತು. ಜಿ ರಾಮ್ ಜಿ ಯೋಜನೆಯಲ್ಲಿ ವೇತನ ಮತ್ತು ಸಾಮಗ್ರಿಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ 60: 40 ಅನುಪಾತದಲ್ಲಿ ವೆಚ್ಚ ಭರಿಸಬೇಕು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ, ಆಸ್ತಿ ನಿರ್ಮಾಣ, ಮೌಲ್ಯವರ್ಧನೆಗೆ ಆದ್ಯತೆ ನೀಡುವ ಈ ಯೋಜನೆ ಬಗ್ಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿದ ಅವರು, ಈ ಯೋಜನೆಯ ಮಹತ್ವ ಹಾಗೂ ಉಪಯೋಗದ ಬಗ್ಗೆ ಬಿಜೆಪಿಯು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಜಿಲ್ಲಾ ಹಿರಿಯ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗಂಗರಾಜು, ಸಂದೀಪ್‌ಗೌಡ, ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರವೀಶಯ್ಯ, ನಗರ ಅಧ್ಯಕ್ಷ ಟಿ.ಕೆ.ಧನುಷ್, ಜಿಲ್ಲಾ ವಕ್ತಾರ ಟಿ.ಆರ್.ಸದಾಶಿವಯ್ಯ, ಮುಖಂಡರಾದ ಗಣೇಶ್‌ ಪ್ರಸಾದ್, ರಾಜಶೇಖರ್, ಜೆ.ಜಗದೀಶ್, ಹನುಮಂತರಾಜು ಮೊದಲಾದವರು ಹಾಜರಿದ್ದರು.