ಕೇಂದ್ರ ಸರ್ಕಾರ ಹೊಸ ಕಾಯ್ದೆ ಮಾಡಿರುವ ವಿಬಿ- ಜಿ ರಾಮ್ ಜಿ ಯೋಜನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ.
- ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪ । ಅರಬಗಟ್ಟೆಯಲ್ಲಿ ಜಾಗೃತಿ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕೇಂದ್ರ ಸರ್ಕಾರ ಹೊಸ ಕಾಯ್ದೆ ಮಾಡಿರುವ ವಿಬಿ- ಜಿ ರಾಮ್ ಜಿ ಯೋಜನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿ ಭಾನುವಾರ ವಿಬಿ-ಜಿ ರಾಮ್ ಜಿ ಯೋಜನೆ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ಯುಪಿಯ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಯೋಜನೆಯಲ್ಲಿ ಬಾರಿ ಭ್ರಷ್ಟಾಚಾರ ನಡೆಯುತ್ತಿತ್ತು. ಜಾಬ್ ಕಾರ್ಡ್ ವ್ಯವಸ್ಥೆಗಳಲ್ಲಿ ನಕಲಿ ಹೆಸರುಗಳೂ ಇದ್ದವು. ರಾಜಕಾರಣಿಗಳ ಹೆಸರೂ ಬಯಲಾಗಿರುವುದು ಮಾಧ್ಯಮಗಳಲ್ಲೇ ಬಂದಿದೆ. ಅದನ್ನು ತಡೆಯುವ ಉದ್ದೇಶದಿಂದ ವಿಬಿ- ಜಿ ರಾಮ್ ಜಿ ಹೆಸರಿನ ಹೊಸ ಕಾಯ್ದೆ ಕೇಂದ್ರ ಸರ್ಕಾರ ಜಾರಿಗೆ ತಂದು ಕಾರ್ಮಿಕರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.
ಈ ಕಾಯ್ದೆಯಡಿ ಮಾನವ ದಿನಗಳನ್ನು, ದಿನಗೂಲಿಯನ್ನು ಹೆಚ್ಚು ಮಾಡಿದೆ. ಇದರ ಜೊತೆಗೆ ಬೆಳಗ್ಗೆ ಸಂಜೆ ಕೆಲಸಕ್ಕೆ ಬಂದ ಕಾರ್ಮಿಕರ ತಂಬ್ ಪ್ರಿಂಟ್ ತೆಗೆದುಕೊಳ್ಳುತ್ತಾರೆ. ಇದರಿಂದ ಭ್ರಷ್ಟಾಚಾರ ಆಗುವುದು ತಪ್ಪುತ್ತದೆ ಎಂದರು.ಇಂದಿರಾ ಗಾಂಧಿ ಪತಿ ಫಿರೋಜ್ ಗಾಂಧಿ, ಕಾಂಗ್ರೆಸ್ ಮುಖಂಡರು ಮಹಾತ್ಮ ಗಾಂಧಿ ಅವರ ಹೆಸರನ್ನು ನಕಲು ಮಾಡಿಕೊಂಡು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಎಂದು ಹೆಸರಿಟ್ಟುಕೊಂಡಿದ್ದಾರೆ. ಈಗ ವಿಬಿ- ರಾಮ್ ಜಿ ಹೆಸರು ಇಟ್ಟಿರುವುದಕ್ಕೆ ಟೀಕಿಸುವ ಕಾಂಗ್ರೆಸ್ ಇಂದಿರಾ ಕ್ಯಾಂಟಿನ್ ಬದಲು ಗಾಂಧಿ ಕ್ಯಾಂಟೀನ್ ಅಂತ ಹೆಸರಿಡಬಹುದಿತ್ತಲ್ಲವೇ? ರಾಜೀವ್‌ಗಾಂಧಿ ಹೌಸಿಂಗ್ ಬೋರ್ಡ್ ಬದಲು ಗಾಂಧೀಜಿ ಹೌಸಿಂಗ್ ಬೋರ್ಡ್ ಅಂತ ಹೆಸರು ಇಡಬಹುದಿತ್ತಿಲ್ಲವೇ ಎಂದು ಪ್ರಶ್ನಿಸಿದರು.
ಯುಪಿಯ ಸರ್ಕಾರ ಇದ್ದಾಗ ನರೇಗಾ ಯೋಜನೆಗೆ ₹33 ಸಾವಿರ ಕೋಟಿ ಬಜೆಟ್‌ನಲ್ಲಿ ಮೀಸಲಿಟ್ಟಿತ್ತು, ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದಾಗ ₹1.30 ಲಕ್ಷ ಕೋಟಿ ಮೀಸಲಿಟ್ಟಿದೆ. ಈ ವರ್ಷ ಬಜೆಟ್‌ನಲ್ಲಿ ₹1.40 ಲಕ್ಷ ಕೋಟಿ ಮೀಸಲಿಟ್ಟಿದೆ. 100 ದಿನದ ಹಣ ಕೇಂದ್ರ ಕೊಡುತ್ತದೆ, ಬಾಕಿ 25 ದಿನದ ಹಣವನ್ನು ರಾಜ್ಯ ಸರ್ಕಾರಕ್ಕೆ ಕೊಡಿ ಎಂದರೆ ನಾಟಕ ಆಡುತ್ತ ಕೇಂದ್ರದ ವಿರುದ್ಧ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.17ರಂದು ಪಾದಯಾತ್ರೆ:
ಹೊನ್ನಾಳಿ ತಾಲೂಕಿನ ಹನುಮಸಾಗರ ಗ್ರಾ.ಪಂ. ವ್ಯಾಪ್ತಿಯ ಕೋನಾಯಕನಹಳ್ಳಿ, ಬಳ್ಳೇಶ್ವರ ಹಾಗೂ ಹನುಮಸಾಗರ ಗ್ರಾಮಗಳಲ್ಲಿ ವಿಬಿ- ಜಿ ರಾಮ್ ಜಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲು ಹೊನ್ನಾಳಿಯಿಂದ ಫೆ. 17ರಂದು ಪಕ್ಷದ ಮುಖಂಡರ ಜೊತೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರೇಣುಕಾಚಾರ್ಯ ಈ ಸಂದರ್ಭ ತಿಳಿಸಿದರು.ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಮುಖಂಡರಾದ ಕರಿಬಸಪ್ಪ ಇತರರು ಇದ್ದರು.
- - --8ಎಚ್.ಎಲ್.ಐ1.ಜೆಪಿಜಿ:
ಹೊನ್ನಾಳಿ ತಾಲೂಕಿನ ಅರವಗಟ್ಟೆಯಲ್ಲಿ ಭಾನುವಾರ ವಿಬಿ- ಜಿ ರಾಮ್ ಜಿ ಯೋಜನೆ ಬಗ್ಗೆ ಮಾಜಿ ಸಚಿವ ಎಂಪಿ.ರೇಣುಕಾಚಾರ್ಯ ಜಾಗೃತಿ ಮೂಡಿಸಿ ಮಾತನಾಡಿದರು.