ಕಾಂಗ್ರೆಸ್ ತುಷ್ಟೀಕರಣ ರಾಜಕೀಯಕ್ಕಾಗಿ ಮುಸ್ಲಿಂರ ಮೀಸಲಾತಿಗೆ ಬೆಂಬಲ

| Published : Apr 25 2024, 01:04 AM IST / Updated: Apr 25 2024, 01:05 AM IST

ಕಾಂಗ್ರೆಸ್ ತುಷ್ಟೀಕರಣ ರಾಜಕೀಯಕ್ಕಾಗಿ ಮುಸ್ಲಿಂರ ಮೀಸಲಾತಿಗೆ ಬೆಂಬಲ
Share this Article
  • FB
  • TW
  • Linkdin
  • Email

ಸಾರಾಂಶ

ಸಚಿವ ಶಿವಾನಂದ ಪಾಟೀಲ ಹೇಳಿಕೆ ಕಾಂಗ್ರೆಸ್ ನ ಮನಸ್ಥಿತಿ ತೋರಿಸುತ್ತದೆ. ಕೊಲೆ ಮಾಡಿದವ ಅಲ್ಪಸಂಖ್ಯಾತನಾಗಿದ್ದಾನೆ. ತುಷ್ಟೀಕರಣ ರಾಜಕಾರಣದ ಚಸ್ಮಾ ಹಾಕಿಕೊಂಡು ಪ್ರಕರಣ ಕಾಂಗ್ರೆಸ್ ನೋಡುತ್ತಿದೆ

ಗದಗ: ಧರ್ಮ ಆಧಾರಿತ ಮೀಸಲಾತಿಗೆ ಅವಕಾಶ ಇಲ್ಲ ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಿದ್ದರೂ ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣಕ್ಕೆ ಮುಸ್ಲೀಮರ ಮೀಸಲಾತಿಗೆ ಬೆಂಬಲ ಕೊಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಗದಗ ಹಾವೇರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲೀಂರಲ್ಲೂ ಚಪ್ಪರಬಂದ್, ನದಾಫ್, ಪಿಂಜಾರ್ ಸೇರಿದಂತೆ 24 ಜಾತಿಯವರು ಬಹಳ ಹಿಂದುಳಿದವರಿದ್ದಾರೆ. ಅವರಿಗೆ ಈಗಾಗಲೇ 2ಎ ಯಲ್ಲಿ‌ ಮೀಸಲಾತಿ ಇದೆ. ಅವರಿಗೆ ಹೆಚ್ಚುವರಿಯಾಗಿ ಶೇ. 4 ಪರ್ಸೆಂಟ್ ಮೀಸಲಾತಿ ಕೊಟ್ಟಿದ್ದರು. ಅದನ್ನೇ ಹಿಂದುಳಿದ ವರ್ಗಗಳ ಆಯೋಗ ಆಕ್ಷೇಪ ಮಾಡಿದೆ. ಈಗ ಆ ಕೇಸ್ ಸುಪ್ರೀಂ ಕೋರ್ಟಿನಲ್ಲಿದೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಸ್ತಿ ಮರು ಹಂಚಿಕೆ ಮಾಡುತ್ತಾರೆ ಎನ್ನುವ ಮಾತಿಗೆ ಪ್ರತಿಕ್ರಿಯಿಸಿದ ಅವರು, ಆಸ್ತಿ ಕೇಳುವುದಕ್ಕೆ ಬಹಳ ಚೆನ್ನಾಗಿ ಅನಿಸುತ್ತದೆ. ಆದರೆ, ಯಾರದ್ದು ಕಿತ್ತುಕೊಂಡು ಯಾರಿಗೆ ಕೊಡುತ್ತಾರೆ? ಏನ್ ಸರ್ವೆ ಮಾಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು. ಕಾಂಗ್ರೆಸ್ ನೀತಿ ಇದ್ದಲ್ಲಿ‌ ಸ್ಪಷ್ಟವಾಗಿ ಹೇಳಬೇಕು, ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯದ ಹಾಗೇ ಆಸ್ತಿ ಮಾಡುವ ಹಕ್ಕೂ ಇದೆ. ಕಾಂಗ್ರೆಸ್ ನವರು ಸಂವಿಧಾನದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಹೀಗೆ ಮಾತನಾಡಬಾರದು ಎಂದರು.

ಕಾಂಗ್ರೆಸ್ ‌ಮನಸ್ಥಿತಿ: ಹುಬ್ಬಳ್ಳಿ ಯುವತಿ ನೇಹಾ ಹತ್ಯೆ ಪ್ರಕರಣ ಸಾಮಾನ್ಯ ಎಂದಿದ್ದ ಸಚಿವ ಶಿವಾನಂದ ಪಾಟೀಲ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಆಕ್ರೋಶ ವ್ಯಕ್ತಪಡಿಸಿದ ಬಸವರಾಜ ಬೊಮ್ಮಾಯಿ, ಸಚಿವ ಶಿವಾನಂದ ಪಾಟೀಲ ಹೇಳಿಕೆ ಕಾಂಗ್ರೆಸ್ ನ ಮನಸ್ಥಿತಿ ತೋರಿಸುತ್ತದೆ. ಕೊಲೆ ಮಾಡಿದವ ಅಲ್ಪಸಂಖ್ಯಾತನಾಗಿದ್ದಾನೆ. ತುಷ್ಟೀಕರಣ ರಾಜಕಾರಣದ ಚಸ್ಮಾ ಹಾಕಿಕೊಂಡು ಪ್ರಕರಣ ಕಾಂಗ್ರೆಸ್ ನೋಡುತ್ತಿದೆ. ಈ ಪ್ರಕರಣವನ್ನು ಗೌಣ ಮಾಡುವುದಕ್ಕಾಗಿ ಈ ಥರದ ಹೇಳಿಕೆ ನೀಡುತ್ತಿದ್ದಾರೆ. ಇದು ಸಮಾಜಕ್ಕೆ ಬಹಳ ನೋವುಂಟು ಮಾಡುವ ಕೆಲಸ. ಇಂಥ ಹೇಳಿಕೆ ನೇಹಾ ಕಳೆದುಕೊಂಡು ನೋವಿನಲ್ಲಿರುವ ಕುಟುಂಬಕ್ಕೂ ನೋವು ತರುತ್ತದೆ. ಶಿವಾನಂದ ಪಾಟೀಲ್ ಯಾವಾಗಲೂ ಹೀಗೆ ಮಾತನಾಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಇಂಥವರೇ ಬೇಕಾಗಿದ್ದಾರೆ ಎಂದು ಹೇಳಿದರು. ಇದೇ ವೇಳೆ ಚೊಂಬು ಬದಲು ಪ್ರಧಾನಿ ನರೇಂದ್ರ ಮೋದಿ ಅವರ ಅಕ್ಷಯ ಪಾತ್ರೆ ಬಗ್ಗೆ ಜನರ ಒಲವಿದೆ ಎಂದರು.