ಜಯದೇವ ಹೃದ್ರೋಗ ಸಂಸ್ಥೆ ಕೀರ್ತಿಗೆ ಮಸಿ ಬಳಿದ ಕಾಂಗ್ರೆಸ್‌: ಆರ್‌. ಅಶೋಕ

| Published : Jun 21 2024, 01:05 AM IST

ಜಯದೇವ ಹೃದ್ರೋಗ ಸಂಸ್ಥೆ ಕೀರ್ತಿಗೆ ಮಸಿ ಬಳಿದ ಕಾಂಗ್ರೆಸ್‌: ಆರ್‌. ಅಶೋಕ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿಯ ಜಿಮ್ಸ್‌ ಜಿಲ್ಲಾಸ್ಪತ್ರೆ ಹಾಗೂ ಜಯದೇವ ಹೃದ್ರೋಗ ವಿಜ್ಞಾನ- ಸಂಶೋಧನಾ ಸಂಸ್ಥೆಗೆ ಗುರುವಾರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಭೇಟಿ ನೀಡಿ ಎರಡೂ ಕಡೆ ರೋಗಿಗಳು, ಅವರ ಸಹಾಯಕರೊಂದಿಗೆ ಮಾತುಕತೆ ನಡೆಸಿ ವಾಸ್ತವಾಂಶಗಳನ್ನು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ನೀರಿಲ್ಲವೆಂದು ಶಸ್ತ್ರಚಿಕಿತ್ಸೆಗಳನ್ನು ಮುಂದೂಡಿರುವ ಇಲ್ಲಿನ ಜಿಮ್ಸ್‌ ಜಿಲ್ಲಾಸ್ಪತ್ರೆ ಹಾಗೂ ಜಯದೇವ ಹೃದ್ರೋಗ ವಿಜ್ಞಾನ- ಸಂಶೋಧನಾ ಸಂಸ್ಥೆಗೆ ಗುರುವಾರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಭೇಟಿ ನೀಡಿ ಎರಡೂ ಕಡೆ ರೋಗಿಗಳು, ಅವರ ಸಹಾಯಕರೊಂದಿಗೆ ಮಾತುಕತೆ ನಡೆಸಿ ವಾಸ್ತವಾಂಶಗಳನ್ನು ಪರಿಶೀಲಿಸಿದರು.

ಉಭಯ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು ಹಾಗೂ ಸಹಾಯಕರು ಕಳೆದ 1 ವಾರದಿಂದ ನೀರಿನ ಸಮಸ್ಯೆ ಕಾಡುತ್ತಿದೆ. ತಾವು ಬಾಟಲ್‌ ನೀರನ್ನೇ ಬಳಸುತ್ತಿರೋದಾಗಿ ಹೇಳಿದರಲ್ಲದೆ ಅನೇಕರ ಎಮರ್ಜೆನ್ಸಿ ಶಸ್ತ್ರ ಚಿಕಿತ್ಸೆಗಳನ್ನೆಲ್ಲ ಮುಂದೂಡಿ ವೈದ್ಯರು ಹೇಳಿದ್ದಾರೆ. ನಮಗೆಲ್ಲರಿಗೂ ತೊಂದರೆ ಕಾಡುತ್ತಿದೆ ಎಂದು ಆಸ್ಪತ್ರೆಯಲ್ಲಿನ ನೀರಿನ ಹಾಹಾಕಾರದಿಂದ ತಮಗೆ ಎದುರಾಗಿರುವ ಸಮಸ್ಯೆಗಳನ್ನು ಅಶೋಕ ಮುಂದೆ ಕಣ್ಣಿಗೆ ಕಟ್ಟುವಂತೆ ವಿವರಿಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌.ಅಶೋಕ್‌, ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ಬದುಕಿದೆಯಾ? ಸತ್ತಿದೆಯಾ? ಎಂದೇ ಅರ್ಥವಾಗ್ತಿಲ್ಲ. ಇಲ್ಲಿನ ಆಸ್ಪತ್ರೆ ದುರವಸ್ಥೆ ನೋಡಿದರೆ ಈ ಸರಕಾರ ಐಸಿಯೂನಲ್ಲಂತೂ ಇದೆ ಎಂಬುದು ಖಚಿತವಾಗ್ತಿದೆ ಎಂದರು.

ಜೂ.16, 17, 18 ಮೂರು ದಿನ ಮಳೆಯಿಂದಾಗಿ ರಾಡಿ ನೀರು ಬಂತೆಂದು ತುರ್ತು ಶಸ್ತ್ರ ಚಿಕಿತ್ಸೆಗಳನ್ನೇ ನಿಲ್ಲಿಸಿದ್ದಾರೆ. ಹೀಗಾದರೆ ಬಡ ರೋಗಿಗಳು ಹೋಗೋದೆಲ್ಲಿ? ಇದು ಘೋರ ಅಲಕ್ಷತನ, ಇದಕ್ಕೆ ಯಾರು ಹೊಣೆ? ತಕ್ಷಣ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಇಡೀ ಬೆಳವಣಿಗೆಯ ಸಮಗ್ರ ತನಿಖೆಗೆ ಆಗ್ರಹಿಸುವೆ, ಅಲಕ್ಷತನಕ್ಕೆ ಪಾಲಿಕೆಯ ಕಮೀಷ್ನರ್‌, ಜಿಲ್ಲಾಡಳಿತದ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿಸುವಂತೆ ಆಗ್ರಹಿಸುವೆ ಎಂದರು.

ಉಭಯ ಆಸ್ಪತ್ರೆಗಳಿಗೆ ನಿತ್ಯ ನಾಲ್ಕರಿಂದ ಐದು ನೂರು ಹೊರ ರೋಗಿಗಳು, 150ರಿಂದ 200 ಒಳ ರೋಗಿಗಳು ಇರುತ್ತಾರೆ, ಜಯದೇವಕ್ಕೆ ಬರೋರು ಎಮರ್ಜೆನ್ಸಿಯಲ್ಲೇ ಬಂದಿರುತ್ತಾರೆ. ಹೀಗೆ ಬರೋರನ್ನ ನೀರಿಲ್ಲವೆಂದು ಚಿಕಿತ್ಸೆಯಿಂದ ವಂಚಿತರನ್ನಾಗಿ ಮಾಡಿದರೆ ಅವರ ಪ್ರಾಣದ ಜೊತೆ ಚೆಲ್ಲಾ ಆಡಿದಂತಲ್ಲವೆ? ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಜನರ ಪ್ರಾಣದ ಬೆಲೆ ಗೊತ್ತಿಲ್ಲ, ಅದಕ್ಕೆ ಇಂತಹ ಘೋರ ಅಲಕ್ಷತನವಾದರೂ ಮೌನವಾಗಿದ್ದಾರೆಂದು ದೂರಿದರು.

ಕಲುಷಿತ ನೀರು ಪೂರೈಕೆ, ರಾಡಿ ನೀರಿನ ಸರಬರಾಜು ಆದಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಪಂ ಸಿಇಓ ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳೋದಾಗಿ ಸಿಎಂ ಹೇಳಿದ್ದರು. ಶಸ್ತ್ರ ಚಿಕಿತ್ಸೆಗಳನ್ನೇ ನಿಲ್ಲಿಸಿರುವ ಕಲಬುರಗಿಯ ಈ ಪ್ರಕರಣದಲ್ಲಿ ಯಾರ್ಯಾರ ಮೇಲೆ ಕ್ರಮವಾಗಿದೆ? ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಇಲ್ಲಿನವರಾದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಇಲ್ಲಿನ್ನೂ ಬಂದು ನೋಡೇ ಇಲ್ಲ. ಸಿಎಂ ರಾಜಕೀಯ ಸಲಹೆಗಾರರೂ ಬಿಆರ್‌ ಪಾಟೀಲ್‌ ಕೂಬಡಾ ಇಲ್ಲಿನವರೇ, ಇಂತಹ ಘಟಾನುಘಟಿ ತ್ರಿಮೂರ್ತಿಗಳ ಜಿಲ್ಲೆಯಲ್ಲೇ ಈ ದುರವಸ್ಥೆಯಾದರೆ ಮುಂದೇನು ಗತಿ? ಎಂದರು.

ಜಯದೇವ, ಜಿಮ್ಸ್ನಿಂದ ಕಳೆದ 5 ದಿನದಿಂದ ಹೆಚ್ಚಿನ ಸಾವು- ನೋವಾಗಿರುವ ಆರೋಪಗಳಿವೆ. ಈ ಬಗ್ಗೆಯೂ ತನಿಖೆಯಾಗಬೇಕು, ವಾಸ್ತಂವ ಹೊರಬರಬೇಕೆಂಬ ಪತ್ರಕರ್ತರ ಗಮನ ಸೆಳೆದ ಪ್ರಶ್ನೆಗೆ ಸ್ಪಂದಿಸಿದ ಅಶೋಕ ಅದಕ್ಕೇ ತಾವು ಪರಿಣಿತರ ತಂಡದಿಂದ ಇಲ್ಲಿನ ಬೆಳವಣಿಗೆಯ ತನಿಖೆಗೆ ಆಗ್ರಹಿಸೋದಾಗಿ ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ಸರ್ಕಾರ ಐಸಿಯುನಲ್ಲಿದೆ: ನೀರಿಲ್ಲವೆಂದು 3 ದಿನ ಚಿಕಿತ್ಸೆ ನಿಲ್ಲಿಸಿದ್ದಾರೆಂದರೆ ವೈದ್ಯರೇ ಹೇಳುವಂತೆ ಲೆಕ್ಕ ಹಾಕಿ ನೋಡಿದರೆ ಅಂದಾಜು ಕನಿಷ್ಠ ಪಕ್ಷ 900 ರೋಗಿಗಳು ಚಿಕಿತ್ಸೆ ವಂಚಿತರಾಗಿದ್ದಾರೆ, ಅವರೆಲ್ಲಿ ಹೋದರೋ ಗೊತ್ತಿಲ್ಲ, ಅವರ ಆರೋಗ್ಯ ಹೇಗಿದೆಯೋ ಗೊತ್ತಿಲ್ಲ. ಇದಕ್ಕೆಲ್ಲ ಸರ್ಕಾರವೇ ಹೊಣೆ ಎಂದ ಅಶೋಕ್‌, ಜಯದೇವದಂತಹ ಗೌರವ ಹೊಂದಿದ ಸಂಸ್ಥೆಯ ಗೌರವಕ್ಕೆ ಕಾಂಗ್ರೆಸ್‌ ಆಡಳಿತ ಮಸಿ ಬಳಿಯಿತು ಎಂದು ವಿಷಾದಿಸಿದರು.

ಡಾ. ಮಂಜುನಾಥ್‌ ನಿರ್ದೇಶಕರಾಗಿದ್ದ ಕಾಲದಿಂದಲೂ ಈ ಸಂಸ್ಥೆ ದೇಶ, ವಿದೇಶಗಳಲ್ಲಿ ಹೆಸರು ಮಾಡಿತ್ತು. ಕಲಬುರಗಿ ಜಯದೇವದಲ್ಲಿ ಈ ದುರವಸ್ಥೆ ಕಾಡಿದೆ ಎಂತಾದಲ್ಲಿ ಸಂಸ್ಥೆಯ ಗೌರವ ಮಣ್ಣುಪಾಲು ಆದಂತೆಯೇ. ಇಷ್ಟಾದರೂ ಆಡಳಿತದಲ್ಲಿರುವ ಯಾರೂ ಸ್ಪಂದಿಸಿಲ್ಲ, ಹೇಳಿಕೆ ನೀಡಿಲ್ಲ, ಭೇಡಿ ಕೂಡಾ ಕೊಟ್ಟಿಲ್ಲವೆಂದರೆ ಅವರ ಅಲಕ್ಷತನ ಪರಮಾವಧಿಗೆ ಇದೇ ಕನ್ನಡಿ ಎಂದು ಅಶೋಕ ತಿವಿದರು.

ಮೂರು ದಿನವಾದ್ರೂ ಸಿಎಂ ಮೌನ, ಡಿಸಿಎಂ ಚನ್ನಪಟ್ಟಣದಲ್ಲಿ ಸಂಚಾರ: ಸಿಎಂ ಕಥೆ ಬಿಡಿ, ಮಂತ್ರಿಯೇ ಬಂದು ಹೋಗಿಲ್ಲ, ಡಿಸಿಎಂ ಸಾಹೇಬರೂ ಆದಾಗಲೇ ಚನ್ನಪಟ್ಟಣ ಉಪ ಚುನಾವಣೆಗೆ ಹೋಗಿಬಿಟ್ಟಿದ್ದಾರೆಂದು ಅಶೋಕ ಲೇವಡಿ ಮಾಡಿದರು. ಗ್ಯಾರಂಟಿಯಿಂದಾಗಿ ಅಭಿವೃದ್ಧಿಗೆ ಹೊಡೆತ ಬಿದ್ದಿದೆ ಅಂತ ನಾನು ಹೇಳಿದ್ರೆ ಅಶೋಕಗೆ ಬುದ್ದಿ ಕಮ್ಮಿ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯಾರಿಗೆ ಬುದ್ದಿ ಕಮ್ಮಿ ಈಗ ಗೊತ್ತಾಗಿದೆ. ನಾನೂ 5 ಬಾರಿ ಮಂತ್ರಿಯಾಗಿದ್ದೆ. ತಿಪ್ಪರಲಾಗ ಹಾಕಿದರೂ 80 ಸಾವಿರ ಕೋಟಿ ಅಭಿವೃದ್ಧಿಗೆ ಹಣ ವೆಚ್ಚ ಮಾಡಲಾಗದು. ಅಂತಹದ್ದರಲ್ಲಿ ಗ್ಯಾರಂಟಿಗಳಿಗೆ 65 ಸಾವಿರ ಕೋಟಿ ರು. ವೆಚ್ಚ ಮಾಡಿದರೆ ಅಭಿವೃದ್ಧಿ ಹೋಗಿ ಹೀಗೆ ಎಡವಟ್ಟುಗಳಗದೆ ಇನ್ನು ಆಗುತ್ತದೆ ಹೇಳಿ ಎಂದು ಪ್ರಶ್ನಿಸಿದರು.

ವಿದೇಶಗಳಲ್ಲೆಲ್ಲಾ ಹೆಸರು ಮಾಡಿದ ಜಯದೇವದಂತಹ ಸಂಸ್ಥೆಯಲ್ಲೇ ನೀರಿಲ್ಲವೆಂದು ಆಪರೇಷನ್ ನಿಲ್ಲಿಸುತ್ತಾರಂದರೆ ಇದು ಸರಕಾರಕ್ಕೇ ಕಪ್ಪು ಚುಕ್ಕೆ, ನಿವ್ರಹಣೆಯ ಜ್ಞಾನ ವಿಲ್ಲದವರು ಸೇರಿ ಮಾಡಿದ ಎಡವಟ್ಟು. ಅಬ್ಬಬ್ಬಾ ಎಂದರೂ 20 ಲಕ್ಷ ರು. ವೆಚ್ಚ ಮಾಡಿದ್ದರೂ ಶುದ್ಧ ನೀರು ಹೊರಗಿನಿಂದ ತರಿಸಿ ಸಮಸ್ಯೆ ಬಗೆಹರಿಸಬಹುದಾಗಿತ್ತು. ಅದನ್ನೂ ಮಾಡದೆ ಬಡವರಿಗೆ ಚಿಕಿತ್ಸೆ ನಿರಾಕರಿಸಿದ ಕಲಬುರಗಿ ಜಯದೇವ ಹಾಗೂ ಜಿಮ್ಸ್‌ ಆಸ್ಪತ್ರೆಗಳ ಧೋರಣೆ ಅಕ್ಷಮ್ಯ. ಇದಕ್ಕೆಲ್ಲ ಹೊಣೆಗಾರಿಕೆ ನಿಗದಿಪಡಿಸಿ ಶಿಸ್ತು ಕ್ರಮ ಆಗೋವರೆಗೂ ಬಿಡೋದಿಲ್ಲ. ಸದನದಲ್ಲೂ ಈ ವಿಚಾರ ಪ್ರಸ್ತಾಪಿಸುವೆ ಎಂದು ಅಶೋಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತ ಹೇಳಿದರು.

ಕರುನಾಡಲ್ಲಿ ಇನ್ಮುಂದೆ ತೆರಿಗೆ ಪರ್ವ: ಮುದ್ರಾಂಕ ಶುಲ್ಕವಾಯ್ತು, ಮದ್ಯದ ದರವಾಯ್ತು, ತೈಲ ಬೆಲೆಯಾಯ್ತು, ಶೀಘ್ರವೇ ಬಸ್‌ ದರ ಹೆಚ್ಚಳವಾಗುತ್ತದೆ, ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತ ಚುಕ್ಕಾಣಿ ಹಿಡಿದ ವರ್ಷದೊಳಗೇ ತೆರಿಗೆ ಪರ್ವ, ಬೆಲೆ ಏರಿಕೆ ಪರ್ವಗಳೇ ಶುರುವಾಗಿವೆ. ಬರೋ ದಿನಗಳಲ್ಲಿ ಇದಿನ್ನು ಹೆಚ್ಚಲಿದೆ ಎಂದು ಅಶೋಕ ಆತಂಕ ಹೊರಹಾಕಿದರು. 15 ಬಾರಿ ಹಣಕಾಸು ಸಚಿವರಾಗಿ ಬಜೆಟ್‌ ಮಂಡಿಸಿದ್ದಾಗಿ ಹೇಳಿಕೊಳ್ಳುವ ಸಿದ್ದರಾಮಯ್ಯನವರಿಗೆ ಯಾವಾಗ ಅದೆಷ್ಟು ಹಣ ಹೊಂದಿಸಬೇಕು ಎಂಬುದು ಗೊತ್ತಿಲ್ಲವೆ? ಬಜೆಟ್‌ ಮಾರನೇ ದಿನವೇ ತೈಲಬೆಲೆ ಹೆಚ್ಚಿಸಬೇಕಿತ್ತು. ಸಮರ್ಥ ಹಣಕಾಸು ಸಚಿವನೆಂದು ಹೇಳಿಕೊಳ್ಳುವ ಸಿಎಂ ಸಮರ್ಥರಲ್ಲ. ತೆರಿಗೆ ಹೆಚ್ಚಿಸಿ ರಾಜ್ಯಭಾರ ಮಾಡುತ್ತಿದ್ದಾರೆಂದು ಅಶೋಕ ತಿವಿದರು.