ಕಾಂಗ್ರೆಸ್‌ ಪಕ್ಷದ ಹಿರಿಯ ಶಾಸಕರಾಗಿದ್ದ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಶಾಮನೂರು ಕುಟುಂಬಕ್ಕೆ ಮೊದಲ ಆದ್ಯತೆ ನೀಡಲಿ. ಹಾಗೇನಾದರೂ ಬದಲಾವಣೆ ಮಾಡಿದರೆ ನಮ್ಮ ಬ್ರದರ್‌ಗೆ ಟಿಕೆಟ್ ಕೊಡಲಿ ಎಂದು ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದ್ದಾರೆ.

- ಅಣ್ಣ ಶ್ರೀನಿವಾಸ್‌ಗೆ ಟಿಕೆಟ್‌ ಕೊಟ್ಟರೆ ನಾನೇ ಚುನಾವಣೆ ಎದುರಿಸುವೆ: ಬಸವರಾಜ ಶಿವಗಂಗಾ ಹೇಳಿಕೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಗ್ರೆಸ್‌ ಪಕ್ಷದ ಹಿರಿಯ ಶಾಸಕರಾಗಿದ್ದ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಶಾಮನೂರು ಕುಟುಂಬಕ್ಕೆ ಮೊದಲ ಆದ್ಯತೆ ನೀಡಲಿ. ಹಾಗೇನಾದರೂ ಬದಲಾವಣೆ ಮಾಡಿದರೆ ನಮ್ಮ ಬ್ರದರ್‌ಗೆ ಟಿಕೆಟ್ ಕೊಡಲಿ ಎಂದು ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಮನೆಯಲ್ಲಿ ಜನಪ್ರತಿನಿಧಿ ಆದವರ ಸಾವಾಗಿರುತ್ತದೋ, ಅವರ ಕುಟುಂಬದವರಿಗೇ ಚುನಾವಣೆ ಸ್ಪರ್ಧೆಗೆ ಟಿಕೆಟ್ ನೀಡುವ ಸಂಪ್ರದಾಯ ಕಾಂಗ್ರೆಸ್‌ ಪಕ್ಷದಲ್ಲಿದೆ. ಅದರಂತೆ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್‌ ಸಹ ಶಾಮನೂರು ಕುಟುಂಬಕ್ಕೇ ನೀಡಬೇಕಾಗುತ್ತದೆ. ಹಾಗಾಗಿ ಶಾಮನೂರು ಕುಟುಂಬಕ್ಕೆ ಆದ್ಯತೆ ನೀಡಲಿ ಎಂದರು.

ಕಾಂಗ್ರೆಸ್‌ ಹೈಕಮಾಂಡ್ ಘೋಷಿಸಿದ ಅಭ್ಯರ್ಥಿ ಪರವಾಗಿ ನಾವೆಲ್ಲರೂ ಕೆಲಸ ಮಾಡುತ್ತೇವೆ. ಹಾಗೇನಾದರೂ ಟಿಕೆಟ್ ವಿಚಾರದಲ್ಲಿ ಬದಲಾವಣೆ ಮಾಡಿದರೆ ಶ್ರೀನಿವಾಸ ವಿ. ಶಿವಗಂಗಾ ಅವರಿಗೆ ನೀಡಲಿ. ಕಾಂಗ್ರೆಸ್ ಪಕ್ಷದಿಂದ ನಮ್ಮಣ್ಣನಿಗೆ ಟಿಕೆಟ್ ಕೊಟ್ಟರೆ ತಪ್ಪಿಲ್ಲ. ಬ್ರದರ್‌ಗೆ ಟಿಕೆಟ್ ನೀಡಿದರೆ ನಾನು ಚುನಾವಣೆ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ತಮ್ಮ ಅಣ್ಣನಿಗೆ ಕಾಂಗ್ರೆಸ್‌ ಟಿಕೆಟ್‌ಗಾಗಿ ಬೇಡಿಕೆ ಇಟ್ಟರು.

ಮುಖ್ಯಮಂತ್ರಿ ಕುರ್ಚಿ ವಿಚಾರ ನಾನು ಈಗ ಮಾತನಾಡುವುದಿಲ್ಲ. ಜ.14ಕ್ಕೆ ಸಂಕ್ರಾಂತಿ ಇದೆ. ಸಂಕ್ರಾಂತಿಗೆ ಇನ್ನೂ 8-10 ದಿನಗಳು ಬಾಕಿ ಇವೆ. ನಿಮ್ಮ ಪ್ರಶ್ನೆಯ ಬಗ್ಗೆ ಜ.16ರಂದು ಚರ್ಚೆ ಮಾಡೋಣ. ಹಿಂದೆಯೇ ಸಂಕ್ರಾಂತಿ ಆದ ನಂತರ ಮಾತನಾಡೋಣ ಎಂದಿದ್ದೇನೆ. ಹಬ್ಬ ಮುಗಿಯಲಿ. ಆಗ ನಿಮ್ಮ ಪ್ರಶ್ನೆಯ ಬಗ್ಗೆ ಮಾತನಾಡೋಣ ಎಂದುತ್ತರಿಸಿದರು.

- - -

(ಬಾಕ್ಸ್‌) * ಗುಂಡುಗಳ ಲೆಕ್ಕ ಸಿಕ್ಕೇ ಸಿಗುತ್ತದೆ ದಾವಣಗೆರೆ: ಬಳ್ಳಾರಿ ಫ್ಲೆಕ್ಸ್ ಗಲಾಟೆಯಲ್ಲಿ ಕಾಂಗ್ರೆಸ್ ಯುವ ಕಾರ್ಯಕರ್ತನ ಸಾವಿನ ಬಗ್ಗೆ ತನಿಖೆಯಾಗಲಿ. ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆಯಾಗಲಿ. ಈ ನಿಟ್ಟಿನಲ್ಲಿ ನಾನೂ ಸರ್ಕಾರಕ್ಕೆ ಒತ್ತಾಯಿಸುವೆ ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯ ವಾಸ್ತವ ಪರಿಸ್ಥಿತಿಯೇ ಗೊತ್ತಿಲ್ಲ. ಯಾರೂ ಇಂತಹ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಅಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮವೂ ಇತ್ತು. ವಾಲ್ಮೀಕಿ ಪುತ್ಥಳಿ ಅನಾವರಣ ಸಮಾರಂಭ ನಡೆಯಬಾರದೆಂದೇ ಗಲಾಟೆ ಸೃಷ್ಟಿ ಅಂತಾ ಮಾಧ್ಯಮಗಳಲ್ಲಿ ನಾನೂ ನೋಡಿದ್ದೇನೆ ಎಂದು ಚನ್ನಗಿರಿ ಶಾಸಕ ತಿಳಿಸಿದರು.

ಘಟನೆಯ ಗಾಯಾಳುಗಳು ತಮ್ಮ ನಾಯಕರ ಜೊತೆಗೆ ಸುದ್ದಿಗೋಷ್ಠಿಯಲ್ಲಿ ಕುಳಿತು, ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾರಿ ತಪ್ಪಿಸುವ ಕೆಲಸವನ್ನು ಯಾರೂ ಮಾಡಬಾರದು. ಈಗಾಗಲೇ ನಮ್ಮ ಸರ್ಕಾರವು ಪ್ರಕರಣವನ್ನು ತನಿಖೆಗೆ ಒಪ್ಪಿಸಿದೆ. ಬಳ್ಳಾರಿಯಲ್ಲಿ ಕಲ್ಲುಗಳಿಗಂತೂ ಲೆಕ್ಕ ಸಿಗುವುದಿಲ್ಲ. ಆದರೆ, ಗುಂಡುಗಳಿಗಂತೂ ಲೆಕ್ಕ ಸಿಕ್ಕೇ ಸಿಗುತ್ತದೆ. ಗಲಾಟೆಯಲ್ಲಿ ಯಾವ ಬಂದೂಕಿನಿಂದ ಗುಂಡಿ ಹಾರಿವೆ, ಬಲಿ ಪಡೆದಿದೆ ಎಂಬುದೂ ವಿಧಿವಿಜ್ಞಾನ ಪ್ರಯೋಗಾಲಯ ತನಿಖೆಯಿಂದ ಸ್ಪಷ್ಟವಾಗುತ್ತದೆ ಎಂದರು.

- - -

-4ಕೆಜಿವಿಜಿ1, 2: ಬಸವರಾಜ ವಿ. ಶಿವಗಂಗಾ