ಈಶ್ವರ ಶೆಟ್ಟರ್

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆಡಳಿತಾರೂಢ ಕಾಂಗ್ರೆಸ್ ಪಕ್ಷ ಬಾಗಲಕೋಟೆ ವಿಧಾನಸಭೆ ಉಪಚುನಾವಣೆಗೆ ಕೊನೆಯ ಹಂತದಲ್ಲಿ ಅಭ್ಯರ್ಥಿ ಘೋಷಣೆ ಮಾಡುವ ಮೂಲಕ ಚುನಾವಣೆ ಎದುರಿಸಲು ಸಿದ್ಧವಾಗಿದ್ದು ದಿ.ಎಚ್.ವೈ. ಮೇಟಿ ಅವರ ದ್ವಿತೀಯ ಪುತ್ರ ಉಮೇಶ ಮೇಟಿಗೆ ಟಿಕೆಟ್ ನೀಡುವ ಮೂಲಕ ಅನುಕಂಪದ ಅಲೆ ಹಾಗೂ ಸರ್ಕಾರದ ಸಾಧನೆ ಪಣಕ್ಕಿಟ್ಟು ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ.

ಹಾಲಿ ಶಾಸಕರಾಗಿದ್ದ ಎಚ್.ವೈ ಮೇಟಿ ಅವರ ಅಕಾಲಿಕ ನಿಧನದ ನಂತರ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಗೆ ಮುನ್ನವೇ ಕುಟುಂಬದ ನಾಲ್ವರು ಮಕ್ಕಳಲ್ಲಿ ಟಿಕೆಟ್‌ ಗೆ ಪೈಪೋಟಿ ಆರಂಭವಾಗಿದ್ದರಿಂದ ಪಕ್ಷಕ್ಕೆ ಸಾಕಷ್ಟು ಮುಜುಗರ ತಂದಿತ್ತು. ಕುಟುಂಬದಲ್ಲಿನ ಭಿನ್ನ ನಿಲುವುಗಳು ಕೇವಲ ನಿಲುವುಗಳಾಗದೆ ಸಹೋದರರ ಬಾಂಧವ್ಯಕ್ಕೂ ಧಕ್ಕೆ ತಂದು ಮನಸ್ಥಾಪ ಉಂಟು ಮಾಡಿತ್ತು.

ಕುಟುಂಬದಲ್ಲಿ ಭಿನ್ನ ನಿಲುವು:


ಉಪಚುನಾವಣೆಗೆ ಎಚ್.ವೈ.ಮೇಟಿ ಕುಟುಂಬಕ್ಕೆ ಟಿಕೆಟ್ ನೀಡುವುದು ಖಚಿತವಾಗಿದ್ದರೂ ಕುಟುಂಬದಲ್ಲಿಯೇ ಟಿಕೆಟ್‌ ಗೆ ಪೈಪೋಟಿ ಏರ್ಪಟ್ಟು ಗೊಂದಲಕ್ಕೆ ಕಾರಣವಾಗಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೇಟಿ ಅವರ ನಾಲ್ಕು ಮಕ್ಕಳನ್ನು ಕರೆದು ರಾಜೀ ಪಂಚಾಯ್ತಿ ಮಾಡಿದರೂ ಸಹ ಗೊಂದಲ ಮುಂದುವರದೇ ಇದ್ದಿದ್ದರಿಂದ ಕೊನೆಯ ಹಂತದವರೆಗೆ ಟಿಕೆಟ್‌ ಗಾಗಿ ಕಾಯುವ ಅನಿವಾರ್ಯತೆ ಸೃಷ್ಟಿಯಾಯಿತು.

ಸಮೀಕ್ಷೆಗಳ ನೆರವು ಪಡೆದ ಪಕ್ಷ:

ಮೇಲ್ನೋಟಕ್ಕೆ ಮೇಟಿ ಅವರ ಹಿರಿಯ ಪುತ್ರ ಮಲ್ಲಿಕಾರ್ಜುನ ಮೇಟಿ ಅವರಿಗೆ ಆರಂಭಿಕ ಹಂತದಲ್ಲಿ ಟಿಕೆಟ್ ಸಿಗಲಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬಂದರೂ ಮೇಟಿ ಅವರ ಕೊನೆಯ ಪುತ್ರಿ ಮಹಾದೇವಿ ಮೇಟಿ ಅವರು ತೆಗೆದುಕೊಂಡ ನಿರ್ಧಾರ ಕುಟುಂಬದ ಸದಸ್ಯರಲ್ಲಿಯೇ ಭಿನ್ನಮತಕ್ಕೆ ಕಾರಣವಾಯಿತು.

ಮಲ್ಲಿಕಾರ್ಜುನ ಮೇಟಿ ಅವರಿಗೆ ಟಿಕೆಟ್ ನೀಡುವುದಾದರೆ ನಾನು ಬಂಡಾಯವಾಗಿ ಸ್ಪರ್ಧಿಸುವೆ ಎಂದು ಬೆದರಿಕೆ ತಂತ್ರ ಹಾಕಿದರು. ಇದು ಸಹ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾಯಿತು. ಪಕ್ಷ ಒಂದೆಡೆ ಕುಟುಂಬದಲ್ಲಿನ ಬಂಡಾಯ, ಮಲ್ಲಿಕಾರ್ಜುನ ಮೇಟಿ ಅವರ ಜನಪ್ರಿಯತೆ ಹಾಗೂ ಮತದಾರರ ಒಲುವು ಕುರಿತು ಹಾಗೂ ಅವರ ಸಹೋದರ ಉಮೇಶ ಮೇಟಿ ಅವರು ಗ್ರಾಮೀಣ ಭಾಗದಲ್ಲಿ ಹೊಂದಿರುವ ಪ್ರಭಾವ ಕುರಿತು ಕಾಂಗ್ರೆಸ್ ಪಕ್ಷ ಎರಡು ಬಾರಿ ಸಮೀಕ್ಷೆ ನಡೆಸಿ ಅಂತಿಮವಾಗಿ ಉಮೇಶ ಪರವಾಗಿ ಬಂದ ಸಮೀಕ್ಷೆ ಮುಂದಿಟ್ಟುಕೊಂಡು ಪಕ್ಷ ಟಿಕೆಟ್ ನೀಡಿದೆ.

ಕಾಂಗ್ರೆಸ್ ಪಕ್ಷಕ್ಕೆ ಮುಂದಿದೆ ಸವಾಲು:

ಉಪಚುನಾವಣೆಗೆ ಬಿಜೆಪಿ ಈಗಗಾಲೇ ತನ್ನ ಪ್ರಚಾರ ಆರಂಭಿಸಿ ವಾರಗಳೇ ಗತಿಸಿವೆ. ಸಂಘಟಿತ ಕಾರ್ಯಕರ್ತರ ಪಡೆ ಹೊಂದಿರುವ ಬಿಜೆಪಿ ನಗರ ಪ್ರದೇಶದಲ್ಲಿ ಬೆಳಗ್ಗೆಯಿಂದಲೇ ಪ್ರಚಾರ ಬಿರುಸುಗೊಳಿಸಿದೆ. ಆದರೆ ಕಾಂಗ್ರೆಸ್ ಪಕ್ಷ ಟಿಕೆಟ್ ಹಂಚಿಕೆಯಲ್ಲಿನ ವಿಳಂಬವನ್ನು ಸರಿದೂಗಿಸಿಕೊಂಡ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಿ ಪ್ರಚಾರ ತೀವ್ರಗೊಳಿಸುವ ಅನಿರ್ವಾತೆಯಲ್ಲಿದೆ.