ಸಾರಾಂಶ
2003ರಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದಾಗ ಪುರಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಆನಂತರ 16 ವರ್ಷಗಳ ಕಾಲ ಜೆಡಿಎಸ್ ಹಿಡಿತದಲ್ಲಿದ್ದ ಪುರಸಭೆ ಈಗ ಶಾಸಕ ಕೆ.ಎಂ.ಉದಯ್ ಅವರ ಸತತ ಪ್ರಯತ್ನದ ಫಲವಾಗಿ ಮತ್ತೆ ಪಕ್ಷಕ್ಕೆಒಲಿದು ಬಂದಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಪುರಸಭೆಯಲ್ಲಿ 11 ವರ್ಷಗಳ ನಂತರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತಸ ವ್ಯಕ್ತಪಡಿಸಿದರು.ಪಟ್ಟಣದ ಶಿವಪುರದ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪುರಸಭಾ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ ಜೆಡಿಎಸ್ ಸದಸ್ಯರನ್ನು ಅಭಿನಂದಿಸಿದರು.
ಬಳಿಕ ಮಾತನಾಡಿದ ಡಿಸಿಎಂ, 2003ರಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದಾಗ ಪುರಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಆನಂತರ 16 ವರ್ಷಗಳ ಕಾಲ ಜೆಡಿಎಸ್ ಹಿಡಿತದಲ್ಲಿದ್ದ ಪುರಸಭೆ ಈಗ ಶಾಸಕ ಕೆ.ಎಂ.ಉದಯ್ ಅವರ ಸತತ ಪ್ರಯತ್ನದ ಫಲವಾಗಿ ಮತ್ತೆ ಪಕ್ಷಕ್ಕೆಒಲಿದು ಬಂದಿದೆ ಎಂದರು.ಜನಪ್ರತಿನಿಧಿಗಳು ಇನ್ನು ಮುಂದೆ ಜನರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸಬೇಕು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚೆಲುವರಾಜು ಹಾಗೂ ರಾಜೀವ್ ಅವರುಗಳು ಶಾಸಕರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಪಂ, ತಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಈಗಿನಿಂದಲೇ ಕಾರ್ಯೋನ್ಮುಖರಾಗಬೇಕು ಎಂದು ಕಿವಿಮಾತು ಹೇಳಿದರು.
ಈ ವೇಳೆ ಕೆಪಿಸಿಸಿ ಸತ್ಯಾನಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು ಸದಸ್ಯರು ಇದ್ದರು.