ಮತದಾರರ ಸೇರ್ಪಡೆ, ಹೆಸರುಗಳ ಅಳಿಸುವಿಕೆ ಹಾಗೂ ಮರುಸ್ಥಾಪನೆ, ನಮೂನೆ-೬ ಮತ್ತು ಮತದಾರರ ಡಿಜಿಟಲ್ ವ್ಯವಸ್ಥೆಗೆ ಸಂಬಂಧಿಸಿದ ವಿಚಾರಗಳಲ್ಲಿ ಆಕ್ಷೇಪಣೆಗಳನ್ನು ದಾಖಲಿಸಲಾಗಿದೆ. ಕೆಲವು ನಿರ್ಧಾರಗಳನ್ನು ತಮ್ಮ ಗಮನಕ್ಕೆ ತರದೆ ಅಥವಾ ಅನುಮೋದನೆ ಪಡೆಯದೆ ಕೈಗೊಳ್ಳಲಾಗಿದೆ ಎಂದು ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪಿಸಿರುವುದು ವರದಿಯಾಗಿದೆ ಎಂದು ಶರ್ಮ ಹೇಳಿದರು.

ಕನ್ನಡಪ್ರಭವಾರ್ತೆ, ಹಾಸನ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್ ೨೮ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಸ್.ಮಂಜುನಾಥ್ ಶರ್ಮ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಮತದಾರರ ಪಟ್ಟಿಯ ಪರಿಷ್ಕರಣೆ ಸೇರಿ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಇತ್ತೀಚಿನ ಬೆಳವಣಿಗೆಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಆಯೋಗದಲ್ಲಿ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರು ಕಳೆದ ೧೦ತಿಂಗಳಲ್ಲಿ ವಿವಿಧ ನಿರ್ಧಾರಗಳ ಕುರಿತು ೧೪ ಬಾರಿ ಲಿಖಿತ ಆಕ್ಷೇಪಣೆ ದಾಖಲಿಸಿದ್ದಾರೆ ಎಂಬ ವರದಿಗಳು ಬಂದಿವೆ ಎಂದು ತಿಳಿಸಿದರು.

ಮತದಾರರ ಸೇರ್ಪಡೆ, ಹೆಸರುಗಳ ಅಳಿಸುವಿಕೆ ಹಾಗೂ ಮರುಸ್ಥಾಪನೆ, ನಮೂನೆ-೬ ಮತ್ತು ಮತದಾರರ ಡಿಜಿಟಲ್ ವ್ಯವಸ್ಥೆಗೆ ಸಂಬಂಧಿಸಿದ ವಿಚಾರಗಳಲ್ಲಿ ಆಕ್ಷೇಪಣೆಗಳನ್ನು ದಾಖಲಿಸಲಾಗಿದೆ. ಕೆಲವು ನಿರ್ಧಾರಗಳನ್ನು ತಮ್ಮ ಗಮನಕ್ಕೆ ತರದೆ ಅಥವಾ ಅನುಮೋದನೆ ಪಡೆಯದೆ ಕೈಗೊಳ್ಳಲಾಗಿದೆ ಎಂದು ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪಿಸಿರುವುದು ವರದಿಯಾಗಿದೆ ಎಂದು ಶರ್ಮ ಹೇಳಿದರು.

ಈ ಬೆಳವಣಿಗೆಗಳಿಂದ ಚುನಾವಣಾ ಆಯೋಗದ ಸ್ವಾಯತ್ತತೆ, ಪಾರದರ್ಶಕತೆ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಮತದಾರರ ಪಟ್ಟಿಯ ಪರಿಷ್ಕರಣೆಯ ಉದ್ದೇಶ ಅರ್ಹ ಮತದಾರರನ್ನು ಗುರುತಿಸಿ ಪಟ್ಟಿಯಲ್ಲಿ ಉಳಿಸುವುದಾಗಿರಬೇಕು. ಆದರೆ ಎಸ್‌ಐಆರ್ ಪ್ರಕ್ರಿಯೆಯಿಂದ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿಯುವ ಆತಂಕವಿದೆ ಎಂದು ಅವರು ಆರೋಪಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಅತ್ಯಂತ ಮಹತ್ವದ್ದಾಗಿದ್ದು, ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಯಾವುದೇ ಅರ್ಹ ಮತದಾರರ ಹಕ್ಕಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು. ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಗಳೊಂದಿಗೆ ಸೆ.೨೮ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಮಂಜುನಾಥ್ ಶರ್ಮ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಸಲೀಂ ಕೊಲ್ಲಹಳ್ಳಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.