ನಮ್ಮ ನಾಯಕರಾದ ರಾಹುಲ್‌ಗಾಂಧಿ ಅವರು ಬಿಜೆಪಿಯ ವೋಟ್ ಚೋರಿ ಬಗ್ಗೆ ಆಗಾಗ್ಗೆ ಪ್ರಸ್ತಾಪಿಸುತ್ತಾ ಬಂದಿದ್ದರು.

ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಹೋರಾಟ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ

ಎಸ್ಐಆರ್ ಹೆಸರಿನಲ್ಲಿ ಬಿಜೆಪಿ ದಲಿತ, ಆದಿವಾಸಿ, ಮುಸ್ಲಿಂ, ಬಡವರು ಮತ ಹಕ್ಕು ಕಸಿಯುತ್ತಿದೆಕನ್ನಡಪ್ರಭ ವಾರ್ತೆ, ತುಮಕೂರು

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್.ಐ.ಆರ್)ಹೆಸರಿನಲ್ಲಿ ದಲಿತ, ಆದಿವಾಸಿ, ಮುಸ್ಲಿಂ, ಬಡವರು, ಅನಕ್ಷರಸ್ಥರ ಮತದಾನದ ಹಕ್ಕನ್ನು ಕಸಿಯುವ ಕೆಲಸ ಮಾಡುತ್ತಿರುವ ಬಿಜೆಪಿಯ ಈ ಕುತಂತ್ರ ಹಾಗೂ ಚುನಾವಣಾ ಆಯೋಗದ ನಿಷ್ಕ್ರಿಯತೆ ಖಂಡಿಸಿ ಸೆಪ್ಟೆಂಬರ್ 28ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪ್ರಚಾರ ಸಮಿತಿವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಕೇಂದ್ರದಲ್ಲಿ ಹಾಗೂ ವಿವಿಧ ರಾಜ್ಯಗಳಲ್ಲಿ ಅಧಿಕಾರಕ್ಕೆ ತರುವ ಉದ್ದೇಶದಿಂದ ಚುನಾವಣಾ ಆಯೋಗ ಎಸ್ಐಆರ್ ಪ್ರಕ್ರಿಯೆ ಮೂಲಕ ಬಿಜೆಪಿಯೇತರ ಮತದಾರರನ್ನು ಪಟ್ಟಿಯಿಂದ ಅಳಿಸಿ ಹಾಕಿ ಒಂದು ಪಕ್ಷದ ಪರವಾಗಿ ಕೆಲಸ ಮಾಡಿರುವುದು ಬಬಲೇಶ್ವರ, ಬೆಳಗಾವಿ, ಧಾರವಾಡ ದಕ್ಷಿಣದಲ್ಲಿ ಹಲವು ದಾಖಲೆಗಳ ಮೂಲಕ ಬಹಿರಂಗಗೊಂಡಿದೆ. ಜನರ ನಂಬಿಕೆ ಕಳೆದುಕೊಂಡಿರುವ ಚುನಾವಣಾ ಆಯೋಗದ ವಿರುದ್ಧ ಹಾಗೂ ರಾಜ್ಯದಲ್ಲಿ ಎಸ್.ಐ.ಆರ್. ಪ್ರಕ್ರಿಯೆಯನ್ನು ಸಂವಿಧಾನ ಬದ್ಧವಾಗಿ ನಡೆಸುವಂತೆ ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಮಾತನಾಡಿ, ನಮ್ಮ ನಾಯಕರಾದ ರಾಹುಲ್‌ಗಾಂಧಿ ಅವರು ಬಿಜೆಪಿಯ ವೋಟ್ ಚೋರಿ ಬಗ್ಗೆ ಆಗಾಗ್ಗೆ ಪ್ರಸ್ತಾಪಿಸುತ್ತಾ ಬಂದಿದ್ದರು. ಇದಕ್ಕೆ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಫಾರಂ ನಂ 7 ಸಲ್ಲಿಕೆ ಸ್ಪಷ್ಟ ಸಾಕ್ಷವಾಗಿದೆ ಎಂದರು.

ಬಿಎಲ್‌ಒ ಅಥವಾ ಬಿಎಲ್‌ಎ 2 ಅಲ್ಲದವರು ತಮ್ಮ ಹೆಸರು ಮುದ್ರಿತ ಫಾರಂ ನಂಬರ್ 7ರಲ್ಲಿ 2500ಕ್ಕೂ ಹೆಚ್ಚು ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲು ಅರ್ಜಿ ಸಲ್ಲಿಸಿರುವುದು, ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದಕ್ಕೆ ಜನರ ಮುಂದಿರುವ ದಾಖಲೆಯಾಗಿದೆ. ಕೂಡಲೇ ಶಾಸಕರಾದ ಅಭಯ್ ಪಾಟೀಲ್ ವಿರುದ್ಧ ಚುನಾವಣಾ ಆಯೋಗ ಕಾನೂನು ಕ್ರಮ ಜರುಗಿಸಬೇಕು. ಬಡವರು, ದಲಿತರು, ಮುಸ್ಲಿಂ ಮತಗಳನ್ನು ಇಲ್ಲದಂತೆ ಮಾಡಿ, ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿದೆ. ಇದರ ವಿರುದ್ದ ಉಗ್ರ ಹೋರಾಟ ಅನಿವಾರ್ಯ ಎಂದು ಹೇಳಿದರು.

ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿಯೂ ಸುಮಾರು 74 ಸಾವಿರ ಮತದಾರರನ್ನು ತೆಗೆಯಲಾಗಿದೆ. ಅಲ್ಲದೆ ಮತದಾರರ ಪಟ್ಟಿಯಲ್ಲಿರುವ 39 ಸಾವಿರ ಮತದಾರರಿಗೆ ನೋಟಿಸ್ ನೀಡಿದ್ದಾರೆ. ಬೆಳಗಾವಿ ಅಭಯಪಾಟೀಲ್ ಪ್ರಕರಣ ಗಮನಿಸಿದರೆ ನಮ್ಮ ಕ್ಷೇತ್ರದಲ್ಲಿಯೂ ಆಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ದಾಖಲೆಗಳ ಸಂಗ್ರಹ ನಡೆಯುತ್ತಿದೆ. ಎಸ್.ಐ.ಆರ್.ಪ್ರಕ್ರಿಯೆಯನ್ನು ಕೇಂದ್ರೀಕರಿಸಿ ಒಂದು ಖಾಸಗಿ ಸಂಸ್ಥೆಗೆ ವಹಿಸಿರುವ ಸಾಧ್ಯತೆ ಕಂಡು ಬರುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಎಸ್.ಐ.ಟಿ ರಚಿಸಬೇಕು. ಎಸ್.ಐ.ಆರ್. ಬಡವರು-ಬಲ್ಲಿದರ ನಡುವೆ ಇರುವ ಅಂತರವನ್ನು ಮತ್ತಷ್ಟು ಹೆಚ್ಚಿಸಲಿದೆ. ಬಿಜೆಪಿ ಮತ್ತು ಚುನಾವಣಾ ಆಯೋಗದ ಈ ನಡೆಯ ವಿರುದ್ಧ ಸೆಪ್ಟೆಂಬರ್ 28ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡಸಲಾಗುವುದು ಎಂದು ಡಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ತಿಳಿಸಿದರು.

ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಯೋಜಕರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ವಾಸುದೇವಮೂರ್ತಿ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ‍್ಯದರ್ಶಿ ಆರ್.ರಾಮಕೃಷ್ಣಪ್ಪ, ವಿವಿಧ ಮಂಚೂಣಿ ಘಟಕಗಳ ಮುಖಂಡರಾದ ಸೈಯದ್ ದಾದಾಪೀರ್, ಗುರುಪ್ರಸಾದ್, ಅನಿಲ್‌ಕುಮಾರ್, ಭೈಲಸ್ವಾಮಿ, ಸುರೇಶ್‌ರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.