ಕಾಂಗ್ರೆಸ್ನಿಂದ ದಲಿತರ ಇಪ್ಪತ್ತೈದು ಸಾವಿರ ಕೋಟಿ ಗ್ಯಾರಂಟಿಗೆ ಬಳಕೆ: ವೆಂಕಟೇಶ್ ದೊಡ್ಡೇರಿ

| Published : Apr 25 2024, 01:09 AM IST / Updated: Apr 25 2024, 01:10 AM IST

ಕಾಂಗ್ರೆಸ್ನಿಂದ ದಲಿತರ ಇಪ್ಪತ್ತೈದು ಸಾವಿರ ಕೋಟಿ ಗ್ಯಾರಂಟಿಗೆ ಬಳಕೆ: ವೆಂಕಟೇಶ್ ದೊಡ್ಡೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಪಕ್ಷ ಮಾದಿಗ ಜನಾಂಗವನ್ನು ಕೇವಲ ಮತಕ್ಕಾಗಿ ಉಪಯೋಗಿಸಿಕೊಳ್ಳುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವಲ್ಲಿ ಮಾದಿಗ ಜನಾಂಗಕ್ಕೆ ಮೋಸ ಮಾಡಿ ಕೇವಲ ಛಲವಾದಿ ಜನಾಂಗಕ್ಕೆ ಟಿಕೆಟ್ ನಿಡಿದ್ದಾರೆ. ಮಾದಿಗ ಜನಾಂಗ ಒಳಮೀಸಲಾತಿ ಜಾರಿಗಾಗಿ ಕಳೆದ 30 ವರ್ಷಗಳಿಂದಲೂ ಹೋರಾಡಿಕೊಂಡು ಬಂದಿದೆ. ಆದರೆ ಕಾಂಗ್ರೆಸ್ ಸರ್ಕಾರ ಜಾರಿ ಮಾಡಲಿಲ್ಲ.

ಕನ್ನಡಪ್ರಭ ವಾರ್ತೆ ಶಿರಾ

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಾಗಿನಿಂದ ದಲಿತರ ಅಭಿವೃದ್ಧಿಗೆ ಎಸ್.ಸಿ.ಪಿ. ಹಾಗೂ ಟಿ.ಎಸ್.ಪಿ ಯೋಜನೆಯಡಿ ಕಳೆದ ವರ್ಷ ಮೀಸಲಿಟ್ಟಿದ್ದ ಸುಮಾರು 10140 ಕೋಟಿ ರು. ಹಣ ಹಾಗೂ ಈ ವರ್ಷ ಮೀಸಲಿಟ್ಟಿದ್ದ ಸುಮಾರು 15 ಸಾವಿರ ಕೋಟಿ ರು. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ದಲಿತರಿಗೆ ಮೋಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ವೆಂಕಟೇಶ್ ದೊಡ್ಡೇರಿ ಆರೋಪಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ದಲಿತರನ್ನು ಬಡವರನ್ನಾಗಿ ಮಾಡುತ್ತಿದೆ. ದಲಿತರನ್ನು ಕೇವಲ ಮತಬ್ಯಾಂಕ್ ಆಗಿ ಮಾಡಿಕೊಂಡಿದೆ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ವಿರೋಧಿ, ಅಂಬೇಡ್ಕರ್ ಅವರನ್ನು ಎರಡು ಭಾರಿ ಸೋಲಿಸಿದ್ದರು. ಅವರ ಶವ ಸಂಸ್ಕಾರಕ್ಕೂ ಸಹ ಜಾಗ ನೀಡಲಿಲ್ಲ. ಆದರೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿಗಳಾದ ನಂತರ ಅಂಬೇಡ್ಕರ್ ಅವರು ಹುಟ್ಟಿದ ಊರು, ಓದಿದ ಶಾಲೆಗಳನ್ನು ಅಭಿವೃದ್ಧಿಗೊಳಿಸಿ ಸ್ಮಾರಕಗಳನ್ನಾಗಿ ಮಾಡಿದ್ದಾರೆ. ಕರ್ನಾಟಕಕ್ಕೆ ಅಂಬೇಡ್ಕರ್ ಅವರು ಭೇಟಿ ನೀಡಿದ್ದ 11 ಸ್ಥಳಗಳ ಅಭಿವೃದ್ಧಿಗೆ ಮೋದಿಯವರು ಸುಮಾರು 25 ಕೋಟಿ ಅನುದಾನ ನೀಡಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತದೆ ಎಂದು ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಅಂಬೇಡ್ಕರ್ ಅವರೇ ಹುಟ್ಟಿ ಬಂದರೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದು ಮೋದಿಯವರೇ ಹೇಳಿದ್ದಾರೆ. ಆದ್ದರಿಂದ ಮತದಾರರು ಕಾಂಗ್ರೆಸ್ ನ ಸುಳ್ಳು ಮಾತುಗಳನ್ನು ನಂಬಬೇಡಿ ಎಂದರು.

ಮಾದಿಗ ದಂಡೋರ ರಾಜ್ಯಾಧ್ಯಕ್ಷ ನರಸಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ಮಾದಿಗ ಜನಾಂಗವನ್ನು ಕೇವಲ ಮತಕ್ಕಾಗಿ ಉಪಯೋಗಿಸಿಕೊಳ್ಳುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವಲ್ಲಿ ಮಾದಿಗ ಜನಾಂಗಕ್ಕೆ ಮೋಸ ಮಾಡಿ ಕೇವಲ ಛಲವಾದಿ ಜನಾಂಗಕ್ಕೆ ಟಿಕೆಟ್ ನಿಡಿದ್ದಾರೆ. ಮಾದಿಗ ಜನಾಂಗ ಒಳಮೀಸಲಾತಿ ಜಾರಿಗಾಗಿ ಕಳೆದ 30 ವರ್ಷಗಳಿಂದಲೂ ಹೋರಾಡಿಕೊಂಡು ಬಂದಿದೆ. ಆದರೆ ಕಾಂಗ್ರೆಸ್ ಸರ್ಕಾರ ಜಾರಿ ಮಾಡಲಿಲ್ಲ. ಒಳಮೀಸಲಾತಿಯನ್ನು ಕಳೆದ ಬಾರಿಯ ಬಿಜೆಪಿ ಸರ್ಕಾರ ಅನುಮೋದನೆ ಮಾಡಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ಈಗ ಕೇಂದ್ರ ಸರ್ಕಾರದ ಹಂತದಲ್ಲಿ ಒಳಮೀಸಲಾತಿ ಇದೆ. ಒಳಮೀಸಲಾತಿ ಜಾರಿ ಮೋದಿ ಸರ್ಕಾರದಿಂದ ಮಾತ್ರ ಸಾಧ್ಯ. ಆದ್ದರಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿ ಗೋವಿಂದ ಕಾರಜೋಳರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಎಂದರು.

ರಾಜ್ಯ ಮಾದಿಗ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಆರ್.ರಂಗನಾಥ್, ನರಸಪ್ಪ, ನಗರ ಎಸ್.ಸಿ ಮೋರ್ಚಾ ಅಧ್ಯಕ್ಷ ಹನುಮಂತರಾಜು, ಬಗರ್ ಹುಕುಂ ಸಮಿತಿ ಮಾಜಿ ಸದಸ್ಯ ಕೋಟೆ ರವಿ, ಕಲ್ಲುಕೋಟೆ ಲಿಂಗರಾಜು, ಗುರುದಾಸ್, ಸಚಿನ್ ಲಕ್ಷ್ಮೀಕಾಂತ್, ಶಿವಣ್ಣ, ಕಳುವರಹಳ್ಳಿ ತಿಪ್ಪೇಸ್ವಾಮಿ, ಕೃಷ್ಣಮೂರ್ತಿ ಸೇರಿ ಹಲವರು ಹಾಜರಿದ್ದರು.