ಆರ್‌ಎಸ್‌ಎಸ್‌ VS ಕಾಂಗ್ರೆಸ್‌

| Published : Oct 19 2025, 01:00 AM IST

ಸಾರಾಂಶ

‘ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ನಿರ್ಬಂಧಿಸಿ ಸರ್ಕಾರ ಆದೇಶಿಸಬೇಕು’ ಎಂದು ಅರ್ಜಿ ಸಲ್ಲಿಸಿ ಅದರಲ್ಲಿ ಪರೋಕ್ಷವಾಗಿ ಯಶ ಕಂಡಿರುವ ಸಚಿವ ಪ್ರಿಯಾಂಕ್‌ ಖರ್ಗೆ ಅವರ ತವರು ವಿಧಾನಸಭಾ ಕ್ಷೇತ್ರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌, ಭಾನುವಾರ ಬೃಹತ್‌ ಪಥಸಂಚಲನ ನಡೆಸಲು ಮುಂದಾಗುವ ಮೂಲಕ, ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ.

ಪ್ರಿಯಾಂಕ್‌ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಪಥಸಂಚಲನ ಶಕ್ತಿ ಪ್ರದರ್ಶನ

----

- ಚಿತ್ತಾಪುರದಲ್ಲಿ ಇಂದು ಪಥಸಂಚಲನಕ್ಕೆ ಸಿದ್ಧತೆ । ಆದ್ರೆ ಸಿಗದ ಪುರಸಭೆ ಅನುಮತಿ

- ಅನುಮತಿ ಇಲ್ಲದ ಕಾರಣ ಪುರಸಭೆ ಸಿಬ್ಬಂದಿಯಿಂದ ಬ್ಯಾನರ್‌, ಬಂಟಿಂಗ್ಸ್‌ ತೆರವು

- ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಉದ್ವಿಗ್ನತೆ ನಡುವೆ ಪಥಸಂಚಲನ ಸಂಪನ್ನ

----

ಅನುಮತಿ ಏಕೆ ಇಲ್ಲ?

ಬ್ಯಾನರ್ ಏಕೆ ತೆರವು?

- ಪಥ ಸಂಚಲನದ ವೇಳೆ ಲಾಠಿ, ಆಯುಧಗಳ ಬಳಕೆ ಮಾಡುವ ಬಗ್ಗೆ ಉಲ್ಲೇಖವಿಲ್ಲ ಏಕೆ?

- ಕಾರ್ಯಕ್ರಮದಲ್ಲಿ ಎಷ್ಟು ಜನ ಭಾಗವಹಿಸುತ್ತಾರೆ ಎಂಬ ಮಾಹಿತಿ ಇಲ್ಲ. ಈ ವಿವರ ನೀಡಿ

- ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ಪ್ರಮಾಣಪತ್ರದ ಪ್ರತಿಯನ್ನು ಸಲ್ಲಿಸಿಲ್ಲ

- ಭಾಷಣಕಾರರ ಬಗ್ಗೆ ವಿವರ ಸಲ್ಲಿಸಿಲ್ಲ, ಈ ಪಥಸಂಚಲನದ ಮೂಲ ಉದ್ದೇಶ ಬಗ್ಗೆ ತಿಳಿಸಿಲ್ಲ

- ಕೇಸರಿ ಧ್ವಜ, ಭಗವಾ ಧ್ವಜ, ಬ್ಯಾನರ್‌, ಬಂಟಿಂಗ್‌ ಅಳವಡಿಸಲು ಸೂಕ್ತ ಅನುಮತಿ ಪಡೆದಿಲ್ಲ

---

ಅನುಮತಿ ಸಿಕ್ಕರೆ

ನಮ್ಮ ಅಡ್ಡಿ ಇಲ್ಲ

ಹಿಂದಿನ ಸರ್ಕಾರದ ಅವಧಿಯಲ್ಲಿ ಅನುಮತಿ ಪಡೆಯದೆ ನಮ್ಮವರು ಹಾಕಿದ್ದ ಪೋಸ್ಟರ್‌ ತೆರವುಗೊಳಿಸಿದ್ದರು. ಅನುಮತಿ ಸಿಕ್ಕರೆ ನಮ್ಮ ಅಡ್ಡಿ ಇಲ್ಲ. ಯಾವುದೇ ಅನಾಹುತ ಆದರೂ ಇಂತಹ ವ್ಯಕ್ತಿ ಹೊಣೆ ಹೊರುತ್ತಾರೆ ಎಂದು ಅನುಮತಿ ಅರ್ಜಿಯಲ್ಲಿ ಆರೆಸ್ಸೆಸ್‌ ನಮೂದಿಸಲಿ. ಈ ನಿಯಮ ಪಾಲನೆ ಮಾಡಲು ಏನು ಸಮಸ್ಯೆ?

- ಪ್ರಿಯಾಂಕ್ ಖರ್ಗೆ, ಸಚಿವ/ ಚಿತ್ತಾಪುರ ಶಾಸಕ

---

ಕನ್ನಡಪ್ರಭ ವಾರ್ತೆ ಕಲಬುರಗಿ

‘ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ನಿರ್ಬಂಧಿಸಿ ಸರ್ಕಾರ ಆದೇಶಿಸಬೇಕು’ ಎಂದು ಅರ್ಜಿ ಸಲ್ಲಿಸಿ ಅದರಲ್ಲಿ ಪರೋಕ್ಷವಾಗಿ ಯಶ ಕಂಡಿರುವ ಸಚಿವ ಪ್ರಿಯಾಂಕ್‌ ಖರ್ಗೆ ಅವರ ತವರು ವಿಧಾನಸಭಾ ಕ್ಷೇತ್ರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌, ಭಾನುವಾರ ಬೃಹತ್‌ ಪಥಸಂಚಲನ ನಡೆಸಲು ಮುಂದಾಗುವ ಮೂಲಕ, ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಆದರೆ, ಇದಕ್ಕೆ ಸೂಕ್ತ ಅನುಮತಿ ಪಡೆದಿಲ್ಲ ಎಂಬ ಕಾರಣ ನೀಡಿ, ಪಥ ಸಂಚಲನಕ್ಕಾಗಿ ನಗರದ ಮುಖ್ಯ ರಸ್ತೆಗಳಲ್ಲಿ ಅಳ‍ಡಿಸಲಾಗಿದ್ದ ಕೇಸರಿ ಧ್ವಜ, ಭಗವಾ ಧ್ವಜ, ಬ್ಯಾನರ್‌, ಬಂಟಿಂಗ್‌ಗಳನ್ನೆಲ್ಲ ಅಲ್ಲಿನ ಪುರಸಭೆಯ ಸಿಬ್ಬಂದಿ ರಾತ್ರೋರಾತ್ರಿ ತೆರವು ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಭಾನುವಾರ ಪಥಸಂಚಲನ ನಡೆಯುವುದೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.

ಈ ಮಧ್ಯೆ, ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಶನಿವಾರ ನಡೆದ ಆರ್‌ಎಸ್‌ಎಸ್‌ ಪಥ ಸಂಚಲನದ ವೇಳೆ ಮಸೀದಿಯೊಂದರ ಮುಂದೆ ‘ಅಲ್ಲಾ ಹು ಅಕ್ಬರ್’ ಘೋಷಣೆ ಮೊಳಗಿದ್ದು, ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರ ಮಧ್ಯಪ್ರವೇಶದಿಂದ ಪಥ ಸಂಚಲನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ತುಮಕೂರಿನಲ್ಲೂ ಮೊದಲು ಅನುಮತಿ ಸಿಕ್ಕಿರಲಿಲ್ಲವಾದರೂ, ನಂತರ ಅನುಮತಿ ದೊರೆತು ಪಥಸಂಚಲನ ಸಂಪನ್ನಗೊಂಡಿದೆ.

ಚಿತ್ತಾಪುರದಲ್ಲಿ ಪಥ ಸಂಚಲನ ನಡೆಯುತ್ತಾ?

ಆರ್‌ಎಸ್‌ಎಸ್‌ ಶತಾಬ್ದಿ ಸಂಭ್ರಮದ ಹಿನ್ನೆಲೆಯಲ್ಲಿ ಭಾನುವಾರ ಆರ್‌ಎಸ್ಎಸ್‌ ಪಥ ಸಂಚಲನ ಕಾರ್ಯಕ್ರಮ ಆಯೋಜಿಸಲಾಗಿದೆ. ನೂರಾರು ಗಣವೇಷಧಾರಿಗಳಿಂದ ಭವ್ಯ ಪಥ ಸಂಚಲನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಕೇಸರಿ ಧ್ವಜ, ಭಗವಾ ಧ್ವಜ, ಬ್ಯಾನರ್‌, ಬಂಟಿಂಗ್‌ಗಳನ್ನು ಅಳವಡಿಸಲಾಗಿತ್ತು. ಆದರೆ, ‘ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ಸ್‌, ಬಂಟಿಂಗ್ಸ್‌ಗಳನ್ನು ಅಳವಡಿಸಲು ಸೂಕ್ತ ಅನುಮತಿ ಪಡೆದಿಲ್ಲ’ ಎಂಬ ಕಾರಣ ನೀಡಿ, ಅಳವಡಿಸಿದ್ದ ಬ್ಯಾನರ್‌ಗಳನ್ನು ಅಲ್ಲಿನ ಪುರಸಭೆಯ ಸಿಬ್ಬಂದಿ ರಾತ್ರೋರಾತ್ರಿ ತೆರವುಗೊಳಿಸಿದ್ದಾರೆ. ಇದು ವಿವಾದ ಹುಟ್ಟು ಹಾಕಿದೆ.

ಈ ಮಧ್ಯೆ, ಬಂಟಿಂಗ್ಸ್‌, ಬ್ಯಾನರ್ಸ್‌ ತೆರವು ಖಂಡಿಸಿ ಚಿತ್ತಾಪುರ ಪುರಸಭೆಯ ಮುಖ್ಯಾಧಿಕಾರಿ ಕಚೇರಿ ಎದುರು ಹಿಂದು ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ಪುರಸಭೆಯ ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಮುಖ್ಯಾಧಿಕಾರಿ, ಸಿಬ್ಬಂದಿಗಳ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ಹೊರಹಾಕಿದರು.

ಇದರ ನಡುವೆ, ಕಾರ್ಯಕ್ರಮಕ್ಕೆ ಅನುಮತಿ ನೀಡಲು ಅಧಿಕಾರಿಗಳು ಮತ್ತಷ್ಟು ವಿವರಣೆ ಕೋರಿದ್ದಾರೆ. ‘ಪಥ ಸಂಚಲನದ ವೇಳೆ ಲಾಠಿ, ಆಯುಧಗಳ ಬಳಕೆ ಮಾಡುವ ಬಗ್ಗೆ ಉಲ್ಲೇಖವಿಲ್ಲ. ಕಾರ್ಯಕ್ರಮದಲ್ಲಿ ಎಷ್ಟು ಜನ ಭಾಗವಹಿಸುತ್ತಾರೆ ಎಂಬ ಮಾಹಿತಿ ಇಲ್ಲ. ಸಂಘದ ನೋಂದಣಿ ಪ್ರಮಾಣಪತ್ರದ ಪ್ರತಿ ಸಲ್ಲಿಸಿಲ್ಲ’ ಎಂಬ 11 ಅಂಶಗಳ ಬಗ್ಗೆ ತಹಸೀಲ್ದಾರ್‌ ವಿವರಣೆ ಕೋರಿದ್ದಾರೆ. ಹೀಗಾಗಿ ಶನಿವಾರ ರಾತ್ರಿಯವರೆಗೂ ಕಾರ್ಯಕ್ರಮಕ್ಕೆ ಇನ್ನೂ ಅನುಮತಿ ದೊರಕಿಲ್ಲ.

ಹೀಗಾಗಿ ಭಾನುವಾರ ಪಥಸಂಚಲನ ನಡೆಯುವುದೇ ಇಲ್ಲವೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.6 ಸಾವಿರ ರು.ಜಾಹೀರಾತು ಶುಲ್ಕ ಕಟ್ಟಿದ್ದೇವೆ:

ಧ್ವಜ, ಬ್ಯಾನರ್ ತೆರವು ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದು ಕಾರ್ಯಕರ್ತರು, ‘ಪುರಸಭೆಗೆ ಈಗಾಗಲೇ 6 ಸಾವಿರ ರು. ಜಾಹೀರಾತು ಶುಲ್ಕ ಪಾವತಿಸಿದ್ದೇವೆ. ಆದರೂ, ಮಧ್ಯರಾತ್ರಿ ಬ್ಯಾನರ್ ತೆರವುಗೊಳಿಸಿದ್ದಾರೆ. ಹೀಗಾಗಿ, ಮುಖ್ಯಾಧಿಕಾರಿಯನ್ನು ಅಮಾನತುಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಅಲ್ಲದೆ, ಮತ್ತೆ ಬ್ಯಾನರ್, ಬಟ್ಟಿಂಗ್ಸ್ ಅಳವಡಿಸಲು ಅನುಮತಿ ಕೋರಿ ಪುರಸಭೆಗೆ ಶನಿವಾರ ಮನವಿ ಮಾಡಿದ್ದಾರೆ. ಅ.18, 19 ಬಾಗೂ 20ನೇ ತಾರೀಖಿನವರೆಗೆ ಧ್ವಜ, ಪರಾರಿ, ಬ್ಯಾನರ್ ಕಟ್ಟಲು ಅನುಮತಿ ನೀಡುವಂತೆ ಕೋರಿದ್ದಾರೆ.

--

ನಾವೂ ಲಾಠಿ ಹಿಡೀತೇವೆ: ಭೀಮ್‌ ಆರ್ಮಿ

ಕಲಬುರಗಿ: ‘ದಲಿತ ಸಂಘಟನೆಗಳಾದ ಭೀಮ್‌ ಆರ್ಮಿ, ದಲಿತ ಪ್ಯಾಂಥರ್‌ ಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ಅನುಮತಿ ಕೊಡಬಾರದು. ಒಂದು ವೇಳೆ, ಅವರಿಗೆ ಅನುಮತಿ ನೀಡುವುದಾದರೆ, ನಾವೂ ಲಾಠಿ ಹಿಡಿದು ಪಥ ಸಂಚಲನ ಮಾಡುತ್ತೇವೆ, ನಮಗೂ ಅನುಮತಿ ಕೊಡಿ’ ಎಂದು ಮನವಿ ಮಾಡಿದ್ದಾರೆ.

---

ಆರೆಸ್ಸೆಸ್‌ ವಿರುದ್ಧ ಈಗ ಸರ್ಕಾರದ ಭೂ ಅಸ್ತ್ರ?

- ಸಂಘ ಪಡೆದ ಜಮೀನು, ಬಳಕೆ ಆಡಿಟ್‌ಗೆ ಕೂಗು- ಪ್ರಿಯಾಂಕ್‌ ಖರ್ಗೆಗೆ ಕೆಲವು ಶಾಸಕರಿಂದ ಬೇಡಿಕೆ----

ಆರೆಸ್ಸೆಸ್‌ ರೀತಿಯ ಚಟುವಟಿಕೆಗೆ ನಿರ್ಬಂಧ ಜಾರಿಗೆ- ವಿವರ ಪುಟ 7

----- ಈ ಹಿಂದೆ ಖರ್ಗೆ ಪುತ್ರ ರಾಹುಲ್ ಖರ್ಗೆಗೆ ಸರ್ಕಾರಿ ಭೂ ಹಂಚಿಕೆ ವಿವಾದಕ್ಕೀಡಾಗಿತ್ತು

- ಆಗಲೇ ಆರೆಸ್ಸೆಸ್‌, ಅಂಗಸಂಸ್ಥೆಗಳು ಪಡೆದಿದ್ದ ಜಮೀನನ್ನೂ ಸರ್ಕಾರ ಪಟ್ಟಿ ಮಾಡಿತ್ತು- ನಿಯಮಬಾಹಿರ ಮಂಜೂರಾತಿ ಹಿಂಪಡೆಯಲು ಚಿಂತನೆ ನಡೆದಿತ್ತಾದ್ರೂ ಕೈಗೂಡಿರಲಿಲ್ಲ

- ಈಗ ಆರೆಸ್ಸೆಸ್‌ ವಿರುದ್ಧ ಸಂಘರ್ಷಕ್ಕೆ ಪುನಃ ತಾರಕಕ್ಕೆ. ಜಮೀನು ಆಡಿಟ್‌ಗೆ ಚಿಂತನೆ--

ಕನ್ನಡಪ್ರಭ ವಾರ್ತೆ, ಬೆಂಗಳೂರುರಾಜ್ಯದಲ್ಲಿ ಆರ್‌ಎಸ್‌ಎಸ್‌ ಹಾಗೂ ಸರ್ಕಾರದ ನಡುವೆ ಸೈದ್ಧಾಂತಿಕ ಹೋರಾಟ ನಡೆಯುತ್ತಿದೆ. ಇದೇ ವೇಳೆ ಆರ್‌ಎಸ್‌ಎಸ್‌ಗೆ ಸರ್ಕಾರದಿಂದ ಮಂಜೂರಾಗಿರುವ ಜಮೀನು ಹಾಗೂ ಅದರ ಬಳಕೆ ಬಗ್ಗೆ ಆಡಿಟ್‌ ನಡೆಸಲು ಸರ್ಕಾರದ ವಲಯದಲ್ಲಿ ಚರ್ಚೆ ಶುರುವಾಗಿದೆ.

ಈ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಎಂ. ಖರ್ಗೆ ನೇತೃತ್ವದ ಸಿದ್ಧಾರ್ಥ ವಿಹಾರ್ ಟ್ರಸ್ಟ್‌ಗೆ ಬೆಂಗಳೂರಿನ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‌ನಲ್ಲಿ 5 ಎಕರೆ ಸಿಎ ಭೂಮಿ ಮಂಜೂರು ಮಾಡಲಾಗಿತ್ತು. ಇದನ್ನು ಬಿಜೆಪಿ ದೊಡ್ಡ ವಿವಾದ ಮಾಡಿದ್ದರಿಂದ ಜಮೀನನ್ನು ಟ್ರಸ್ಟ್‌ ವಾಪಸು ನೀಡಿತ್ತು.ಈ ವೇಳೆ ಆರ್‌ಎಸ್‌ಎಸ್‌ ಹಾಗೂ ಅದರ ಅಂಗಸಂಸ್ಥೆಗಳು, ಬಿಜೆಪಿ ನಾಯಕರು ಪಡೆದಿರುವ ಜಮೀನುಗಳನ್ನು ಪಟ್ಟಿ ಮಾಡಿ ನಿಯಮಬಾಹಿರ ಮಂಜೂರಾತಿಗಳನ್ನು ಹಿಂಪಡೆಯಲು ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿತ್ತು. ಬಳಿಕ ಅದನ್ನು ಮುಂದಕ್ಕೆ ಕೊಂಡೊಯ್ದಿರಲಿಲ್ಲ.

ಈಗ ಆರ್‌ಎಸ್‌ಎಸ್‌ ಸೇರಿದಂತೆ ಸಂಘ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ನಡೆಸಲು ಪೂರ್ವಾನುಮತಿ ಕಡ್ಡಾಯ ಎಂದು ಸರ್ಕಾರ ಆದೇಶ ಮಾಡಿದೆ. ಇದರ ವಿರುದ್ಧ ಆರ್‌ಎಸ್‌ಎಸ್‌ ಹೋರಾಟ ರೂಪಿಸಲು ಮುಂದಾಗಿದೆ. ಅದಕ್ಕೆ ಪಾಠ ಕಲಿಸಬೇಕೆಂದರೆ ಆರ್‌ಎಸ್‌ಎಸ್‌ನ ಭೂಮಿಯ ಆಡಿಟ್‌ ಮಾಡಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಕೆಲವು ಶಾಸಕರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.ಹೀಗಾಗಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಹಂತದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಸೋಮವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹಾಸನದಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಈ ವೇಳೆ ಕಂದಾಯ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸಬಹುದು ಎನ್ನಲಾಗಿದೆ.

ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಈವರೆಗೂ ಅಂತಹ ಪ್ರಸ್ತಾವನೆ ನಮ್ಮ ಮುಂದೆ ಬಂದಿಲ್ಲ. ಒಂದೊಮ್ಮೆ ಬಂದರೆ ಪರಿಶೀಲಿಸಲಾಗುವುದು ಎಂದು ಹೇಳಿದರು.ಮಂಜೂರಾಗಿರುವ ಜಮೀನುಗಳು ಯಾವುವು?

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಅಂಗಸಂಸ್ಥೆಗಳಿಗೆ ನೂರಾರು ಎಕರೆ ಭೂಮಿ ಮಂಜೂರಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪದ ಹರಳೂರಿನಲ್ಲಿ ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪಿಸಲು ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರಕ್ಕೆ (ಸೆಸ್) 116 ಎಕರೆ ಹಂಚಿಕೆ ಮಾಡಲಾಗಿದೆ.ಬೆಂಗಳೂರಿನ ಬೈಯಪ್ಪನಹಳ್ಳಿ ಬಳಿ ಸರ್ಕಾರೇತರ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್‌ಗೆ ಶೈಕ್ಷಣಿಕ ಉದ್ದೇಶಗಳಿಗಾಗಿ 8.32 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿಯಲ್ಲಿ ಇದೇ ಸಂಸ್ಥೆಗೆ 5 ಎಕರೆ ಮಂಜೂರಾಗಿದೆ. ಕಲಬುರಗಿ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಆನೇಕಲ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿಗೆ ಸುಮಾರು 25-30 ಎಕರೆ ಭೂಮಿ ಮಂಜೂರಾಗಿದೆ.ದಕ್ಷಿಣ ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ಜನ ಸೇವಾ ಟ್ರಸ್ಟ್ ಹೆಸರಿನ ಸಂಸ್ಥೆಗೆ 40.07 ಎಕರೆ ಜಮೀನು ಮಂಜೂರಾಗಿದೆ. ತಾವರೆಕೆರೆಯಲ್ಲಿ ಜನಸೇವಾ ಟ್ರಸ್ಟ್‌ಗೆ ಮಂಜೂರಾತಿಯಾಗಿದೆ ಎಂದು ಹೇಳಲಾಗಿರುವ 25 ಎಕರೆ ಜಮೀನು ಬಗ್ಗೆ ಪರಿಶೀಲನೆ ನಡೆಯಲಿದೆ ಎನ್ನಲಾಗಿದೆ.

ಅದರೊಂದಿಗೆ ಶಿವಮೊಗ್ಗದಲ್ಲಿ ನೀರಾವರಿ ಇಲಾಖೆಗೆ ಸೇರಿದ ಎರಡು ಎಕರೆ ಜಾಗವನ್ನು ಅಧ್ಯಯನ, ಸಂಶೋಧನೆ ಮತ್ತು ತರಬೇತಿ ಕೇಂದ್ರದ ಹೆಸರಿನಲ್ಲಿ ಸಂಸ್ಥೆಯೊಂದಕ್ಕೆ ಮಂಜೂರು ಮಾಡಲಾಗಿದೆ. ಗೋಶಾಲೆಗಳ ಹೆಸರಿನಲ್ಲಿ ನೂರಾರು ಎಕರೆ ನೀಡಲಾಗಿದೆ. ಹೀಗಾಗಿ ಇದೆಲ್ಲವನ್ನೂ ಆಡಿಟ್‌ ಮಾಡಬೇಕು ಎಂಬ ಕೂಗು ಸರ್ಕಾರ ಹಾಗೂ ಕಾಂಗ್ರೆಸ್‌ ವಲಯದಲ್ಲಿ ಎದ್ದಿದೆ.