ಸಾರಾಂಶ
ದಾವಣಗೆರೆ: ಚುನಾವಣಾ ಪೂರ್ವದ ಸಮೀಕ್ಷೆಗಳಿಗೆ ಬೆಲೆ ಕೊಡದೇ, ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣದ ಮತದಾರರು ಕಾಂಗ್ರೆಸ್ ಗೆ ಬೆಂಬಲಿಸಿರುವುದು ಜನಪರ ಸರ್ಕಾರಕ್ಕೆ ನೀಡಿರುವ ಮನ್ನಣೆಯಾಗಿದೆ ಎಂದು ಶಾಸಕ ಡಾ.ಶಾಮನರು ಶಿವಶಂಕರಪ್ಪ ತಿಳಿಸಿದರು.
ನಗರದ ಅಖ್ತರ್ ರಜಾ ವೃತ್ತದ ಸರ್ ಮಿರ್ಜಾ ಇಸ್ಮಾಯಿಲ್ ನಗರದಿಂದ ಮಾಗಾನಹಳ್ಳಿ ರಸ್ತೆವರೆಗೆ ದೂಡಾದಿಂದ 5 ಕೋಟಿ ರು. ವೆಚ್ಚದಲ್ಲಿ 120 ಅಡಿ ಅಗಲದ ವರ್ತುಲ ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಮೂರೂ ಕ್ಷೇತ್ರಗಳ ಫಲಿತಾಂಶವು ಕಾಂಗ್ರೆಸ್‌ನ ಜನಪರ ಆಡಳಿತಕ್ಕೆ ಸಿಕ್ಕ ಬೆಂಬಲವಾಗಿದೆ ಎಂದರು.ಹಲವಾರು ಸುದ್ದಿ ಸಂಸ್ಥೆಗಳು ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತಲಾ ಒಂದೊಂದು ಕ್ಷೇತ್ರ ಗೆಲ್ಲಲಿವೆಯೆಂಬ ಸಮೀಕ್ಷೆ ನೀಡಿದ್ದವು. ಆದರೆ, ಆ ಎಲ್ಲಾ ಸಮೀಕ್ಷೆಗಳು ತಲೆಗೆಳಗಾಗುವಂತೆ, ಸುಳ್ಳಾಗುವಂತಹ ಫಲಿತಾಂಶವನ್ನು ಮೂರೂ ಕ್ಷೇತ್ರದ ಜನರು ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ. ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದ್ದು ಖುಷಿ ತಂದಿದೆ ಎಂದರು.
ದಾವಣಗೆರೆ ವರ್ತುಲ ರಸ್ತೆ ಸಂಪೂರ್ಣ ಅಭಿವೃದ್ಧಿಗಾಗಿ ಈ ಭಾಗದ ರಸ್ತೆಯ ನಿರ್ಮಾಣದ ಅವಶ್ಯಕತೆ ಇತ್ತು. 300 ಮೀಟರ್ ಸಿಸಿ ರಸ್ತೆ, ಎರಡೂ ಬದಿ ಸಿಸಿ ಚರಂಡಿ, ಕವರ್ ಸ್ಲ್ಯಾಬ್ ಮತ್ತು 5 ಕಡೆ ಆರ್‌ಸಿಸಿ ಡೆಕ್ ಸ್ಲ್ಯಾಬ್ ಹಾಗೂ ಎರಡು ಬದಿ 330 ಮೀಟರ್ ಪಾದಚಾರಿ ರಸ್ತೆ ಕಾಮಗಾರಿ ದೂಡಾದಿಂದ ಆಗಲಿದೆ. ಸುಮಾರು 5 ಕೋಟಿ ರು. ವೆಚ್ಚದ ಕಾಮಗಾರಿ ಇದಾಗಿದೆ. ಈ ಮೂಲಕ ಜಿಲ್ಲಾ ಕೇಂದ್ರದ ಅತ್ಯುತ್ತಮ ರಸ್ತೆ ಇದಾಗಲಿದೆ ಎಂದು ತಿಳಿಸಿದರು.ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಮೇಯರ್ ಕೆ.ಚಮನ್ ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ, ದೂಡಾ ಸದಸ್ಯರಾದ ವಾಣಿ ಬಕ್ಕೇಶ ನ್ಯಾಮತಿ, ಎಂ.ಮಂಜುನಾಥ ತಕ್ಕಡಿ, ಜಾಕೀರ್ ಅಲಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಧಾ ಇಟ್ಟಿಗುಡಿ ಮಂಜುನಾಥ, ಸವಿತಾ ಗಣೇಶ ಹುಲ್ಮನಿ, ಆಶಾ ಉಮೇಶ, ಸದಸ್ಯರಾದ ಎ.ಬಿ.ರಹೀಂ, ಕಬೀರ್ ಅಲಿ, ಸುರಭಿ ಎಸ್.ಶಿವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಎಸ್.ಮಲ್ಲಿಕಾರ್ಜುನ, ಕಾಂಗ್ರೆಸ್ ಮುಖಂಡರಾದ ಎಸ್.ಎಲ್.ಆನಂದಪ್ಪ, ದೂಡಾ ಆಯುಕ್ತ ಹುಲ್ಮನಿ ತಿಮ್ಮಣ್ಣ ಮತ್ತಿತರರಿದ್ದರು.