ಸಾರಾಂಶ
ಅಯೋಧ್ಯೆಯಲ್ಲಿನ ಬಾಲರಾಮನನ್ನು ತಿರಸ್ಕರಿಸಿದವರನ್ನು ಕರ್ನಾಟಕದ ಜನತೆ ಎಂದೆಂದಿಗೂ ಒಪ್ಪಿಕೊಳ್ಳಲಾರರು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಶಿರಸಿ: ಕಾಂಗ್ರೆಸ್‌ನ ಮತಬ್ಯಾಂಕ್ ಓಲೈಕೆಯು ವಿಧ್ವಂಸಕ ಚಟುವಟಿಕೆ ನಡೆಸುವವರಿಗೆ ವರದಾನವಾಗಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಶಿರಸಿಯ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.ಬೆಂಗಳೂರಿನ ಬಾಂಬ್ ಸ್ಫೋಟ, ಹುಬ್ಬಳ್ಳಿಯಲ್ಲಿ ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯ ಹತ್ಯೆ ಘಟನೆಗಳು ಇದಕ್ಕೆ ನಿದರ್ಶನ ಎಂದರು.ಅಯೋಧ್ಯೆಯಲ್ಲಿನ ಬಾಲರಾಮನನ್ನು ತಿರಸ್ಕರಿಸಿದವರನ್ನು ಕರ್ನಾಟಕದ ಜನತೆ ಎಂದೆಂದಿಗೂ ಒಪ್ಪಿಕೊಳ್ಳಲಾರರು ಎಂದರು.ಅಯೋಧ್ಯೆಯ ರಾಮಮಂದಿರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಿದ ಅನ್ಸಾರಿ ಕುಟುಂಬ ಕೊನೆಗೆ ರಾಮಮಂದಿರ ಉದ್ಘಾಟನೆಗೆ ಆಗಮಿಸಿದ್ದರು. ಆದರೆ ಕಾಂಗ್ರೆಸ್ಸಿಗರು ಬರಲಿಲ್ಲ ಎಂದು ಟೀಕಿಸಿದರು.ದೇಶ ಸ್ವಾತಂತ್ರ್ಯದ ನಂತರ ರಾಮಮಂದಿರ ನಿರ್ಮಾಣವಾಗಬೇಕಿತ್ತಲ್ಲವೇ? 500 ವರ್ಷದ ಹೋರಾಟ ಸಾಕಾರಗೊಳ್ಳಲು 56 ಇಂಚಿನ ಎದೆಗಾರಿಕೆ ಬೇಕಾಯಿತು ಎಂದರು.ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಕದಂಬ ಅರಸರು ಕನ್ನಡ ನಾಡನ್ನು ಆಳಿದರು. ಅವರ ಕೊಡುಗೆಯನ್ನು ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂತಹ ನೂರಾರು ರಾಜ ವಂಶಗಳು ದೇಶವನ್ನು ಕಟ್ಟಿವೆ. ಆದರೆ ರಾಜವಂಶಸ್ಥರು ದೇಶವನ್ನು ಲೂಟಿ ಮಾಡಿದ್ದಾರೆ ಎಂದು ವ್ಯಂಗ್ಯವಾಡುವುದನ್ನು ಜನರು ಸಹಿಸಲು ಸಾಧ್ಯವೇ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು.ಬೃಹತ್ ಜನಸ್ತೊಮ, ಜನರ ಉತ್ಸಾಹ ನೋಡಿ ಖುಷಿಪಟ್ಟ ಮೋದಿ, ಇದು ಚುನಾವಣೆ ಪ್ರಚಾರ ಸಭೆಯೆ ಅಥವಾ ವಿಜಯೋತ್ಸವ ಸಭೆಯೇ ಎಂದು ಪ್ರಶ್ನಿಸಿ ಜನರ ಜೋಶ್ ಅನ್ನು ಇಮ್ಮಡಿಗೊಳಿಸಿದರು.ಬಿಜೆಪಿಯು ವಿಕಾಸ ಮತ್ತು ವಿನಾಶರಹಿತ ಸರ್ಕಾರದ ಕಲ್ಪನೆಯಲ್ಲಿ ಸಾಗುತ್ತಿದೆ. ಹಾಗಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.ಹದಿನಾರು ವರ್ಷದ ಹಿಂದೆ ಶಿರಸಿಗೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದೆ. ಆಗಲೂ ಜನರು ಆಶೀರ್ವದಿಸಿದ್ದರು. ಈ ಬಾರಿಯೂ ನನ್ನನ್ನು ಇಲ್ಲಿನ ಜನತೆ ನಿರಾಸೆಗೊಳಿಸಲಾರರು ಎಂಬ ವಿಶ್ವಾಸ ಇದೆ ಎಂದು ತಿಳಿಸಿ ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಮತ ಯಾಚಿಸಿದರು.ಬಿಸಿಲಿನಲ್ಲಿ ನಿಂತು ನನಗಾಗಿ ಕಾಯುತ್ತಿದ್ದೀರಿ. ನಿಮ್ಮನ್ನು ಇಷ್ಟು ಸಮಯ ಬಿಸಿಲಲ್ಲಿ ನಿಲ್ಲಿಸಿದ್ದಕ್ಕೆ ಕ್ಷಮೆ ಕೋರುತ್ತೇನೆ. ಆದರೆ ಕಷ್ಟಪಟ್ಟು ನಿಂತ ನಿಮ್ಮ ಶ್ರಮವನ್ನು ನಾವೆಂದಿಗೂ ವ್ಯರ್ಥ ಮಾಡುವುದಿಲ್ಲ. ನಿರಂತರ ಅಭಿವೃದ್ಧಿ ಕೆಲಸದ ಮೂಲಕ ನಿಮ್ಮ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳುವುದಾಗಿ ಕ್ರೀಡಾಂಗಣದ ಇಕ್ಕೆಲಗಳಲ್ಲಿ ಬಿಸಿಲಿನಲ್ಲಿ ನಿಂತು ಭಾಷಣ ಆಲಿಸುತ್ತಿದ್ದವರಿಗೆ ಭರವಸೆ ನೀಡಿದರು.ದಶಕದ ಹಿಂದೆ ದೇಶದ ಮತದಾರರು ನೀಡಿದ ಪ್ರತಿಯೊಂದು ಮತವೂ ದೇಶದಲ್ಲಿ ಪರಿಣಾಮಕಾರಿ ಬದಲಾವಣೆ ತಂದಿದೆ. ಸ್ಥಿರವಾದ ಸರ್ಕಾರ ಇದ್ದರೆ ಜಗತ್ತಿಗೆ ನಮ್ಮ ಬಗ್ಗೆ ಭರವಸೆ ಹುಟ್ಟುತ್ತದೆ. ಪ್ರಧಾನಿಯಾಗಿ ವಿದೇಶಕ್ಕೆ ಹೋದಾಗ ಬಲಿಷ್ಠ ನಾಯಕರನ್ನು ಭೇಟಿಯಾದಾಗ ನಾನು ದೇಶದ 140 ಕೋಟಿ ಜನರು ಬೆನ್ನಿಗಿದ್ದಾರೆ ಎಂಬ ವಿಶ್ವಾಸದೊಂದಿಗೆ ನಡೆಯುತ್ತೇನೆ. ನನ್ನ ಆತ್ಮವಿಶ್ವಾಸ ವಿಶ್ವದ ಬೇರೆ ಬೇರೆ ದೇಶಗಳ ನಾಯಕರನ್ನು ಅಚ್ಚರಿಗೊಳಿಸುತ್ತದೆ ಎಂದರು.ಶಿರಸಿಯ ಅಡಕೆಗೆ ಭೌಗೋಳಿಕ ಗುರುತು(ಜಿಐ ಟ್ಯಾಗ್) ನೀಡಿದ್ದು ಬಿಜೆಪಿ ಸರ್ಕಾರ. ಆಯುಷ್ ವೈದ್ಯ ಪದ್ಧತಿಯನ್ನು ಜಗತ್ತಿನ ಎದುರು ಪರಿಚಯಿಸಿದ್ದು ಬಿಜೆಪಿ ಎಂದು ಪಕ್ಷದ ಸಾಧನೆಯನ್ನು ಬಣ್ಣಿಸಿದರು.ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆಯನ್ನು ನಮ್ಮ ಸರ್ಕಾರ ಸ್ಥಾಪಿಸಿ, ಮತ್ಸ್ಯಸಂಪದದಂತಹ ಜನಪರ ಯೋಜನೆ ಜಾರಿಗೊಳಿಸಿದ್ದೇವೆ. ಮೀನುಗಾರರ ಸಮಗ್ರ ಅಭಿವೃದ್ಧಿಗೆ ನಮ್ಮ ಎನ್‌ಡಿಎ ಸರ್ಕಾರ ಬದ್ಧವಿದೆ ಎಂದರು.ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖಂಡರಾದ ಕೋಟ ಶ್ರೀನಿವಾಸ ಪೂಜಾರಿ, ವಿ. ಸುನೀಲಕುಮಾರ, ರೂಪಾಲಿ ನಾಯ್ಕ ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))