ಗದಗ: ಮಹಿಳಾ ಮೀಸಲಾತಿ ವಿಧೇಯಕವನ್ನು ಸೋಲಿಸಿರುವ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ದೇಶದ ಮಹಿಳೆಯರು ತೀವ್ರ ಆಕ್ರೋಶ ಹೊಂದಿದ್ದು, ಅವರಿಗೆ ಮಹಿಳೆಯರ ಶಾಪ ತಟ್ಟಲಿದೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರಿಗೆ ಸಮಾನ ಹಕ್ಕು, ಪ್ರಾತಿನಿಧ್ಯ ಹೆಚ್ಚಿಸುವ ಮೂಲಕ ರಾಷ್ಟ್ರದಲ್ಲಿ ಮಹಿಳೆಯರ ಶಕ್ತಿಯನ್ನು ಉಪಯೋಗ ಮಾಡಿಕೊಳ್ಳುವ ಕನಸು ಕಂಡಿದ್ದರು. ಆದರೆ, ಮಹಿಳಾ ಮೀಸಲಾತಿ ವಿಧೇಯಕವನ್ನು ಸೋಲಿಸುವ ಮೂಲಕ ಹರ್ಷ ವ್ಯಕ್ತಪಡಿಸಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದರು.ದೇಶದ ಜನಸಂಖ್ಯೆ 140 ಕೋಟಿ ದಾಟುತ್ತಿರುವುದರಿಂದ ಸಂಸದರ ಸಂಖ್ಯೆ ಹೆಚ್ಚಿಸುವುದು ಅನಿವಾರ್ಯವಾಗಿತ್ತು. ಆದರೆ, ಕಾಂಗ್ರೆಸ್ ಹಾಗೂ ಅದರ ಮೈತ್ರಿ ಪಕ್ಷಗಳು ಕ್ಷೇತ್ರ ಮರುವಿಂಗಡಣೆ ಜತೆಗೆ ಮಹಿಳೆಯರಿಗೆ ಸಿಗಬೇಕಿದ್ದ ಶೇ. 33ರಷ್ಟು ಮೀಸಲಾತಿಗೂ ವಿರೋಧ ವ್ಯಕ್ತಪಡಿಸುವ ಮೂಲಕ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಅಲ್ಲದೇ, ತಾಯಂದಿರ ಕನಸನ್ನು ಭಗ್ನಗೊಳಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ಜಾರಿಗೆ ತಂದ ಅನೇಕ ಯೋಜನೆಗಳಿಗೆ ಕಾಂಗ್ರೆಸ್ ಹಾಗೂ ಅದರ ಮೈತ್ರಿ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ ಎಂದು ಪಟ್ಟಿಯನ್ನೇ ಓದಿ ಹೇಳಿದರು.ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ವಿಷಯವನ್ನು ಪ್ರತ್ಯೇಕವಾಗಿ ಪರಿಗಣಿಸಲು ಸಾಧ್ಯವಿಲ್ಲ. ಮಹಿಳಾ ಮೀಸಲಾತಿ ವಿಧೇಯಕವನ್ನು ಸೋಲಿಸುವ ಮೂಲಕ ಮಹಿಳೆಯರ ಜತೆಗೆ ವಿವಿಧ ರಾಜ್ಯಗಳ ಜನರಿಗೂ ಅನ್ಯಾಯವಾಗಿದೆ. ಆದರೆ, ಬಿಜೆಪಿ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲವಾಗಿ ಮಹಿಳಾ ಮೀಸಲಾತಿ ಬಿಲ್ಲನ್ನು ಜಾರಿಗೆ ತರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಿರ್ಮಲಾ ಕೊಳ್ಳಿ, ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ, ವಿಜಯಲಕ್ಷ್ಮಿ ಮಾನ್ವಿ ಸೇರಿ ಅನೇಕ ಮುಖಂಡರು ಇದ್ದರು.